ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಖಾಲಿ ಬಿದ್ದಿರುವ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿ ಸ್ವಚ್ಛಗೊಳಿಸಬೇಕು, ಉದ್ಯಾನವನಗಳನ್ನು ನಿರ್ವಹಿಸಿ, ವಾಯುವಿಹಾರಿಗಳಿಗೆ ಪೂರಕ ವಾತಾವರಣ ನಿರ್ಮಿಸುವಂತೆ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಧಿಕಾರಿಗಳಿಗೆ ಸೂಚಿಸಿದರು.ನಗರ ಪಾಲಿಕೆ 62ನೇ ವಾರ್ಡಿನ ಜೆ.ಪಿ. ನಗರದ ವಿವಿಧ ಬಡಾವಣೆಗಳಲ್ಲಿ ಮಂಗಳವಾರ ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು.
ಬಡಾವಣೆಯ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ಹಾವುಗಳು ಸೇರಿಕೊಂಡಿದೆ. ನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.ಬಡಾವಣೆಯ ಎಫ್- ಬ್ಲಾಕ್ ನಲ್ಲಿ ಮೂರು ಪಾರ್ಕ್ ಗಳಿದ್ದು, ವಾಯುವಿಹಾರಿಗಳಿಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ವಾಯು ವಿಹಾರಕ್ಕೆ ಬೇಕಾದ ಇಂಟರ್ ಲಾಕ್ ವ್ಯವಸ್ಥೆ, ಮಕ್ಕಳಿಗೆ ಬೇಕಾದ ಮನರಂಜನಾ ವಸ್ತುಗಳ ಅಳವಡಿಸುವಂತೆ ಕೋರಿದರು.
17ನೇ ಮೇನ್ ನಿಂದ ಮುಖ್ಯರಸ್ತೆಗೆ ಯುಜಿಡಿ ಸಂಪರ್ಕ ಕೆಟ್ಟಿದ್ದು, ಆಗಿಂದಾಗ್ಗೆ ಸಮಸ್ಯೆಯಾಗುತ್ತಿದೆ. ಮಳೆ ಬಂದಾಗ ಮ್ಯಾನ್ ಹೋಲ್ ನಿಂದ ಗಲೀಜು ನೀರು ರಸ್ತೆಯಲ್ಲಿ ಹರಿಯುವ ಕಾರಣ ಕ್ರಮಕೈಗೊಳ್ಳುವಂತೆ ಶಾಸಕರಲ್ಲಿ ಕೋರಿದರು.ಈ ವೇಳೆ ನಗರ ಪಾಲಿಕೆ ಎಂಜಿನಿಯರ್ ಮಾತನಾಡಿ, ಈ ಮಾರ್ಗದ ಯುಜಿಡಿ ಲೈನ್ ಬದಲಿಸಲು 60 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಕೂಡಲೇ ಅನುಮತಿ ನೀಡಿದರೆ ಕಾಮಗಾರಿ ಆರಂಭಿಸುವುದಾಗಿ ಅವರು ಹೇಳಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ಕೆಡಿಪಿ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಯುಜಿಡಿ ಸಮಸ್ಯೆ ಇಲ್ಲದಂತೆ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.ಖಾಲಿ ನಿವೇಶನ ಗುರುತು ಮಾಡಿ ಒಂದು ವಾರದೊಳಗೆ ಸ್ವಚ್ಛಗೊಳಿಸಬೇಕು. ಮಾಲೀಕರು ಇಲ್ಲದೆ ಇದ್ದರೂ ನಗರ ಪಾಲಿಕೆ ಸಿಬ್ಬಂದಿಯೇ ನಿಂತು ಸ್ವಚ್ಛಗೊಳಿಸಬೇಕು. ಮಳೆಗಾಲದಲ್ಲಿ ನೀರು ಹರಿದು ಹಾವುಗಳು ಮನೆಗೆ ಸೇರುವ ಸಾಧ್ಯತೆ ಇದೆ. ಕೂಡಲೇ ಗಿಡಗಂಟಿ ತೆಗೆಯಬೇಕು ಎಂದು ಅವರು ಹೇಳಿದರು.
ಎಂಡಿಎ ಪಾರ್ಕ್ ಗಳಲ್ಲಿ ನಿರ್ವಹಣೆ ಮಾಡುವುದಕ್ಕೆ ಯಾರೂ ಮುಂದಾಗುತ್ತಿಲ್ಲ. ಕೆಲವರು ಪಾರ್ಕ್ ಜಾಗವನ್ನೇ ನಮ್ಮದೆಂದು ಹೇಳುತ್ತಿದ್ದಾರೆ. ಇದರ ಬಗ್ಗೆ ದಾಖಲೆ ಪರಿಶೀಲಿಸಿ ಉದ್ಯಾನದ ಜಾಗ ರಕ್ಷಿಸಬೇಕು ಎಂದು ಶಾಸಕರಲ್ಲಿ ಕೋರಿದರು.ಕೂಡಲೇ ಎಂಡಿಎ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಪಾರ್ಕ್ ಜಾಗವು ಎಂಡಿಎಗೆ ಸೇರಿದೆಯೋ, ಇಲ್ಲವೋ ಎನ್ನುವುದನ್ನು ಪರಿಶೀಲಿಸಬೇಕು. ಎಂಡಿಎ ಉದ್ಯಾನವನ ಆಗಿದ್ದರೆ ಬೋರ್ಡ್ ಹಾಕಬೇಕು ಎಂದು ಹೇಳಿದರು. ನಗರ ಪಾಲಿಕೆ ಮಾಜಿ ಸದಸ್ಯರಾದ ಶಾಂತಮ್ಮ, ಮುಖಂಡ ಎಂ. ವಡಿವೇಲು, ದೇವರಾಜೇಗೌಡ ಮೊದಲಾದವರು ಇದ್ದರು.
ನಗರ ನಗರ ಪಾಲಿಕೆಯ 62ನೇ ವಾರ್ಡಿನ ಜೆ.ಪಿ.ನಗರದ ವಿವಿಧ ಬಡಾವಣೆಗಳಲ್ಲಿ ಮಂಗಳವಾರ ಶಾಸಕ ಟಿ.ಎಸ್. ಶ್ರೀವತ್ಸ ಅವರು ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು.