ಆಕಸ್ಮಿಕ ಬೆಂಕಿ: ಮನೆ ಭಸ್ಮ

| Published : Sep 12 2024, 01:50 AM IST

ಸಾರಾಂಶ

ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಮನೆಯೊಂದು ಭಸ್ಮವಾಗಿರುವ ಘಟನೆ ತಾಲೂಕಿನ ಪುರ ಗ್ರಾಮದಲ್ಲಿ ನಡೆದಿದೆ.

ತುರುವೇಕೆರೆ: ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಮನೆಯೊಂದು ಭಸ್ಮವಾಗಿರುವ ಘಟನೆ ತಾಲೂಕಿನ ಪುರ ಗ್ರಾಮದಲ್ಲಿ ನಡೆದಿದೆ. ಪುರ ಗ್ರಾಮದ ರತ್ನಮ್ಮರ ಮನೆ ಭಸ್ಮವಾಗಿದೆ. ಮನೆಯೊಳಗಿದ್ದ ರತ್ನಮ್ಮ ಕೂಡಲೇ ಮನೆಯಿಂದ ಹೊರಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಗ್ರಾಮಸ್ಥರು ಬಂದು ಬೆಂಕಿಯನ್ನು ಆರಿಸುವ ವೇಳೆಗಾಗಲೇ ಮನೆಯೊಳಗಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದ ರತ್ನಮ್ಮ ಒಬ್ಬರೇ ಈ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಈಗ ಮನೆ ಸಂಪೂರ್ಣ ಭಸ್ಮವಾಗಿರುವುದರಿಂದ ಜೀವನಕ್ಕೆ ಯಾವುದೇ ಮಾರ್ಗ ಇಲ್ಲದಂತಾಗಿದೆ. ಸದ್ಯ ರತ್ನಮ್ಮನವರಿಗೆ ಗ್ರಾಮದಲ್ಲಿದ್ದ ಶಾಲೆಯ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಹೇಮಂತ್ ಕುಮಾರ್ ಭೇಟಿ ನೀಡಿ ಮಹಜರು ಕಾರ್ಯ ನಡೆಸಿದರು. ಸೂಕ್ತ ಪರಿಹಾರ ನೀಡಲು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.