ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರುವ ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವವರಿಗೆ ಉದಾರತೆ ತೋರಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರುವ ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವವರಿಗೆ ಉದಾರತೆ ತೋರಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಸಂತ್ರಸ್ತನಿಗೆ ಪರಿಹಾರ ಮಂಜೂರು ಮಾಡಿದ ವಾಹನ ಅಪಘಾತಗಳ ಪರಿಹಾರ ನ್ಯಾಯಾಧೀಕರಣದ ಆದೇಶ ರದ್ದು ಕೋರಿ ನ್ಯಾಷನಲ್​ ಇನ್ಷೂರೆನ್ಸ್​ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಅದರ ವಿಚಾರಣೆ ನಡೆಸಿ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ಪೀಠ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಗಂಭೀರ ಅಪರಾಧ. ಮದ್ಯದ ಮತ್ತಿನಲ್ಲಿ ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾದರೆ, ಅದು ಅಜಾಗರೂಕತೆಯಾಗುತ್ತದೆ. ವೈದ್ಯಕೀಯ ದಾಖಲೆಗಳು ಹಾಗೂ ಎಫ್‌ಐರ್‌ನಲ್ಲಿನ ಮಾಹಿತಿಯಂತೆ ಅಪಘಾತದಲ್ಲಿ ಕಾರು ಭಾಗಿಯಾಗಿರುವುದು ಸತ್ಯ.

ಆದರೆ, ಗಾಯಾಳು ಆದ ಬೈಕ್‌ ಸವಾರ ಆಸ್ಪತ್ರೆಗೆ ದಾಖಲಾದಾಗ ಆತನ ರಕ್ತದಲ್ಲಿ ಮದ್ಯದ ಅಂಶವಿತ್ತು. ಆ ಕುರಿತು ವೈದ್ಯರು ಸಾಕ್ಷ್ಯ ನುಡಿದಿದ್ದಾರೆ. ಹಾಗಾಗಿ, ಬೈಕ್ ಸವಾರ ತನ್ನ ಸ್ವಂತ ನಿರ್ಲಕ್ಷ್ಯದಿಂದಲೂ ಅಪಘಾತಕ್ಕೆ ಕಾರಣನಾಗಿದ್ದಾನೆ ಎಂಬುದು ಸಾಬೀತಾಗಿದೆ ಎಂದು ತೀರ್ಮಾನಿಸಿತು.

ವಾಹನಗಳ ಸಂಖ್ಯೆ ಮತ್ತು ರಸ್ತೆ ದಟ್ಟಣೆ ಹೆಚ್ಚುತ್ತಿರುವ ಈ ಕಾಲದಲ್ಲಿ ವಾಹನ ಸವಾರರು ಕಾನೂನಿಗೆ ಗೌರವ ನೀಡಬೇಕು. ಕುಡಿದು ವಾಹನ ಚಲಾಯಿಸುವುದು ಕಾನೂನುಬಾಹಿರ. ಅಂತಹವರಿಗೆ ಪರಿಹಾರ ನೀಡುತ್ತಾ ಹೋದರೆ ಅದು ರಸ್ತೆಯಲ್ಲಿ ಅನುಸರಿಸಬೇಕಾದ ನಿಯಮಗಳ ಉಲ್ಲಂಘನೆಗೆ ದಾರಿ ಮಾಡಿಕೊಡುತ್ತದೆ. ಅವರಿಗೆ ಶಾಸನಗಳ ರಕ್ಷಣೆ ವಿಸ್ತರಿಸಿ ಉದಾರತೆ ತೋರಲಾಗದು ಎಂದು ಪೀಠ ಅಭಿಪ್ರಾಯಟ್ಟಿದೆ.

ಅಂತಿಮವಾಗಿ ಬೈಕ್ ಚಾಲಕನ ಮದ್ಯಪಾನದ ನಿರ್ಲಕ್ಷ್ಯಕ್ಕಾಗಿ ನ್ಯಾಯಾಧೀಕರಣ ನಿಗದಿಪಡಿಸಿದ್ದ ಒಟ್ಟು ಪರಿಹಾರ ಮೊತ್ತದಲ್ಲಿ ಶೇ.30ರಷ್ಟು ಕಡಿತಗೊಳಿಸಲಾಗಿದೆ. ಉಳಿದ ಶೇ.70ರಷ್ಟನ್ನು ಮಾತ್ರ ಬಡ್ಡಿ ಸಮೇತ 8 ವಾರದಲ್ಲಿ ಸಂತ್ರಸ್ತನಿಗೆ ಮೇಲ್ಮನವಿದಾರ ಕಂಪನಿ ಪಾವತಿಸಬೇಕು ಎಂದು ಪೀಠ ಆದೇಶಿಸಿದೆ.

ಪ್ರಕರಣವೇನು?ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಥಾಳ ಗ್ರಾಮದ ನಿವಾಸಿ ವಿಶ್ವನಾಥ್ 2018ರ ಸೆ.22ರಂದು ಬೈಕ್ ‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರುತಿ ಸ್ವಿಫ್ಟ್ ಕಾರು ಢಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದರು. ಈ ಸಂಬಂಧ ಬೀದರ್‌ನ ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ವಿಶ್ವನಾಥ್‌ಗೆ ಪರಿಹಾರ ಘೋಷಿಸಿತ್ತು. ಅದನ್ನು ಪ್ರಶ್ನಿಸಿ ಕಾರಿಗೆ ವಿಮಾ ಪಾಲಸಿ ನೀಡಿದ್ದ ವಿಮಾ ಕಂಪನಿ ಹೈಕೋರ್ಟ್ ‌ಗೆ ಮೇಲ್ಮನವಿ ಸಲ್ಲಿಸಿತ್ತು. ಬೈಕ್ ಸವಾರ ಮದ್ಯಪಾನ ಮಾಡಿದ್ದರಿಂದಲೇ ಅಪಘಾತ ಸಂಭವಿಸಿದೆ. ಸುಳ್ಳು ದಾಖಲೆ ಸೃಷ್ಟಿಸಿ ಕಾರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆಕ್ಷೇಪಿಸಿತ್ತು.