ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಕ್ಷಣ ಹಾಗೂ ಕ್ರೀಡೆಯನ್ನು ಅಳವಡಿಸಿಕೊಂಡರೆ ಜೀವನದ ಗುರಿ ತಲುಪಲು ಸಾಧ್ಯ ಎಂದು ಎಸ್.ಜಿ.ಆರ್. ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಎಚ್. ಆರ್. ಸುರೇಶ್ ತಿಳಿಸಿದರು.೨೦೨೫- ೨೬ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಎಸ್.ಜಿ.ಆರ್ ಪದವಿ ಪೂರ್ವ ಕಾಲೇಜಿನ ಸಂಯುಕ್ತಾ ಆಶ್ರಯದಲ್ಲಿ ಬೇಲೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಹಳೇಬೀಡಿನ ಸರ್ಕಾರಿ ಕೆಪಿಎಸ್ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು- ಗೆಲುವನ್ನು ಸಮಾನತೆಯಿಂದ ನೋಡಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಮೊದಲು ಮೆಟ್ಟಲು ಹತ್ತಿದ ನಂತರ ಎರಡನೇ ಮೆಟ್ಟಿಲು ಹತ್ತುವುದು ಸಾಧ್ಯ ಹಾಗೂ ಸೋಲಿನಿಂದ ಗೆಲುವು ಸಾಧ್ಯ. ಸೋತರೆ ಕುಗ್ಗುವುದು ಬೇಡ, ಗೆದ್ದರೆ ಹಿಗ್ಗುವುದು ಬೇಡ ಎಂದು ತಿಳಿಸಿದರು.
ಉಪನ್ಯಾಸಕರ ಸಂಘದ ಅಧ್ಯಕ್ಷ ಗಣೇಶ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ೧೬ ಕಾಲೇಜಿನಿಂದ ಒಟ್ಟು ೧೦೦೦ ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಸಿಕ್ಕಿದ ಅವಕಾಶದಲ್ಲಿ ಗೆದ್ದು ಸಾಧನೆ ಮಾಡಬೇಕು, ಸೋತರೆ ಬೇಸರವಾಗದೆ ಗೆಲುವಿನ ಗುರಿ ತಲುಪಬೇಕು ಎಂದು ತಿಳಿಸಿದರು.ಕೆ. ಬಿ. ಹಾಳ್ ಕೃಷಿ ಪತ್ತಿನ ಅಧ್ಯಕ್ಷ ದಯನಂದ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರೀಡೆಗೆ ಹೆಚ್ಚು ಮಹತ್ವ ನೀಡಿದರೆ ದೇಶ ಅಭಿವೃದ್ಧಿಯಾಗುತ್ತದೆ. ರಾಜ್ಯ ಸರ್ಕಾರ ಗ್ರಾಮಾಂತರ ಮಟ್ಟದಿಂದ ಜಿಲ್ಲಾ, ರಾಜ್ಯ ಮಟ್ಟದವರಿಗೆ ಎಲ್ಲಾ ಶಾಲೆಗಳಿಗೆ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡರೆ ದೇಶ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.
ಬೇಲೂರು ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಹಳೇಬೀಡು ರಘುನಾಥ್ ಮಾತನಾಡಿ, ಸೋಲು- ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸೋಲಿನಿಂದ ಸವಾಲನ್ನು ಸ್ವೀಕರಿಸಿ ಗೆಲ್ಲುವ ತನಕ ಗುರಿಯನ್ನು ಬಿಡಬಾರದು. ಕ್ರೀಡಾಕೂಟದಲ್ಲಿ ನಿಮ್ಮ ಸಮಯ, ನಿಬಂಧನೆಗಳನ್ನು ಬಳಸಿ ಆಟವಾಡಬೇಕು ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಾ ವೆಂಕಟೇಶ್, ಎಸ್ ಜಿ ಆರ್ ಕಾಲೇಜಿನ ಖಜಾಂಚಿ ಮಂಜುಳಾ ಸುರೇಶ್, ಪ್ರಾಂಶುಪಾಲರಾದ ವಿನುತ , ಹರೀಶ್, ಪ್ರಭಾರಿ ಉಪಪ್ರಾಂಶುಪಾಲ ಮೋಹನರಾಜು, ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಕರು ಮಕ್ಕಳಿಗೆ ಕ್ರೀಡೆಯ ಶುಭಾಶಯಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶೃತಿ, ನಿರೂಪಣೆಯನ್ನು ಉಪನ್ಯಾಸಕ ಸುರೇಶ್, ವಂದನಾರ್ಪಣೆ ಮಮತಾ ನಡೆಸಿಕೊಟ್ಟರು.