ಸಾರಾಂಶ
ರಾಣಿಬೆನ್ನೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಮನೆ ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾದ ಘಟನೆ ಶನಿವಾರ ಬೆಳಗಿನ ಜಾವ ತಾಲೂಕಿನ ದೇವಗೊಂಡನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹಾಂತೇಶ ಶಿವನಗೌಡ್ರು ಹಾಗೂ ಅವರ ಸಹೋದರರಿಗೆ ಸೇರಿದ ಮನೆಯಾಗಿವೆ.ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವಘಡ ನಡೆದಿದೆ. ದೇವರ ಮನೆಯಲ್ಲಿ ದೀಪ ಹಚ್ಚಿ, ಯಲ್ಲಮ್ಮನ ಗುಡ್ಡಕ್ಕೆ ದೇವರ ದರ್ಶನಕ್ಕೆ ಕುಟುಂಬಸ್ಥರು ತೆರಳಿದ್ದರು. ಈ ವೇಳೆ ಮನೆಯಲ್ಲಿ ಬೆಕ್ಕು ಅಥವಾ ಇಲಿಗಳು ದೇವರಿಗೆ ಹಚ್ಚಿದ ದೀಪ ಎಳೆದು ಬೆಂಕಿ ತಗುಲಿರುವ ಅನುಮಾನ ವ್ಯಕ್ತವಾಗಿದೆ.
ಅಂದಾಜು ₹10 ಸಾವಿರ ಮೌಲ್ಯದ ಪಾತ್ರೆ, ಬಟ್ಟೆ, ನಗದು, 1/2 ತೊಲೆ ಬಂಗಾರದ ಉಂಗುರ, 1 ತೊಲೆ ಬಂಗಾರದ ಚೈನ್, 2 ತೊಲೆ ಬಂಗಾರದ ತಾಳಿ ಹಾಗೂ 27 ಸಾವಿರ ಹಣ ಸುಟ್ಟಿದೆ ಎನ್ನಲಾಗಿದೆ. ಈತನ ಸಹೋದರ ವಾಸವಿರುವ ಮನೆಯಲ್ಲಿಯ ಅಂದಾಜು ₹10 ಸಾವಿರ ಮೌಲ್ಯದ ಪಾತ್ರೆ, ಬಟ್ಟೆ ಮತ್ತು ಟ್ರಂಕ್‌ನಲ್ಲಿಟ್ಟಿದ್ದ ಅಂದಾಜು 2 ತೊಲೆ ತೂಕದ ತಾಳಿ, ಬೆಂಡವಾಲೆ, ಕಿವಿಯಲ್ಲಿಯ ಬಟನ್ಸ್ ಹಾಗೂ ₹80 ಸಾವಿರ ಹಣ ಸುಟ್ಟಿದೆ.ಒಟ್ಟು ₹20ಸಾವಿರ ಮೌಲ್ಯದ ಪಾತ್ರೆ, ಬಟ್ಟೆ ಬರೆಗಳು ಮತ್ತು ₹3 ಲಕ್ಷ ಮೌಲ್ಯದ 6 ತೊಲೆಯ ಬಂಗಾರದ ಆಭರಣಗಳು ಹಾಗೂ ₹97 ಸಾವಿರ ಹಣ, ಶಾಲಾ ಮತ್ತಿತರೇ ದಾಖಲಾತಿಗಳು ಸುಟ್ಟಿದೆ ಎನ್ನಲಾಗಿದೆ.
ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪ್ರಾಪ್ತ ಮಗನಿಗೆ ವಾಹನ ನೀಡಿದ ತಂದೆಗೆ ₹27 ಸಾವಿರ ದಂಡರಾಣಿಬೆನ್ನೂರು: ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ಸ್ಥಳೀಯ ನ್ಯಾಯಾಲಯ ₹27 ಸಾವಿರ ದಂಡ ವಿಧಿಸಿ ಶುಕ್ರವಾರ ಆದೇಶ ನೀಡಿದೆ. ನಗರದ ದಿಳ್ಳೆಪ್ಪ ಗುತ್ತೆಪ್ಪ ಕಾಟಿ ಎಂಬುವರು ದಂಡ ಕಟ್ಟಬೇಕಾದ ವ್ಯಕ್ತಿ. ಇವರು ತಮ್ಮ ಮಗನಿಗೆ ಬೈಕ್ ನೀಡಿದ್ದು, ಆತ ಜುಲೈ 30, 2024ರಂದು ರಾಣಿಬೆನ್ನೂರು ನಗರದ ಹವಾಲ್ದಾರ ಹೊಂಡದ ಹತ್ತಿರ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರಿಗೆ ಗಾಯಪಡಿಸಿದ್ದನು. ಈ ಕುರಿತು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಜುಲೈ 1, 2024ರಂದು ದಿಳ್ಳೆಪ್ಪ ಕಾಟೆ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ, 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮಗನಿಗೆ ಬೈಕ್ ನೀಡಿದ ತಂದೆ ದಿಳ್ಳೆಪ್ಪ ಕಾಟಿಗೆ ₹27000 ದಂಡ ವಿಧಿಸಿ ಆದೇಶ ನೀಡಿದ್ದಾರೆ.ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿಗೆ ಬೆಂಕಿ, ವ್ಯಕ್ತಿ ಸಾವು
ಸವಣೂರು: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗೆ ಬೆಂಕಿ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ಮಾಲತೇಶ ನಗರದಲ್ಲಿ ಸಂಭವಿಸಿದೆ. ಷಣ್ಮುಖಪ್ಪ ದೇವಗಿರಿ (55) ಮೃತ ವ್ಯಕ್ತಿ. ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬದಲ್ಲಿ ಮಾರಟಕ್ಕೆಂದು ತಂದಿದ್ದ ಪಟಾಕಿ ಉಳಿದ ಕಾರಣ ಅದನ್ನು ಮನೆಯಲ್ಲೇ ಸಂಗ್ರಹಿಸಿಡಲಾಗಿತ್ತು. ಮನೆಯಲ್ಲಿ ಪಟಾಕಿ ಸಂಗ್ರಹಿಸಲು ಪರವಾನಗಿ ಇರಲಿಲ್ಲ. ಪಟಾಕಿ ಇಟ್ಟ ಜಾಗದ ಸನಿಹದಲ್ಲೇ ಈತ ಮಲಗಿದ್ದ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಕಿಡಿ ತಾಗಿ ಪಟಾಕಿ ಸಿಡಿದಿದೆ. ಮಲಗಿದ್ದ ಈತ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾನೆ. ಘಟನೆ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.