ಕಾರ್ಕಳ ವ್ಯಾಪ್ತಿಯ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ಮೂರು ಕಡೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ತಕ್ಷಣದ ಕಾರ್ಯಾಚರಣೆಯಿಂದ ಹತೋಟಿಗೆ ತರಲಾಗಿದೆ.
ಕಾರ್ಕಳ: ಕಾರ್ಕಳ ವ್ಯಾಪ್ತಿಯ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ಮೂರು ಕಡೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ತಕ್ಷಣದ ಕಾರ್ಯಾಚರಣೆಯಿಂದ ಹತೋಟಿಗೆ ತರಲಾಗಿದೆ.ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಂಕಿ ಅವಘಡದಿಂದ ಯಾವುದೇ ವನ್ಯಜೀವಿಗಳಿಗೆ ಪ್ರಾಣ ಹಾನಿ ಅಥವಾ ಗಾಯಗಳಾಗಿಲ್ಲ. ಆದರೆ, ಅಮೂಲ್ಯ ಅರಣ್ಯ ಸಂಪತ್ತು ಹೊಂದಿರುವ ಪ್ರದೇಶದಲ್ಲಿ ಸುಮಾರು 18 ಎಕರೆ ಹುಲ್ಲುಗಾವಲು ಬೆಂಕಿಗಾಹುತಿಯಾಗಿದೆ.
ಬೇಸಿಗೆ ಆರಂಭದಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ನಿರ್ಮಿಸಿದ್ದ ‘ಫೈರ್ ಲೈನ್’ ವ್ಯವಸ್ಥೆ ಬೆಂಕಿ ದಟ್ಟ ಅರಣ್ಯ ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದರ ಪರಿಣಾಮವಾಗಿ ಹಾನಿ ಹುಲ್ಲುಗಾವಲು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಶಿವರಾಮ್ ಅವರು ತಿಳಿಸಿದಂತೆ ಮಾ.19ರಂದು ರಾತ್ರಿ ವೇಳೆಯಲ್ಲೇ ಬಹುತೇಕ ಬೆಂಕಿಯನ್ನು ನಂದಿಸಲಾಗಿದೆ.ಬೆಂಕಿ ಅವಘಡದ ಹಿನ್ನೆಲೆ ಕುರಿತು ಇಲಾಖೆ ಸಮಗ್ರ ತನಿಖೆ ಆರಂಭಿಸಿದೆ. ಕಿಡಿಗೇಡಿಗಳ ಕೈವಾಡವಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.