ಸಾರಾಂಶ
ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿಗಳಿದ್ದ ಆಟೋ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿ ವಿದ್ಯಾರ್ಥಿನಿಯೊಬ್ಬಳು ಮೃತ ಪಟ್ಟಿರುವ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ. ವಿದುರಾಶ್ವತ್ಥ ಕಡೆಯಿಂದ ಬರುತ್ತಿದ್ದ ಆಟೋ, ಬೈಪಾಸ್ ರಸ್ತೆಯಿಂದ ವೇಗವಾಗಿ ಬಂದು ತಿರುವು ಪಡೆಯುತ್ತಿದ್ದ ಕ್ಯಾಂಟರ್ ಲಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 11 ವಿದ್ಯಾರ್ಥಿಗಳು ಸೇರಿ ಆಟೋ ಚಾಲಕ ಶ್ರೀನಿವಾಸ ಗಾಯಗೊಂಡಿದ್ದು, ವನಜಾ(18) ಎಂಬ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿನಿ ಗೌಡಸಂದ್ರ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಅರುಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರು ತಾಲೂ ಕನ ದೊಡ್ಡಕುರುಗೋಡು, ಕಲ್ಲೂಡಿ, ಚಿಕ್ಕಕುರುಗೋಡು, ಕದಿರೇನಹಳ್ಳಿ, ಗೌಡಸಂದ್ರ ಗ್ರಾಮಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ.ಅಪಘಾತದ ರಭಸಕ್ಕೆ ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ಸಂಭವಿಸಿ ಅರ್ಧ ತಾಸಾದರೂ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸದಿದ್ದಕ್ಕೆ ಸಾರ್ವಜನಿಕರು ತೀರ್ವ ಆಕ್ರೋಶ ವ್ಯಕ್ತಪಡಿಸಿದರು.ಗೌರಿಬಿದನೂರು ಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ಶಾಸಕರ ಭೇಟಿ:ಶಾಸಕ ಕೆ. ಹೆಚ್. ಪುಟ್ಟಸ್ವಾಮಿಗೌಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ, ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
ಆಟೋ ರಿಕ್ಷಾ ಚಾಲಕರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಾರಿಗೆ ನಿಯಮಗಳ ಬಗ್ಗೆ ಮಾಹಿತಿ ನೀಡುವಂತೆ ತಹಸೀಲ್ದಾರ್ ರಿಗೆ ಆದೇಶಿಸಿದರು. ಈಗಾಗಲೇ 13 ಸಾರಿಗೆ ಸಂಸ್ಥೆಯ ಬಸ್ ರೂಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನೂ ಅವಶ್ಯಕತೆ ಇದ್ದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚಿನ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಸಾರಿಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಅನುಕೂಲವಾಗುವಂತೆ ಮಾಡಲಾಗುವುದು ಮತ್ತು ಟೋಲ್ ಸಂಗ್ರಹ ಹಾಗೂ ಇತರ ಅಧಿಕಾರಿಗಳ ಸಭೆ ಕರೆದು ರಸ್ತೆಯ ಅವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಲಾಗುವುದು ಹಾಗೂ ಅವಶ್ಯಕತೆ ಇರುವ ಪ್ರಮುಖ ವೃತ್ತಗಳಲ್ಲಿ ಉಬ್ಬು ರಸ್ತೆಯನ್ನು ಕಾನೂನಿನ ಪ್ರಕಾರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ವೇಳೆ ತಹಸಿಲ್ದಾರ್ ಮಹೇಶ್.ಎಸ್.ಪತ್ರಿ. ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ನಗರಸಭೆ ಸದಸ್ಯ ರಾಜಕುಮಾರ್. ಮಾಜಿ ಸದಸ್ಯ ಅನಂತರಾಜು. ಮುಖಂಡರಾದ ಗಂಗಾಧರಪ್ಪ. ನಾಗಾರ್ಜುನ. ಅಬ್ದುಲ್. ಕೆ ಹೆಚ್ ಪಿ ಕಾರ್ಯದರ್ಶಿ ಶ್ರೀನಿವಾಸಗೌಡ ಮತ್ತಿತರರು ಇದ್ದರು.
---ಸಿಕೆಬಿ-6ಶಾಸಕ ಕೆ. ಹೆಚ್. ಪುಟ್ಟಸ್ವಾಮಿಗೌಡ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿದರು