ಚಪ್ಪಲಿ ಖರೀದಿಗಾಗಿ ಬೈಕ್‌ನಲ್ಲಿ ಹೊರಟವರು ಅಪಘಾತಕ್ಕೆ ಬಲಿ

| Published : Apr 11 2024, 01:46 AM IST

ಸಾರಾಂಶ

ಗೂಡ್ಸ್‌ ಆಟೋ ಡಿಕ್ಕಿಯಾಗಿ ಇಬ್ಬರು ಸಾವು ಕಂಡಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೈಕ್‌ಗೆ ಸರಕು ಸಾಗಾಣಿಕೆ ಆಟೋ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಂದ್ರಹಳ್ಳಿ ನಿವಾಸಿಗಳಾದ ಫಾರೂಕ್ (18) ಹಾಗೂ ಅಬ್ರಾಹಂ ಅಹಮ್ಮದ್‌ (18) ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಮೃತನ ಸ್ನೇಹಿತ ಸಿದ್ದಿಕ್‌ ತೀವ್ರವಾಗಿ ಗಾಯಗೊಂಡು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಅಪಘಾತದ ಬಳಿಕ ವಾಹನ ಬಿಟ್ಟು ಪರಾರಿ ಆಗಿರುವ ಚಾಲಕನಿಗೆ ಹುಡುಕಾಟ ನಡೆದಿದೆ. ರಂಜಾನ್ ಹಬ್ಬದ ನಿಮಿತ್ತ ಹೊಸ ಚಪ್ಪಲಿಗಳ ಖರೀದಿಗೆ ಈ ಮೂವರು ಸ್ನೇಹಿತರು ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್ ಹೋಗುವಾಗ ಈ ಘಟನೆ ನಡೆದಿದೆ.

ಗುಜರಿ ಅಂಗಡಿಯಲ್ಲಿ ಫಾರೂಕ್ ಹಾಗೂ ಅಬ್ರಾಹಂ ಕೆಲಸ ಮಾಡುತ್ತಿದ್ದರು. ಗಾಯಾಳು ಸಿದ್ದಿಕ್‌ ಪಿಯುಸಿ ಓದುತ್ತಿದ್ದಾನೆ. ರಂಜಾನ್ ನಿಮಿತ್ತ ಉಪವಾಸ ಮುಗಿಸಿ ಮಂಗಳವಾರ ರಾತ್ರಿ ಹೊಸ ಚಪ್ಪಲಿಗೆ ಖರೀದಿಗೆ ಅಂದ್ರಹಳ್ಳಿ ಮುಖ್ಯರಸ್ತೆ ಮೂಲಕ ಪೀಣ್ಯ 2ನೇ ಹಂತಕ್ಕೆ ರಾತ್ರಿ 11 ಗಂಟೆಯಲ್ಲಿ ಈ ಮೂವರು ಗೆಳೆಯರು ತೆರಳುತ್ತಿದ್ದರು. ಅದೇ ವೇಳೆ ಎದುರಿಗೆ ಬಂದ ಟಾಟಾ ಏಸ್‌ ಆಟೋ ಚಾಲಕ ನಿಯಂತ್ರಣ ತಪ್ಪಿ ಬೈಕ್‌ಗೆ ಗುದ್ದಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಫಾರೂಕ್ ಹಾಗೂ ಅಬ್ರಾಹಂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.