ಗುತ್ತಲದಲ್ಲಿ ಶುದ್ಧ ಕುಡಿಯುವ ನೀರಿನ ಪೈಪ್‌ಗಳಿಗೆ ಆಕಸ್ಮಿಕ ಬೆಂಕಿ

| Published : Mar 11 2025, 12:48 AM IST

ಗುತ್ತಲದಲ್ಲಿ ಶುದ್ಧ ಕುಡಿಯುವ ನೀರಿನ ಪೈಪ್‌ಗಳಿಗೆ ಆಕಸ್ಮಿಕ ಬೆಂಕಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂದಾಜು ₹34.76 ಲಕ್ಷಕ್ಕೂ ನಷ್ಟವಾಗಿದೆ ಎಂದು ಗುತ್ತಿಗೆದಾರರ ಪರ ಯೋಜನಾ ವ್ಯವಸ್ಥಾಪಕ ಹರಿಬಾಬು ಎಂಬುವರು ಮಾಹಿತಿ ನೀಡಿದ್ದಾರೆ.

ಗುತ್ತಲ: ಶುದ್ದ ಕುಡಿಯುವ ನೀರಿನ ಪೈಪ್‌ಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಅಪಾರ ಪ್ರಮಾಣದ ಹಾನಿಯಾದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಪಟ್ಟಣದ ನೆಗಳೂರ ರಸ್ತೆಯ ಬಳಿ ಸಂಗ್ರಹಿಸಿದ್ದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪ್ರಾಯೋಜಿತ ಅಮೃತ ಸಿಂಚಾಯಿ ಯೋಜನೆಯ 24x7 ಶುದ್ಧ ನೀರಿನ ಸಂಪರ್ಕ ಕಲ್ಪಿಸಲು ಸಂಗ್ರಹಿಸಿ ಇಡಲಾಗಿದ್ದ ಪೈಪ್‌ಗಳಿಗೆ ಆಕಸ್ಮಿಕ ಬೆಂಕಿ ತಗುಲಿ, ಬೆಂಕಿಯ ಕೆನ್ನಾಲಿಗೆಗೆ ಪೈಪ್‌ಗಳು ಸಂಪೂರ್ಣವಾಗಿ ಸುಟ್ಟಿವೆ. ಅಂದಾಜು ₹34.76 ಲಕ್ಷಕ್ಕೂ ನಷ್ಟವಾಗಿದೆ ಎಂದು ಗುತ್ತಿಗೆದಾರರ ಪರ ಯೋಜನಾ ವ್ಯವಸ್ಥಾಪಕ ಹರಿಬಾಬು ಎಂಬುವರು ಮಾಹಿತಿ ನೀಡಿದ್ದಾರೆ.

ಬೆಂಕಿಯ ಜ್ವಾಲೆಗೆ ಅಕ್ಕಪಕ್ಕದ ಮನೆಯ ನಿವಾಸಿಗಳು ಕೆಲಕಾಲ ಆತಂಕಕ್ಕೆ ಒಳಗಾದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ಠಾಣೆಯಲ್ಲಿ ಒಂದೇ ವಾಹನ ಇರುವುದರಿಂದ ಅದು ಸಹ ಬೇರೆ ಗ್ರಾಮದಲ್ಲಿನ ಮೇವಿನ ಬಣವೆಗೆ ಬೆಂಕಿ ನಂದಿಸಲು ಹೋಗಿದ್ದರಿಂದ ಸ್ಥಳಕ್ಕೆ ಆಗಮಿಸಲಿಲ್ಲ ಎಂದು ತಿಳಿದುಬಂದಿದೆ. ಆದರೆ ಪಟ್ಟಣದ ಸಾರ್ವಜನಿಕರೆ ಟ್ಯಾಂಕರ್ ಹಾಗೂ ಮನೆಗಳಲ್ಲಿನ ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೋಲಿಸ ಠಾಣೆಯ ಪಿಎಸ್‌ಐ ಬಸವರಾಜ ಬಿರಾದಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತಂತೆ ಗುತ್ತಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಬಜೆಟ್‌ನಲ್ಲಿ ಹಾವೇರಿ ಜಿಲ್ಲೆಗೆ ಚಿಪ್ಪು: ಬಿ.ಸಿ. ಪಾಟೀಲ್

ಹಾವೇರಿ: ಸಿಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಸರ್ವರ ಪಾಲನ್ನೂ ಒಂದೇ ಸಮುದಾಯಕ್ಕೆ ಕೊಟ್ಟಿದ್ದಾರೆ. ಒಂದು ಸಮುದಾಯದ ಮತ ಸೆಳೆಯುವ ಸಲುವಾಗಿ ಅವರಿಗೆ ಹೆಚ್ಚು ಹಣ ಕೊಟ್ಟು ಉಳಿದವರಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೇ ಜಿಲ್ಲೆಗೆ ಚಿಪ್ಪು ಕೊಡುವ ಮೂಲಕ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್‌ನಲ್ಲಿ ರೈತ ಸಮುದಾಯಕ್ಕೆ ಏನೂ ಕೊಟ್ಟಿಲ್ಲ. ₹1.16 ಸಾವಿರ ಕೋಟಿ ಸಾಲ ಮಾಡಿರುವ ರಾಜ್ಯ ಸರ್ಕಾರ ದಿವಾಳಿ ಸರ್ಕಾರವಾಗಿದೆ. ಅಭಿವೃದ್ಧಿಗೆ ಯಾವುದೇ ಹಣ ಕೊಟ್ಟಿಲ್ಲ ಎಂದರು.

ಜಿಲ್ಲೆಯಲ್ಲಿ ಆರು ಕಾಂಗ್ರೆಸ್ ಶಾಸಕರು ಇದ್ದರೂ ಯಾವುದೇ ಅನುದಾನ ಕೊಟ್ಟಿಲ್ಲ. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ₹25 ಕೋಟಿ ಕೊಟ್ಟಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದನ್ನು ವಾಪಸ್ ಪಡೆದಿದೆ. ಈ ಬಾರಿಯೂ ಏನೂ ಕೊಟ್ಟಿಲ್ಲ ಎಂದರು.ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚಿ, ಹೊಸದಾಗಿ ಮದ್ಯದ ಅಂಗಡಿಗಳನ್ನು ತೆರೆಯಲು ಹೊರಟಿದೆ. ಅಹಿಂದ ಪರ ಎನ್ನುವ ಸಿಎಂ ದಲಿತರನ್ನು ಕಡೆಗಣಿಸಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಯಾವುದೇ ಅನುದಾನ ಕೊಟ್ಟಿಲ್ಲ. ದಲಿತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚಬಾರದು. ರೈತರಿಗೆ, ದಲಿತರಿಗೆ ಆದಂಥ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಚಿನ್ನದ ಅಕ್ರಮ ಸಾಗಣೆಗೆ ಯತ್ನಿಸಿದ ಆರೋಪಿ ರನ್ಯಾ ರಾವ್ ರಕ್ಷಣೆಗೆ ಯಾರು ಮುಂದಾಗಿದ್ದಾರೆ ಎಂಬುದನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಅವರಿಗೆ ಈ ಹಿಂದೆ ಭೂಮಿ ಕೊಟ್ಟಿದ್ದು ಯಾರು ಎಂದು ತನಿಖೆ ಆಗಬೇಕು ಎಂದರು.ಯಡಿಯೂರಪ್ಪ ಕುಟುಂಬ ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂಬ ಬಿ.ಪಿ. ಹರೀಶ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾರದ್ದೋ ಪ್ರಚೋದನೆಯಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ. ವಿಜಯೇಂದ್ರ ಅವರನ್ನು ಯಡಿಯೂರಪ್ಪ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ರಾಷ್ಟ್ರೀಯ ನಾಯಕರು ಮಾಡಿದ್ದಾರೆ. ನೆಲೆ ಇಲ್ಲದ ದಕ್ಷಿಣ ಭಾರತದಲ್ಲಿ ನೆಲೆ ಕೊಟ್ಟವರು ಯಡಿಯೂರಪ್ಪನವರು. ಅವರ ಚುನಾವಣಾ ಪ್ರಚಾರದಿಂದ ಗೆದ್ದು ಬಂದು ಈಗ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಬಿಜೆಪಿಯ ಆಂತರಿಕ ಸಮಸ್ಯೆಗಳಿಗೆ ಸದ್ಯದಲ್ಲೇ ತೆರೆ ಬೀಳಲಿದೆ. ದಾವಣಗೆರೆ ಸಮಾವೇಶ ಆಗುತ್ತದೆ. ಅದಕ್ಕಾಗಿ ಚಿಂತನೆ ನಡೆದಿದೆ ಎಂದರು.