ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಭಾರತ 63 ಲಕ್ಷ ಕಿ.ಮೀ. ಉದ್ದದ ರಸ್ತೆ ಹೊಂದಿದ್ದು, ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಅಪಘಾತ ಪ್ರಕರಣಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. ಭಾರತದ ಆರ್ಥಿಕ ವ್ಯವಸ್ಥೆಗೆ ಅಪಘಾತ ಪ್ರಕರಣಗಳು ಬಹಳ ದೊಡ್ಡ ಮಾರಕವಾಗಿ ಪರಿಣಮಿಸುತ್ತಿದೆ. ಆದುದರಿಂದ ಅಪಘಾತ ಪ್ರಕರಣಗಳು ಕೊರೋನಾಗಿಂತಲೂ ಮಹಾಮಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ ಹೇಳಿದರು.ಅವರು ಲಯನ್ಸ್ ಇಂಟರ್‌ನ್ಯಾಶನಲ್ ಜಿಲ್ಲಾ 317ಸಿ ಲಿಯೋ ಜಿಲ್ಲಾ 317ಸಿ ಹಾಗೂ ಉಡುಪಿ ಎಂ.ಜಿ.ಎಂ. ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಆಯೋಜಿಸಲಾದ ರಸ್ತೆ ಸುರಕ್ಷತೆ ಮತ್ತು ಸಂಚಾರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಪಘಾತದಲ್ಲಿ ಯಜಮಾನ ಮೃತಪಟ್ಟರೆ ಆ ಕುಟುಂಬದ ಶೇ.75ರಷ್ಟು ಆರ್ಥಿಕ ವ್ಯವಸ್ಥೆ ಕುಸಿದು ಹೋಗುತ್ತದೆ. ಆದುದರಿಂದ ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ಅರಿತುಕೊಳ್ಳಬೇಕು, ತಮ್ಮ ಬಳಿ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಮತ್ತು ತಾಳ್ಮೆಯಿಂದ ವಾಹನ ಚಲಾಯಿಸಬೇಕು. ಆಗ ಮಾತ್ರ ರಸ್ತೆ ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಉಡುಪಿ ಜಿಲ್ಲೆಯಲ್ಲಿ ಪ್ರತಿದಿನ ನಾಲ್ಕು ಅಪಘಾತ ಪ್ರಕರಣಗಳು, ವಾರಕ್ಕೆ ಅಪಘಾತದಿಂದ 2-3 ಸಾವನ್ನಪ್ಪುವ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ವರ್ಷಕ್ಕೆ ದಾಖಲಾಗುವ ಒಟ್ಟು 2500 ಪ್ರಕರಣಗಳಲ್ಲಿ 1000 ಪ್ರಕರಣಗಳು ಅಪಘಾತ ಪ್ರಕರಣಗಳೇ ಆಗಿರುತ್ತದೆ. ಆದುದರಿಂದ ಇದರ ಗಂಭೀರತೆಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಎಂ. ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಲಯನ್ಸ್ ಜಿಲ್ಲಾ ಗವರ್ನರ್ ಮುಹಮ್ಮದ್ ಹನೀಫ್, ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಉಪ ಗವರ್ನರ್‌ಗಳಾದ ಸ್ವಪ್ನಾ ಸುರೇಶ್, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಲಯನ್ಸ್ ಎಲ್‌ಸಿಐಎಫ್ ಸಂಯೋಜಕ ಹರಿಪ್ರಸಾದ್ ರೈ ಮುಖ್ಯ ಅತಿಥಿಗಳಾಗಿದ್ದರು.ಜಿಲ್ಲಾ ಲಿಯೋ ಉಪಾಧ್ಯಕ್ಷೆ ಪ್ರಜ್ಞಾ ಜೆ.ಪಿ., ಪಿಆರ್‌ಒ ಧೃತಿ ಹೆಗ್ಡೆ, ಮಾಜಿ ಅಧ್ಯಕ್ಷ ಆದಿತ್ಯ ಶೇಟ್ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಲಿಯೋ ಜಿಲ್ಲಾಧ್ಯಕ್ಷೆ ಶರೋನ್ ಮಾಬೆನ್ ಸ್ವಾಗತಿಸಿದರು. ಲಿಯೋ ಜಿಲ್ಲಾ ಮೆಂಟರ್ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಯೋಜಕ ಮುಹಮ್ಮದ್ ಮೌಲಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಲಿಯೋ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ವಂದಿಸಿದರು.