ಸಾರಾಂಶ
ಧಾರವಾಡ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 5ನೇ ಜನತಾದರ್ಶನದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 111 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಾರ್ವಜನಿಕರ ಅಹವಾಲುಗಳನ್ನು ಸ್ಚೀಕರಿಸಿ ಶೀಘ್ರವಾಗಿ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.ಸಾರ್ವಜನಿಕರು ಪದೇ ಪದೇ ಇಲಾಖೆಗೆ ಅಲೆದಾಡಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅವರ ಅರ್ಜಿಗಳಲ್ಲಿಯೇ ಸಮಸ್ಯೆ ಇದ್ದರೆ ಕೂಡಲೇ ಸರಿಪಡಿಸಿ ಅವರ ಸಮಸ್ಯೆಗಳಿಗೆ ಪರಹಾರ ಒದಗಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡಬೇಕು. ಅಂದಾಗ ಇಂತಹ ಜನತಾ ದರ್ಶನದಲ್ಲಿ ಅರ್ಜಿಗಳ ಸಂಖ್ಯೆ ಕಡಿಮೆ ಆಗಲಿದೆ. ಮೊದಲ ಜನತಾ ದರ್ಶನಕ್ಕೆ ಹೋಲಿಸಿದರೆ 4ನೇ ಕಾರ್ಯಕ್ರಮದಲ್ಲಿ ಅರ್ಜಿಗಳ ಸಂಖ್ಯೆ ತಗ್ಗಿರುವುದು ಉತ್ತಮ ಬೆಳವಣಿಗೆ ಎಂದ ಸಚಿವರು, ಫೆಬ್ರುವರಿ ತಿಂಗಳಲ್ಲಿ ಮೊದಲಿಗೆ ಕುಂದಗೋಳದಲ್ಲಿ ನಂತರ ವಿವಿಧ ತಾಲೂಕುಗಳಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಕ್ರಮ ಆಯೋಜಿಸಿದ್ದು ಅಧಿಕಾರಿಗಳು ಫಲಾನುಭವಿಗಳನ್ನು ಸೇರಿಸಿ ಸಭೆ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿ ಮಾಡಲು ಸೂಚಿಸಿದರು.
ಹೆಸ್ಕಾಂ 2, ಗೃಹ ಇಲಾಖೆ 3, ಅರಣ್ಯ ಇಲಾಖೆ 1, ಸಮಾಜ ಕಲ್ಯಾಣ ಇಲಾಖೆ 2, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 5, ಕಾರ್ಮಿಕ ಇಲಾಖೆ 12, ಶಾಲಾ ಶಿಕ್ಷಣ ಇಲಾಖೆ 4, ಆರೋಗ್ಯ ಇಲಾಖೆ 3, ಸಾರಿಗೆ ಇಲಾಖೆ 1, ಮಹಿಳಾ ಮತ್ತು ಮಕ್ಜಳ ಅಭಿವೃದ್ಧಿ ಇಲಾಖೆ 2, ಕಂದಾಯ ಇಲಾಖೆ 26, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ 31, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 17 ಸೇರಿದಂತೆ ಒಟ್ಟು 111 ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು. ಅಹವಾಲುಗಳನ್ನು ಪರಿಶೀಲಿಸಿ ಕಾಲ ಮಿತಿಯಲ್ಲಿ ಪರಿಹರಿಸುವಂತೆ ಸಚಿವರು ಸೂಚಿಸಿದರು.ಜಿಲ್ಲಾಧಿಕಾರಿ ದಿವ್ಯಪ್ರಭು, ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪಾ ಟಿ.ಕೆ., ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಇದ್ದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನಿಗಮ ಮಂಡಳಿಯ ಜಿಲ್ಲಾ ವ್ಯವಸ್ಥಾಪಕರು, ತಹಶಿಲ್ದಾರರು ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.