ಹುಬ್ಬಳ್ಳಿ: ಜೀವನದಲ್ಲಿ ಕಷ್ಟ- ಸುಖಗಳು ಬರುವುದು ಸಾಮಾನ್ಯ, ಸುಖ ಬಂದಾಗ ಹಿಗ್ಗದೆ, ಕಷ್ಟಗಳು ಬಂದಾಗ ಕುಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಿ ದೇವರ ಮೊರೆ ಹೋಗಬೇಕು ಎಂದು ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಅವರು ಶನಿವಾರ ಹಳೇಹುಬ್ಬಳ್ಳಿಯ ಅರವಿಂದ ನಗರದಲ್ಲಿರುವ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಹುಲಿಗೆಮ್ಮ ದೇವಿ ದೇವಸ್ಥಾನದ ಎಲ್ಲ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಬಂದಿರುವುದು ಅಭಿನಂದನಾರ್ಹ. ಡಾ. ಹುಲಿಗೆಮ್ಮ ಪೋಸಾ ಅಮ್ಮನವರ ಅವಿರತ ಪರಿಶ್ರಮ ಮತ್ತು ಸೇವಾಮನೋಭಾವ ನಂಬಿ ಬಂದ ಭಕ್ತರಿಗೆ ಶ್ರೀರಕ್ಷೆಯಾಗಿದೆ ಎಂದರು.

ದೇವಸ್ಥಾನದ ಧರ್ಮದರ್ಶಿ ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರ ಸಾನ್ನಿಧ್ಯದಲ್ಲಿ 5 ಜನ ಮುತ್ತೈದೆಯರೊಂದಿಗೆ ಮೇಯರ್‌ ಜ್ಯೋತಿ ಪಾಟೀಲ ಕಂಕಣಧಾರಣೆ ಗೈದರು. ಬಳಿಕ ಯು.ಕೆ. ದಿವ್ಯಶ್ರೀ ಭರತನಾಟ್ಯ ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಸುರೇಶ ಪೂಜಾರಿ, ಎಚ್.ಪಿ. ಧೂಪದ, ವಿಠ್ಠಲ ಏಕಬೋಟೆ, ಗುರು ಬನ್ನಿಕೊಪ್ಪ, ನಾಗರಾಜ ಕತ್ರಿಮಲ್, ನಾರಾಯಣಸಿಂಗ್ ರಜಪೂತ, ಬಸವಂತಪ್ಪ ಅನವಾಲ, ನಾಗೇಶ್ ಡೊಂಗರೆ, ಯಲ್ಲಪ್ಪ ಕೋಸಗಿ, ಶಿವರಾಜ ಪುಸಲೂರ, ಶ್ರೀಧರ ಕೋಪರ್ಡೆ, ಅನುಪಮಾ ಅಕ್ಕೂರ, ಶ್ರೀದೇವಿ ಧೂಪದ, ಶೈಲಜಾ ಹಳ್ಳಿಕೇರಿ, ಪದ್ಮಾ ದಿವಟೆ, ಲತಾ ಹಳ್ಳಿಕೇರಿ, ಕೋಮಲ ಮುಗಳೆ, ಪೂರ್ಣಿಮಾ ಕ್ಷೀರಸಾಗರ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಇದ್ದರು. ಗುರು ಬನ್ನಿಕೊಪ್ಪ ನಿರೂಪಿಸಿ, ವಂದಿಸಿದರು.ವಿವಿಧ ಧಾರ್ಮಿಕ ಕಾರ್ಯಕ್ರಮ


ಮೇ 3 ರಿಂದ 13ರ ವರೆಗೆ ಲಕ್ಷ್ಮೀ ಸೋಬಾನ, ಲಲಿತ ಸಹಸ್ರ ನಾಮಾವಳಿ ಪಠಣ, ಶ್ರೀ ದುರ್ಗಾ ಸಪ್ತಶತಿ ಪಾರಾಯಣ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮೇ 14ರಂದು ಬ್ರಾಹ್ಮೀ ಮುಹೂರ್ತದಲ್ಲಿ ದೇವಿಯವರಿಗೆ 9 ನವವಿಧ ಸ್ನಾನಗಳು, ಮಹಾಭಿಷೇಕ ನಂತರ ಬೆಳಗ್ಗೆ 8ಕ್ಕೆ ಪಲ್ಲಕ್ಕಿ ಉತ್ಸವ ಮೆರವಣಿಗೆ, 11ಕ್ಕೆ ಸಮಾರೋಪ ಸಮಾರಂಭ, ಮಧ್ಯಾಹ್ನ 1 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗುವುದು.