ಸಾರಾಂಶ
ಚಿಕ್ಕಮಗಳೂರು: ಜಿಲ್ಲೆಯ ಕೆಲವೆಡೆ ಸಾಧಾರಣವಾಗಿ ಕಂಡು ಬಂದಿದ್ದ ಮುಂಗಾರು ಮಳೆ ಬುಧವಾರ ಬೆಳಿಗ್ಗೆಯಿಂದ ಮಲೆನಾಡಿನಲ್ಲಿ ಚುರುಕುಗೊಂಡಿತ್ತು.ಅಜ್ಜಂಪುರ, ತರೀಕೆರೆ ಹಾಗೂ ಕಡೂರು ತಾಲೂಕುಗಳು ಹೊರತು ಪಡಿಸಿ ಇನ್ನುಳಿದಂತೆ ಮಲೆನಾಡಿನ ಎಲ್ಲಾ ತಾಲೂಕು ಗಳಲ್ಲಿ ಬಿಡುವಿಲ್ಲದೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆ ಬಂದಿತು.ಕಳಸ- ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದ ಬಳಿ ಗಾಳಿಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಇದರಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.ಚಿಕ್ಕಮಗಳೂರು ತಾಲೂಕಿನಲ್ಲಿ ಬೆಳಿಗ್ಗೆಯಿಂದಲೇ ಮಳೆ ಆರಂಭವಾಗಿದ್ದು, ಮಧ್ಯಾಹ್ನ ಕೆಲ ಸಮಯ ಬಿಡುವು ನೀಡಿ ನಂತರ ಮತ್ತೆ ಮುಂದುವರೆದಿತ್ತು. ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ ಬಿಡುವಿಲ್ಲದೆ ಮಳೆ ಬರುತ್ತಲೇ ಇತ್ತು. ಎನ್.ಆರ್.ಪುರ ತಾಲೂಕಿನಲ್ಲಿ ತುಂತುರು ಮಳೆ ಬರುತ್ತಿತ್ತು.ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ಹಾಗೂ ಕಳಸ ತಾಲೂಕುಗಳಲ್ಲಿ ವಾಡಿಕೆ ಗಿಂತಲೂ ಕಡಿಮೆ ಮಳೆ ಬಂದಿದೆ. ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ ಹಾಗೂ ಶೃಂಗೇರಿಯಲ್ಲಿ ವಾಡಿಕೆಗೂ ಮೀರಿ ಮಳೆ ಬಂದಿದೆ.
--- ಬಾಕ್ಸ್--ಶೃಂಗೇರಿ ಮಳೆ ಗಾಳಿ ಆರ್ಭಟ, ತುಂಬಿ ಹರಿಯುತ್ತಿರುವ ತುಂಗೆ
ಶೃಂಗೇರಿ: ತಾಲೂಕಿನಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ಬುಧವಾರ ಪಟ್ಟಣ ಸಹಿತ ಗ್ರಾಮೀಣ ಪ್ರದೇಶದೆಲ್ಲೆಡೆ ಗಾಳಿ ಸಹಿತ ಮಳೆ ಆರ್ಭಟಿಸಿತು.ಮಂಗಳವಾರ ಅಬ್ಬರಿಸಲಾರಂಭಿಸಿದ ಮಳೆ ರಾತ್ರಿ ಎಡಬಿಡದೆ ಸುರಿಯಿತು. ಬುಧವಾರವೂ ಮುಂದುವರೆಯಿತು. ಗಾಳಿಯ ಆರ್ಭಟಕ್ಕೆ ಮರಗಳು ಧರೆಗುರುಳುತ್ತಿವೆ. ಹಳ್ಳ, ಕಾಲುವೆಗಳಲ್ಲಿ, ಕಿರುನದಿಗಳಲ್ಲಿ ನೀರು ತುಂಬಿದ್ದು, ತುಂಗಾನದಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಸಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ.
ಕಳೆದೆರೆಡು ದಿನಗಳಿಂದ ಬಿಡುವಿಲ್ಲದೇ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ. ವಾಡಿಕೆಯಂತೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಳೆಯಾಗುತ್ತಿದ್ದು, ಮೇ ತಿಂಗಳಿನಿಂದಲೇ ಮಳೆ ಬೀಳಲಾರಂಭಿಸಿದೆ. ಮೇ ತಿಂಗಳ ಎರಟನೇ ವಾರದಿಂದ ಹೆಚ್ಚು ಮಳೆಯಾಗಿದೆ. ಬುಧವಾರ ಹಗಲಿಡೀ ಭಾರೀ ಮಳೆ ಸುರಿಯಿತು.26 ಶ್ರೀ ಚಿತ್ರ 1-
ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ತುಂಬಿ ಹರಿಯುತ್ತಿರುವ ತುಂಗಾ ನದಿ