ಆಕಸ್ಮಿಕ ಬೆಂಕಿ: ಮನೆ, ತೆಂಗಿನ ಮರ ಭಸ್ಮ

| Published : May 05 2024, 02:00 AM IST / Updated: May 05 2024, 02:01 AM IST

ಸಾರಾಂಶ

ಬೆಂಕಿಗೆ ಸಿಲುಕಿ ಸುಮಾರು ಇನ್ನೂರಕ್ಕೂ ಹೆಚ್ಚು ತೆಂಗಿನ ಸಸಿ, ಮರಗಳು ಹಾಗೂ ತೋಟದ ಮನೆಯೊಂದು ಭಸ್ಮವಾಗಿರುವ ಘಟನೆ ತಾಲೂಕಿನ ಥರಮನಕೋಟೆಯಲ್ಲಿ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಬೆಂಕಿಗೆ ಸಿಲುಕಿ ಸುಮಾರು ಇನ್ನೂರಕ್ಕೂ ಹೆಚ್ಚು ತೆಂಗಿನ ಸಸಿ, ಮರಗಳು ಹಾಗೂ ತೋಟದ ಮನೆಯೊಂದು ಭಸ್ಮವಾಗಿರುವ ಘಟನೆ ತಾಲೂಕಿನ ಥರಮನಕೋಟೆಯಲ್ಲಿ ಶುಕ್ರವಾರ ನಡೆದಿದೆ.

ಥರಮನಕೋಟೆಯ ಡಿ.ಎಂ.ತಿಮ್ಮಯ್ಯ ಎಂಬುವವರಿಗೆ ಸೇರಿದ ತೆಂಗಿನ ತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ತೋಟದಲ್ಲಿದ್ದ ತೆಂಗಿನ ಮರ ಹಾಗೂ ಮನೆಯು ಭಸ್ಮಗೊಂಡಿದೆ. ಮನೆಯೊಳಗಿದ್ದ ಧವಸ ಧಾನ್ಯಗಳು ಸೇರಿದಂತೆ ಎಲ್ಲ ವಸ್ತುಗಳು ಸುಟ್ಟು ಹೋಗಿವೆ. ತೋಟದ ಬಳಿಯೇ ದಾಸ್ತಾನು ಮಾಡಲಾಗಿದ್ದ ಸುಮಾರು ಮೂರು ಸಾವಿರ ತೆಂಗಿನ ಕಾಯಿಯೂ ಸಹ ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿವೆ. ಈ ಬೆಂಕಿ ಅನಾಹುತ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಮಾಡಿದ್ದಾರೋ ಎಂಬುದು ತಿಳಿದಿಲ್ಲ ಎಂದು ತೋಟದ ಮಾಲೀಕ ತಿಮ್ಮಯ್ಯ ತಿಳಿಸಿದ್ದಾರೆ.

ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ಗೆ ಮನವಿ: ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಈ ಆಕಸ್ಮಿಕ ಅಗ್ನಿ ಅವಘಡದಿಂದ ಸುಮಾರು 6 ಲಕ್ಷ ರು. ನಷ್ಠ ಸಂಭವಿಸಿದೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ತೋಟದ ಮಾಲೀಕ ತಿಮ್ಮಯ್ಯ ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ತುರುವೇಕೆರೆ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.