ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್‌ ಮೇಲೆ ಕಂಟೇನರ್‌ ಬಿದ್ದು 6 ಸಾವು!

| Published : Dec 22 2024, 01:30 AM IST / Updated: Dec 22 2024, 04:57 AM IST

ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್‌ ಮೇಲೆ ಕಂಟೇನರ್‌ ಬಿದ್ದು 6 ಸಾವು!
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲ ಬಳಿ ಕಂಟೈನರ್‌ವೊಂದು ವೋಲ್ವೋ ಕಾರಿನ ಮೇಲೆ ಬಿದ್ದು ಇಬ್ಬರು ಮಕ್ಕಳು ಸೇರಿ ಐಟಿ ಉದ್ಯಮಿ, ಅವರ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ.

ದಾಬಸ್‍ಪೇಟೆ : ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲ ಬಳಿ ಕಂಟೈನರ್‌ವೊಂದು ವೋಲ್ವೋ ಕಾರಿನ ಮೇಲೆ ಬಿದ್ದು ಇಬ್ಬರು ಮಕ್ಕಳು ಸೇರಿ ಐಟಿ ಉದ್ಯಮಿ, ಅವರ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 48ರ ತಿಪ್ಪಗೊಂಡನಹಳ್ಳಿ-ತಾಳೇಕೆರೆ ಗೇಟ್ ಬಳಿ, ಶನಿವಾರ ಬೆಳಗ್ಗೆ 11 ಗಂಟೆಯ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮೃತರನ್ನು ಬೆಂಗಳೂರಿನ ಐಟಿ ಉದ್ಯಮಿ ಚಂದ್ರಮ್ ಯೇಗಪ್ಪಗೋಳ (48), ಗೌರಾಬಾಯಿ (42), ಜಾನ್ (16), ದೀಕ್ಷಾ (12), ಆರ್ಯಾ (6), ವಿಜಯಲಕ್ಷ್ಮೀ (36) ಎಂದು ಗುರುತಿಸಲಾಗಿದೆ. ಇವರು ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದವರಾಗಿದ್ದು, ಪ್ರಸ್ತುತ ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ವಾಸವಾಗಿದ್ದರು.

2 ತಿಂಗಳ ಹಿಂದಷ್ಟೇ ಚಂದ್ರಮ್‌ 1 ಕೋಟಿ ರು. ಮೌಲ್ಯದ ವೋಲ್ವೋ ಕಾರು ಖರೀದಿಸಿದ್ದು, ಅದರ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದರು ಎನ್ನಲಾಗಿದೆ. ಸ್ವಗ್ರಾಮ ಮೊರಬಗಿಯಲ್ಲಿ ಕುಟುಂಬಸ್ಥರ ಜೊತೆ ಕ್ರಿಸ್‌ಮಸ್ ರಜೆ ಕಳೆಯಲು ಇವರು ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದರು. ತಿಪ್ಪಗೊಂಡನಹಳ್ಳಿ-ತಾಳೇಕೆರೆ ಗೇಟ್ ಬಳಿ ಬರುತ್ತಿದ್ದಾಗ ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಂಟೈನರ್‌ವೊಂದು ಎದುರು ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ನಿಯಂತ್ರಣ ತಪ್ಪಿ, ಡಿವೈಡರ್ ದಾಟಿ, ಬೆಂಗಳೂರಿನಿಂದ-ತುಮಕೂರಿನ ಕಡೆಗೆ ಚಲಿಸುತ್ತಿದ್ದ ಈ ವೋಲ್ವೋ ಕಾರಿನ ಮೇಲೆ ಬಿತ್ತು. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂಟೈನರ್ ಸುಮಾರು 40 ಟನ್‌ಗಳಷ್ಟು ಅಲ್ಯುಮಿನಿಯಂ ಸಾಮಗ್ರಿ ಹೊತ್ತು ಸಾಗುತ್ತಿತ್ತು.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸುಮಾರು 5 ಗಂಟೆಗೂ ಹೆಚ್ಚು ಕಾಲ, ಸುಮಾರು 10 ಕಿ.ಮೀ. ದೂರ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಬಳಿಕ, 5 ಕ್ರೇನ್ ಬಳಸಿ, ಕಾರಿನೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಯಿತು. ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಕಂಟೈನರ್‌ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಟಿ ಕಂಪನಿ ತೆರೆದಿದ್ದ ಚಂದ್ರಮ್:

ಸುರತ್ಕಲ್‍ನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಚಂದ್ರಮ್‌, ಆಟೋಮೋಟಿವ್, ಎಂಬೆಡೆಡ್ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ನಲ್ಲಿ ಅನುಭವ ಹೊಂದಿದ್ದರು. ಕಳೆದ 18 ವರ್ಷಗಳಿಂದ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. 2018ರಲ್ಲಿ ಬೆಂಗಳೂರಿನ ಎಚ್ಎಸ್ ಆರ್ ಲೇಔಟ್ ಬಳಿ ಐಎಎಸ್‍ಟಿ ಸಾಫ್ಟ್‌ವೇರ್‌ ಸಲ್ಯೂಷನ್‍ ಎಂಬ ಐಟಿ ಕಂಪನಿ ಸ್ಥಾಪಿಸಿದ್ದು, ಅದರ ಎಂಡಿ, ಸಿಇಒ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿಯಲ್ಲಿ ಪ್ರಸ್ತುತ 100ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಈಗ ಅವರ ಪತ್ನಿ, ಮಕ್ಕಳು ಸೇರಿ ಕುಟುಂಬವೇ ನಾಶವಾಗಿದೆ.

ಹೇಗಾಯ್ತು?- ಮುಂದೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಕಂಟೇನರ್‌ ಚಾಲಕ- ಆಗ ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿದ ಕಂಟೇನರ್‌. ಎದುರು ದಿಕ್ಕಿನಿಂದ ಬರುತ್ತಿದ್ದ ಕಾರಿನ ಮೇಲೆ ಪಲ್ಟಿ- 40 ಟನ್‌ ಸಾಮಗ್ರಿ ಇದ್ದ ಕಂಟೇನರ್‌ ಬಿದ್ದ ರಭಸಕ್ಕೆ ವೋಲ್ವೋ ಕಾರಿನ ಸಮೇತ ಅದರಲ್ಲಿದ್ದವರು ಅಪ್ಪಚ್ಚಿ

ಯಾರು ಈ ಉದ್ಯಮಿ?- ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್‌ ತಾಲೂಕಿನ ಮೊರಬಗಿಯವರು- ಸುರತ್ಕಲ್‌ನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿ ಟೆಕಿ ಆಗಿದ್ದರು- ತಮ್ಮದೇ ಸಾಫ್ಟ್‌ವೇರ್‌ ಕಂಪನಿ ತೆರೆದು 100 ಜನರಿಗೆ ನೌಕರಿ ನೀಡಿದ್ದರು--