ಪ್ರತಿಷ್ಠಿತ ಎಸ್ಬಿಆರ್ ಪಿಯು ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ಮೂಡಿತ್ತು. ನೀಟ್, ಪಿಯುಸಿ, ಜೆಇಇ , ಸಿಇಟಿ ಸೇರಿದಂತೆ ವಿವಿಧ ಪರೀಕ್ಷೆಗಳ ಟಾಪರ್ ಗಳನ್ನು ಸೇರಿಸಿ ಪಾರಿತೋಷಕ ನೀಡಿ ಸನ್ಮಾನಿಸಲು ವೇದಿಕೆ ಸಜ್ಜಾಗಿತ್ತು. ಪೋಷಕರು, ಪ್ರತಿಭೆಗಳ ಸಮಾಗಮದಿಂದಾಗಿ ಶಾಲೆಯಂಗಳದಲ್ಲಿ ಸಂಭ್ರಮ ಕಳೆಗಟ್ಟಿತ್ತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರತಿಷ್ಠಿತ ಎಸ್ಬಿಆರ್ ಪಿಯು ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ಮೂಡಿತ್ತು. ನೀಟ್, ಪಿಯುಸಿ, ಜೆಇಇ , ಸಿಇಟಿ ಸೇರಿದಂತೆ ವಿವಿಧ ಪರೀಕ್ಷೆಗಳ ಟಾಪರ್ ಗಳನ್ನು ಸೇರಿಸಿ ಪಾರಿತೋಷಕ ನೀಡಿ ಸನ್ಮಾನಿಸಲು ವೇದಿಕೆ ಸಜ್ಜಾಗಿತ್ತು. ಪೋಷಕರು, ಪ್ರತಿಭೆಗಳ ಸಮಾಗಮದಿಂದಾಗಿ ಶಾಲೆಯಂಗಳದಲ್ಲಿ ಸಂಭ್ರಮ ಕಳೆಗಟ್ಟಿತ್ತು.ಶರಣಬಸವೇಶ್ವರ ವಿದ್ಯಾವರ್ಧ ಸಂಘದ ಪ್ರತಿಷ್ಠಿತ ಶರಣಬಸವೇಶ್ವರ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆ ಎಸ್ಬಿಆರ್ ಸಾಧನೆ ಅಲ್ಲಿನ ಪ್ರತಿಭೆಗಳಿಂದಾಗಿ ಶರವೇಗ ಬಂದಿದೆ, ದೇಶ- ವಿದೇಶಗಳಲ್ಲೂ ಎಸ್ಬಿಆರ್ ಘಮ ಹರಡಿದೆ, ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರೋ ಎಸ್ಬಿಆರ್ ಸಾಧನೆ ಹಸಿರಾಗಲಿ ಎಂದು ಎಸ್ಬಿಆರ್ ಮಿನಿ ಕಾನ್ವೋಕೇಷನ್ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು ಮೆಚ್ಚುಗೆ ಮಾತುಗಳನ್ನಾಡಿ ಪ್ರತಿಭೆಗಳ ಬೆನ್ನು ತಟ್ಟಿದರು.
2026ನೇ ಸಾಲಿನ ನೀಟ್, ಐಐಟಿ, ಪಿಯು ಬೋರ್ಡ್ ಪರೀಕ್ಷೆಗಳಲ್ಲಿ ಟಾಪರ್ ಆದ 170 ವಿದ್ಯಾರ್ಥಿಗಳಿಗೆ ಮಿನಿ ಘಟಿಕೋತ್ಸವದ ಮೂಲಕ ಸನ್ಮಾನ ಹಾಗೂ ನಗದು ಬಹುಮಾನ ವಿತರಿಸುವ ಕಾರ್ಯಕ್ರಮ ಇದಾಗಿತ್ತು.ನೀಟ್ ಟಾಪರ್‌ಗಳಾದ ಸಂಪತ್ ಕುಮಾರ, ಸಿಮ್ರನ್ ಬಾನು, ಚೆನ್ನಬಸವ, ನವೀನ್, ಅರ್ಣವ್ ಸೇರಿದಂತೆ 14 ಟಾಪರ್‌ಗಳು, ಪಿಯುಸಿ ಟಾಪರ್‌ಗಳಾದ ಸಿಮ್ರನ್ ಬಾನು, ಗೌತಮ್, ಕ್ಷಿತಿ, ಸಹನಾ, ವೆಂಕಟೇಶ್ ಸೇರಿದಂತೆ 2026ನೇ ಸಾಲಿನ ನೀಟ್, ಐಐಟಿ ಹಾಗೂ ಪಿಯು ಬೋರ್ಡ್ ಪರೀಕ್ಷೆಗಳಲ್ಲಿ ಟಾಪರ್ ಆದ 170 ವಿದ್ಯಾರ್ಥಿಗಳಿಗೆ ನಗದು, ಪಾರಿತೋಷಕ ವಿತರಿಸಲಾಯಿತು.
ಎಸ್ಬಿಆರ್ ಅಲುಮ್ನಿ ಹಾಗೂ ಯಾದಗಿರಿ ಯಿಮ್ಸ್ ನಿರ್ದೇಶಕ ಡಾ. ಸಂದೀಪ ಹರ್ಷಿಣಿ , ನೀವೆಲ್ಲರೂ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಸಾಧಕರೇ ಮುಂದಿನ ದೇಶ ಮುನ್ನಡೆಸುವ ಸೈನಿಕರಾಗಿದ್ದಾರೆ. ಗುರಿ ತಲುಪಲು ಹಿಂಜರಿಕೆ, ಕೀಳರಿಮೆ ಇಟ್ಟುಕೊಳ್ಳದೆ ಸಕಾರಾತ್ಮಕ ಚಿಂತನೆಗಳೊಂದಿಗೆ ಸಾಗುವಂತೆ ಕಿವಿಮಾತು ಹೇಳಿದರು.ಇನ್ನೋರ್ವ ಅಲುಮ್ನಿ , ಎಐಎಸ್ ಪ್ರೋಬೇಷ್ನರಿ ಐಎಎಸ್ ಅಧಿಕಾರಿ ನಿವೇದಿತಾ ಮಾತನಾಡಿ ಪಾಲಕರು ಜತೆ ಮುಕ್ತವಾಗಿ ಮಾತನಾಡಬೇಕು. ಸಾಮಾಜಿಕ ಮಾನಸಿಕ ಸಮಸ್ಯೆ ಗಳಿಂದ ಆತಂಕ, ಭಯದಿಂದ ಬದುಕಬಾರದು. ಏನೇ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಹಂಚಿಕೆ ಕೊಳ್ಳಬೇಕು. ಪಾಲಕರು ನೈಜ ಸ್ನೇಹಿತರು ಎಂದರಲ್ಲದೆ ಕಂಫರ್ಟ್ ಝೋನ್‌ನಿಂದ ಹೊರಬಂದು ಸಾಧನೆ ಮಾಡುವಂತೆ ಕರೆ ನೀಡಿದರು.
ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಎಸ್ ಬಿಆರ್ ವಿದ್ಯಾರ್ಥಿಗಳು ರಾಜ್ಯ ಅಷ್ಟೇ ಅಲ್ಲ, ದೇಶದ ಮೂಲೆಮೂಲೆಗಳಲ್ಲಿ ಕಾಣಿಸುತ್ತಾರೆ. ಪ್ರತಿವರ್ಷ ೪೦೦-೫೦೦ ವಿದ್ಯಾರ್ಥಿಗಳು ಮೆಡಿಕಲ್ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಎಸ್ಬಿಆರ್‌ನಲ್ಲಿ ವಿದ್ಯಾಭ್ಯಾಸ ಜತೆಗೆ ಸಂಸ್ಕಾರ, ಶಿಸ್ತು ಬೋಧಿಸಲಾಗುತ್ತದೆ. ಪಿಯುಸಿ ಮಹತ್ವದ ಘಟ್ಟ, ಪಾಲಕರ ತ್ಯಾಗ, ಶ್ರಮ ಮರೆಯಬಾರದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಪ್ರಾಚಾರ್ಯ ಎನ್. ಎಸ್. ದೇವರಕಲ್ ಮಾರ್ಗದರ್ಶನದಲ್ಲಿ ನಡೆದ ಮಿನಿ ಘಟಿಕೋತ್ಸವದಲ್ಲಿ ಡಾ. ಶ್ರೀಶೈಲ ಹೊಗಾಡೆ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು. ಪ್ರತಿಭಾವಂತರಿಗೆ ವೇದಿಕೆಗೆ ಕರೆತರಲು ಎನ್‌ಸಿಸಿ ಕೆಡೆಟ್ಟುಗಳಿಂದ ನಡೆಸಿದ ಭವ್ಯ ಮೆರವಣಿಗೆ ಗಮನ ಸೆಳೆಯಿತು.
ಎಸ್ಬಿಆರ್‌ನಿಂದ 6, 500 ಕ್ಕೂ ಅಧಿಕ ವೈದ್ಯರು, 17 ಸಾವಿರ ಟೆಕ್ನೋಕ್ರಾಟ್ಸ್, 15 ಕ್ಕೂ ಹೆಚ್ಚು ಐಎಎಸ್, ಐಪಿಎಸ್, 20 ಕ್ಕೂ ಹೆಚ್ಚು ರಕ್ಷಣಾ ಅಧಿಕಾರಿಗಳು, 20 ಕ್ಕೂ ಹೆಚ್ಚು ಕಾನೂನು ರಂಗದಲ್ಲಿ ಕೆಲಸದಲ್ಲಿರೋ ಸಂಗತಿಗಳನ್ನು ಘೋಷಿಸಿದಾಗ ಸೇರಿದ್ದ ಗಣ್ಯರು, ಪೋಷಕರು ಕರತಾಡನ ಮಾಡಿದರು.ನೀಟ್ ಮರು ಪರೀಕ್ಷೆಯಿಂದ ತುಂಬಾ ದುಃಖವಾಗಿದೆ. ಎಲ್ಲರ ಪ್ರೇರಣೆ ಹಾಗೂ ಸ್ಫೂರ್ತಿಯಿಂದ ಅತಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ಪಾಲಕರು ಒತ್ತಡ ಹಾಕಬಾರದು. ಒಳ್ಳೆಯ ವಿಚಾರ ಅಷ್ಟೇ ಕೇಳಬೇಕು. ನಕಾರಾತ್ಮಕ ಅಂಶಗಳಿಗೆ ಬೆಲೆ ಕೊಡಬೇಡಿ. ನಿಶ್ವಿಂತರಾಗಿರಿ. ಎಲ್ಲರ ಪರಿಶ್ರಮದಿಂದ ಸಾಧನೆ ಆಗಿದೆ ಎಂದು ಎಸ್ಬಿಆರ್ ನೀಟ್ ಟಾಪ್ಪರ್ ಚೆನ್ನಬಸು ಹೇಳಿದರು.
ತಾಳ್ಮೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಕಳಕಳಿ ಮನೋಭಾವ ಬೆಳೆಸಿಕೊಂಡೆವು. ಕೇವಲ ಅಂಕಗಳಿಸುವುದೇ ನಮ್ಮ ಗುರಿಯಾಗಿರಲಿಲ್ಲ. ಎಸ್ಬಿಆರ್ ಉಪನ್ಯಾಸಕರು ಕಾಲೇಜಿನ ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯ ಅರ್ಥ ಮಾಡಿಕೊಂಡು ಬೋಧಿಸಿದರು. ಹೀಗಾಗಿ ನಮಗೆ ಸಾಧನೆ ಮಾಡಲು ಅನುಕೂಲವಾಯ್ತು ಎಂದು ಎಸ್ಬಿಆರ್ ನೀಟ್ ಟಾಪ್ಪರ್ ಸಿಮ್ರಾನ ಬಾನು ಹೇಳಿದರು.