ಸಾರಾಂಶ
ಧಾರವಾಡ:
ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಪರಿಸರ ಮತ್ತು ಜೀವ ವೈವಿಧ್ಯತೆ ಮೇಲೆ ನಡೆಯುತ್ತಿರುವ ನಿರಂತರ ಪ್ರಹಾರ ಮನುಕುಲದ ನಾಶಕ್ಕೆ ದಾರಿ ಮಾಡಿಕೊಟ್ಟಂತೆ ಎಂದು ನೇಚರ್ ಫಸ್ಟ್ ಇಕೋ ವಿಲೇಜ್‌ನ ಸಂಸ್ಥಾಪಕ ಪಿ.ವಿ. ಹಿರೇಮಠ ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಕೋಶ, ಕರ್ನಾಟಕ ಕಲಾ, ವಿಜ್ಞಾನ ಮತ್ತು ಶಿಕ್ಷಣ ಕಾಲೇಜುಗಳ ಏಳು ದಿನಗಳ ಕವಿವಿ ಅಂತರ ಮಹಾವಿದ್ಯಾಲಯಗಳ ಎನ್‌ಎಸ್‌ಎಸ್ ಶಿಬಿರದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟ ಅವರು, ಮನುಕುಲದ ಉಳಿವಿಗಾಗಿ ಎಲ್ಲರೂ ಪರಿಸರ ಉಳಿಸುವತ್ತ ಗಮನ ಹರಿಸಬೇಕು. ಪ್ರಸ್ತುತ ಕೇವಲ ಶೇ. 9.8 ಕಾಡು ಭಾರತದಲ್ಲಿದೆ. ಕಾಡಿನ ನಾಶದಿಂದ ಅನೇಕ ಪ್ರಾಣಿ-ಪಕ್ಷಿಗಳು ಅವಸಾನದ ಅಂಚಿನಲ್ಲಿವೆ. ಭಾರತದಲ್ಲಿ 400 ನದಿಗಳು ವರ್ಷ ಪೂರ್ತಿ ತುಂಬಿ ಹರಿಯುತ್ತಿದ್ದವು. ಹವಾಮಾನದ ಬದಲಾವಣೆಯಿಂದ ಇಂದು ಕೇವಲ 10ರಿಂದ 12 ನದಿಗಳು ಮಾತ್ರ ತುಂಬಿ ಹರಿಯುತ್ತಿವೆ. ಶೇ. 80ರಷ್ಟು ಭಾರತದಲ್ಲಿನ ನದಿ ಬತ್ತಿ ನೀರಿನ ಬರ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಖೇದ ವ್ಯಕ್ತಪಡಿಸಿದರು.
ಈ ಹಿಂದೆ ಪ್ರತಿ ವರ್ಷ 1200 ಮಿಲಿ ಮೀಟರ್ ಮಳೆ ಆಗುತ್ತಿತ್ತು. ಹವಾಮಾನದ ಬದಲಾವಣೆಯಿಂದ ಅದು 400ಕ್ಕೆ ಇಳಿಕೆಯಾಗಿದೆ. ಹೀಗಾಗಿ ಹವಾಮಾನದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು, ಪರಿಸರ ನಾಶದಿಂದ ಅನೇಕ ಹೊಸ ರೀತಿಯ ಕಾಯಿಲೆಯಿಂದ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಮಾನವ ನಿರ್ಮಿತ ಹವಾಮಾನ ಬದಲಾವಣೆ ಮನುಕುಲಕ್ಕೆ ಮಾರಕವಾಗಿದೆ ಎಂದರು.ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಎನ್‌ಎಸ್‌ಎಸ್ ಒಂದು ಮಹತ್ವದ ಯೋಜನೆ ಆಗಿದ್ದು, ಸ್ವಯಂ ಸೇವಕರ ಪಾತ್ರ ಪರಿಸರ ಬೆಳೆಸುವಲ್ಲಿ, ಕಾಪಾಡುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಸ್ವಯಂ ಸೇವಕರು ಸಮಾಜದ ಹಿತ ಕಾಪಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎನ್ನೆಸ್ಸೆಸ್ ಕೋಶದ ಸಂಯೋಜಕ ಡಾ. ಎಂ.ಬಿ. ದಳಪತಿ ಮಾತನಾಡಿ, ಪರಿಸರದ ದಿನಾಚರಣೆ ಅಂಗವಾಗಿ ವಿಶೇಷ ಶಿಬಿರದಲ್ಲಿ 500 ಸಸಿ ನೆಡಲಾಗುತ್ತದೆ. ಪರಿಸರದ ಮಹತ್ವವನ್ನು ಯುವ ಪೀಳಿಗೆಗೆ ನೀಡುವ ಉದ್ದೇಶದಿಂದ ಪ್ರತಿಯೊಬ್ಬರಿಗೂ ಸಸಿ ದತ್ತು ನೀಡಲಾಗುತ್ತದೆ ಎಂದರು.ಕವಿವಿ ಪ್ರಭಾರ ಕುಲಸಚಿವ ಡಾ. ರಾಜೇಂದ್ರ ನಾಯಕ, ಮೌಲ್ಯಮಾಪನ ಕುಲಸಚಿವರಾದ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಸಲೀಮಾ ಕೊಳೂರ, ಡಾ. ಎಸ್.ಎಸ್. ಮಂಗಳವೇಡಿ, ಡಾ. ಜ್ಯೋತಿ ದೊಡ್ಡಮನಿ, ಡಾ. ಎನ್.ಎಸ್. ತಳವಾರ, ಡಾ. ಭಾಗ್ಯ ಮೇಟಿ ಇದ್ದರು.