ಸಾರಾಂಶ
ಅಕ್ರಮವಾಗಿ ರಾತ್ರಿ ವೇಳೆಯಲ್ಲಿ ರಾಜ್ಯ ಹೆದ್ದಾರಿಗೆ ಸುರಿದ ಮಣ್ಣಿನಿಂದ ಅಪಘಾತ ಸಂಭವಿಸಿ ೩ ಜನರಿಗೆ ಗಾಯವಾದ ಘಟನೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಅಕ್ರಮವಾಗಿ ರಾತ್ರಿ ವೇಳೆಯಲ್ಲಿ ರಾಜ್ಯ ಹೆದ್ದಾರಿಗೆ ಸುರಿದ ಮಣ್ಣಿನಿಂದ ಅಪಘಾತ ಸಂಭವಿಸಿ ೩ ಜನರಿಗೆ ಗಾಯವಾದ ಘಟನೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.ತಾಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಜಿ.ನಾಗೇನಹಳ್ಳಿ ಸಮೀಪ ಇರುವ ಖಾಸಗಿ ಕಂಪನಿಗೆ ಮಣ್ಣು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಟಿಪ್ಪರ್ ಲಾರಿ ಒಳಗೆ ಹೋಗದೇ ಕೊರಟಗೆರೆ ಬೆಂಗಳೂರು ರಸ್ತೆಯ ರಾಜ್ಯ ಹೆದ್ದಾರಿಯ ಮಧ್ಯ ಭಾಗದಲ್ಲಿ ಸುರಿದು ಹೋಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಂಚರಿಸಿದ ಮಧುಗಿರಿ ತಾಲೂಕಿನ ಕತ್ತಿರಾಜನಹಳ್ಳಿ ಗ್ರಾಮದ ಸಿದ್ಧೇಶ್, ಕಮಲಾ, ಹೇಮಂತ್ ಅವರಿದ್ದ ವಾಹನ ಅಪಘಾತಕ್ಕೀಡಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳಿಗೆ ಕಾಲು ಕೈಗೆ ಬಲವಾಗಿ ಹೊಡೆತ ಬಿದ್ದ ಕಾರಣ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾತ್ರೋರಾತ್ರಿ ಮಣ್ಣು ಸುರಿದು ಈ ಅವಗಡಕ್ಕೆ ಸಂಬಂಧಿಸಿದ ವ್ಯವಸ್ಥಾಪಕರ ಪ್ರಶ್ನೆ ಮಾಡಲು ಹೋದ ಸಾರ್ವಜನಿಕರಿಗೆ ಅಲ್ಲಿನ ಸೆಕ್ಯೂರಿಟಿಗಳು ಧಮಕಿ ಹಾಕಿದ್ದಾರೆ ಎನ್ನಲಾಗಿದೆ.
ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆರೆಯ ಮಣ್ಣು ಬಗೆಯಯುತ್ತಿರುವುದು ಹಾಗೂ ಇದಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿರುವುದು ಈಗ ಬಟಾಬಯಲಾಗಿದೆ. ಫ್ಯಾಕ್ಟರಿ ಒಳಗೆ ಮಣ್ಣು ಸಾಗಿಸುತ್ತಿದ್ದರೂ ಯಾವುದೇ ಅಧಿಕಾರಿಗಳು ಇವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಇನ್ನೂ ಮಣ್ಣು ಮಟ್ಟ ಮಾಡುತ್ತಿದ್ದ ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಹೆದ್ದಾರಿಗೆ ಸುರಿದಿದ್ದ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರು.