ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದು, ತಂದೆ ಹಾಗೂ ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಸಾರಿಗೆ ಸಂಸ್ಥೆಯ ಬಸ್‌ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಮೃತರ ಕುಟುಂಬಸ್ಥರಿಗೆ ಮೂರು ವರ್ಷಗಳಿಂದ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಬಸ್‌ ಜಪ್ತಿಗೆ ಯಾದಗಿರಿ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶದ ಮೇರೆಗೆ, ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲರು ಜಪ್ತಿ ಪಡಿಸಿಕೊಂಡ ಅಪರೂಪದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದು, ತಂದೆ ಹಾಗೂ ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಸಾರಿಗೆ ಸಂಸ್ಥೆಯ ಬಸ್‌ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಮೃತರ ಕುಟುಂಬಸ್ಥರಿಗೆ ಮೂರು ವರ್ಷಗಳಿಂದ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಬಸ್‌ ಜಪ್ತಿಗೆ ಯಾದಗಿರಿ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶದ ಮೇರೆಗೆ, ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲರು ಜಪ್ತಿ ಪಡಿಸಿಕೊಂಡ ಅಪರೂಪದ ಘಟನೆ ನಡೆದಿದೆ.

ವಡಗೇರಾ ತಾಲೂಕಿನ ಶಿವಪುರ ಗ್ರಾಮದ ಸಮೀಪ ಸಾರಿಗೆ ಬಸ್ಸೊಂದು ಬೈಕ್‌ ಗೆ ಡಿಕ್ಕಿ ಹೊಡೆದಿತ್ತು. ಈ ದುರ್ಘಟನೆಯಲ್ಲಿ ಮನೋಜ್‌ (8),

ರಂಜಿತಾ (11) ಹಾಗೂ ತಂದೆ ಸಾಬಣ್ಣ (33) ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಪುತ್ರಿ ಚೈತ್ರಾ ಗಂಭೀರ ಗಾಯಗೊಂಡಿದ್ದಳು.

ಬಸ್‌ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು.

ಈ ವಿಚಾರವಾಗಿ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನ್ಯಾಯವಾದಿ ಸಂತೋಷ್‌ ಬಾದಾಮಿ ಮೃತ ಕುಟುಂಬದ ಪರ ವಾದ ಮಂಡಿಸಿದ್ದರು. ಸಂಸ್ಥೆ ಮೃತ ಕುಟುಂಬಸ್ಥರಿಗೆ ₹77 ಲಕ್ಷ ಪರಿಹಾರ ನೀಡಬೇಕೆಂದು ನ್ಯಾಯಾಲಯದ ಆದೇಶ ನೀಡಿತ್ತು. ಆದರೆ, ₹55 ಲಕ್ಷ ಪರಿಹಾರ ನೀಡಿದ್ದ ಸಂಸ್ಥೆ, ಹೈಕೋರ್ಟ್‌ ಮೆಟ್ಟಿಲೇರಿತ್ತು. ಇನ್ನುಳಿದ ₹22 ಲಕ್ಷ ಪರಿಹಾರ ಮೂರು ವರ್ಷಗಳಾದರೂ ನೀಡದ ಹಿನ್ನೆಲೆಯಲ್ಲಿ, ಮೃತ ಕುಟುಂಬಸ್ಥರ ದೂರು ಆಲಿಸಿದ ಸಿಜೆಎಂ ನ್ಯಾಯಾಲಯ, ಪರಿಹಾರ ಪಾವತಿ ಮಾಡದಕ್ಕೆ ಬಸ್ ಜಪ್ತಿ ಮಾಡುವಂತೆ ಆದೇಶಿಸಿತ್ತು.

ಯಾದಗಿರಿ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶದಂತೆ ಬಸ್ ಜಪ್ತಿ ಪ್ರಕ್ರಿಯೆಯನ್ನು ನಡೆಸಿದ ಸಿಬ್ಬಂದಿ ಹಾಗೂ ಅರ್ಜಿದಾರರ ಪರ ವಕೀಲರು, ನ್ಯಾಯಾಲಯ ಆವರಣಕ್ಕೆ ತಂದರು. ಮೃತ ಕುಟುಂಬ ಸದಸ್ಯರು ಹಾಗೂ ಕೋರ್ಟ್ ಸಿಬ್ಬಂದಿಗಳೊಂದಿಗೆ ಆಗಮಿಸಿ ಬಸ್ ಜಪ್ತಿ ಮಾಡಲಾಯಿತು.

ಪರಿಹಾರ ಹಣ ಪಾವತಿ ಮಾಡದಕ್ಕೆ ನೊಂದುಹೋದ ಮೃತ ಸಾಬಣ್ಣನ ಪತ್ನಿ ದೇವಮ್ಮ ಈ ಬಗ್ಗೆ ನೋವು ವ್ಯಕ್ತಪಡಿಸಿ, ಪರಿಹಾರಕ್ಕಾಗಿ ಅಲೆದಾಡಿಸುತ್ತಿರುವ ಸಂಸ್ಥೆಯ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಪತಿ ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡ ನೋವಿನ ಜೊತೆಗೆ, ಈಗ ಪರಿಹಾರಕ್ಕಾಗಿ ಸತಾಯಿಸುತ್ತಿರುವುದು ಸರಿಯಲ್ಲ ಎಂದರು.

1.5 ಲಕ್ಷ ರು.ಗಳ ಚೆಕ್‌ ನೀಡಿದ ಸಂಸ್ಥೆ, ಉಳಿದ ಹಣ ಪಾವತಿಸುವುದಾಗಿ ನ್ಯಾಯಾಲಯಕ್ಕೆ ಜಪ್ತಿ ಬಿಡುಗಡೆ ಅರ್ಜಿ ಸಲ್ಲಿಸಿದೆ. ಶುಕ್ರವಾರ ಅರ್ಜಿ ವಿಚಾರಣೆ ನಡೆಯಲಿದೆ ಎಂದು ಅರ್ಜಿದಾರರ ಪರ ವಕೀಲ ಸಂತೋಷ್‌ ಬಾದಾಮಿ ಕನ್ನಡಪ್ರಭಕ್ಕೆ ತಿಳಿಸಿದರು.

ಗುತ್ತಿಗೆದಾರರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ, ಇತ್ತೀಚೆಗೆಷ್ಟೇ ಯಾದಗಿರಿ ನಗರಸಭೆ ಹಾಗೂ ಪಿಡಬ್ಲ್ಯೂಡಿ ಕಚೇರಿಯ ಪೀಠೋಪಕರಣಗಳನ್ನೂ ಜಿಲ್ಲಾ ನ್ಯಾಯಾಲಯ ಜಪ್ತಿಗೆ ಆದೇಶಿಸಿದ್ದನ್ನು ಸ್ಮರಿಸಬಹುದು.