ಡಿಎಲ್ ಇಲ್ಲ ಎಂಬ ಮಾತ್ರಕ್ಕೆ ಅಪಘಾತ ಪರಿಹಾರ ಕಮ್ಮಿ ನೀಡಲಾಗದು: ಹೈಕೋರ್ಟ್
2 Min read
KannadaprabhaNewsNetwork
Published : Oct 18 2023, 01:00 AM IST
Share this Article
FB
TW
Linkdin
Whatsapp
17ಕೆಎಂಎನ್ ಡಿ36ಶ್ರೀರಂಗಪಟ್ಟಣದ ಟಿ.ಎಂ ಹೊಸೂರು - ಗೌಡಹಳ್ಳಿ ಗೇಟ್ ಬಳಿ ಹೆದ್ದಾರಿಯಲ್ಲಿ ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವುದು. | Kannada Prabha
Image Credit: KP
ಡಿಎಲ್ ಇಲ್ಲ ಎಂಬ ಮಾತ್ರಕ್ಕೆ ಅಪಘಾತ ಪರಿಹಾರ ಕಮ್ಮಿ ನೀಡಲಾಗದು: ಹೈಕೋರ್ಟ್‌ರಾಯಚೂರು ಮೃತ ದ್ವಿಚಕ್ರ ವಾಹನ ಸವಾರನ ಪ್ರಕರಣದಲ್ಲಿ ಆದೇಶ । 8.8 ಲಕ್ಷ ರು. ಪರಿಹಾರ 15 ಲಕ್ಷ ರು.ಗೆ ಹೆಚ್ಚಿಸಿ ಕೋರ್ಟ್
ರಾಯಚೂರು ಮೃತ ದ್ವಿಚಕ್ರ ವಾಹನ ಸವಾರನ ಪ್ರಕರಣದಲ್ಲಿ ಆದೇಶ । 8.8 ಲಕ್ಷ ರು. ಪರಿಹಾರ 15 ಲಕ್ಷ ರು.ಗೆ ಹೆಚ್ಚಿಸಿ ಕೋರ್ಟ್ ಸೂಚನೆ ಕನ್ನಡಪ್ರಭ ವಾರ್ತೆ ಬೆಂಗಳೂರು ಚಾಲಕನ ತಪ್ಪಿಲ್ಲದಿದ್ದರೂ ಚಾಲನ ಪರವಾನಗಿ ಹೊಂದಿರಲಿಲ್ಲ ಎಂಬ ಮಾತ್ರಕ್ಕೆ ಅಪಘಾತವಾಗಲು ಆತನ ನಿರ್ಲಕ್ಷ್ಯವಿದೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಆರು ವರ್ಷದ ಹಿಂದೆ ರಾಯಚೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ದ್ವಿಚಕ್ರ ವಾಹನ ಚಾಲಕನ ಕುಟುಂಬಕ್ಕೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ನಿಗದಿಪಡಿಸಿದ್ದ 8.8 ಲಕ್ಷ ರು. ಪರಿಹಾರ ಮೊತ್ತವನ್ನು 15.5 ಲಕ್ಷ ರು. ಗೆ ಹೆಚ್ಚಿಸಿ ಆದೇಶಿಸಿದೆ. ರಸ್ತೆ ಅಪಘಾತ ನಡೆದಾಗ ಮೃತ ದ್ವಿಚಕ್ರ ವಾಹನ ಸವಾರ ಹುಲಿರಾಜ್ (20) ಬಳಿ ಚಾಲನಾ ಪರವಾನಗಿ ಇರಲಿಲ್ಲ. ಘಟನೆಗೆ ಆತನ ನಿರ್ಲಕ್ಷ್ಯವೂ ಕಾರಣ ಎಂದು ಪರಿಗಣಿಸಿ 8.8 ಲಕ್ಷ ರು. ಪರಿಹಾರ ನಿಗದಿಪಡಿಸಿದ್ದ ನ್ಯಾಯಮಂಡಳಿಯ ಕ್ರಮ ಪ್ರಶ್ನಿಸಿ ಮೃತನ ತಾಯಿ ಮತ್ತು ಸಹೋದರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಪರಿಷ್ಕರಿಸಿರುವ ಪರಿಹಾರ ಮೊತ್ತವಾದ 15.5 ಲಕ್ಷ ಹಣವನ್ನು ಬಡ್ಡಿ ಸಮೇತ ಮೃತನ ಕುಟುಂಬಕ್ಕೆ ಪಾವತಿಸುವಂತೆ ಅಪಘಾತಕ್ಕೆ ಕಾರಣವಾದ ಬೊಲೊರೋ ಜೀಪ್‌ಗೆ ವಿಮಾ ಸೌಲಭ್ಯ ಕಲ್ಪಿಸಿದ್ದ ಕಂಪನಿಗೆ ಆದೇಶಿಸಿದೆ. ಪ್ರಕರಣದ ವಿವರ: ಕುಡಿಯುವ ನೀರು ಸರಬರಾಜು ಮಾಡುವ ಹುಲಿರಾಜ್, 2017ರ ನ.10ರಂದು ರಾಯಚೂರಿನ ಯರಮರಸ್‌ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಬೊಲೊರೋ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದ. ಮೃತರ ಸಹೋದರ ಮತ್ತು ತಾಯಿ ಪರಿಹಾರ ಕೋರಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಮೃತನ ಉದ್ಯೋಗದ ಆದಾಯವೇ ಮನೆಗೆ ಆಧಾರವಾಗಿತ್ತು. ಆತನ ಸಾವಿನಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಹಾಗಾಗಿ, 54.5 ಲಕ್ಷ ರು. ಪರಿಹಾರ ಘೋಷಿಸುವಂತೆ ಕೋರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ, ಬೊರೋಲೋ ಜೀಪ್ ಚಾಲಕನ ನಿರ್ಲಕ್ಷ್ಯ ಹಾಗೂ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತ ನಡೆದಿದೆ. ಆದರೆ, ಮೃತನು ವಾಹನ ಚಾಲನಾ ಪರವಾನಗಿ ಹೊಂದಿಲ್ಲ. ಆದ್ದರಿಂದ ಅಪಘಾತಕ್ಕೆ ಆತನ ನಿರ್ಲಕ್ಷ್ಯವೂ ಕಾರಣ ಎಂದು ತೀರ್ಮಾನಿಸಿ, 8.8 ಲಕ್ಷ ರು. ಪರಿಹಾರ ನಿಗದಿ ಮಾಡಿತ್ತು. ಅದನ್ನು ಪ್ರಶ್ನಿಸಿ ಮೃತರ ಕುಟುಂಬದವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಸಿದ ಹೈಕೋರ್ಟ್, ಪ್ರಕರಣದಲ್ಲಿ ಅಪಘಾತ ಸಂಭವಿಸಲು ಬೊಲೇರೋ ಜೀಪ್ ಚಾಲಕನ ನಿರ್ಲಕ್ಷ್ಯವೆಂದು ದೃಢಪಟ್ಟಿದೆ. ಜೀಪ್ ರಸ್ತೆಯ ಮಧ್ಯಭಾಗವನ್ನು ದಾಟಿ ಎದುರಿನಿಂದ ಬರುತ್ತಿದ್ದ ಮೃತನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆದರೆ, ಈ ಎಲ್ಲ ಅಂಶಗಳನ್ನು ನ್ಯಾಯಮಂಡಳಿ ಸರಿಯಾಗಿ ಪರಿಗಣಿಸಿಲ್ಲ. ಮತ್ತೊಂದೆಡೆ ದ್ವಿಚಕ್ರ ವಾಹನ ಚಾಲನ ಪರವಾನಗಿ ಇರಲಿಲ್ಲ. ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡುವುದು ಅಪರಾಧ. ಆ ಅಂಶವನ್ನು ಪರಿಗಣಿಸಬೇಕಾಗುತ್ತದೆ. ಆದರೆ, ಪರವಾನಗಿ ಇಲ್ಲವೆಂದ ಮಾತ್ರಕ್ಕೆ ಘಟನೆಗೆ ಆತನದ್ದೇ ಸಂಪೂರ್ಣ ನಿರ್ಲಕ್ಷ್ಯವೆಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟು, ನ್ಯಾಯಮಂಡಳಿ ನಿಗದಿಪಡಿಸಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.