ಸಾರಾಂಶ
ಆನವಟ್ಟಿಯ ಪಟ್ಟಣ ಪಂಚಾಯಿತಿ ಎದುರು ಕಾನೂನು ಉಲ್ಲಘನೆ ಮಾಡಿ, ನಮ್ಮ ಆಸ್ತಿಯನ್ನು ಬೇನಾಮಿ ವ್ಯಕ್ತಿಯ ಹೆಸರಿಗೆ ಖಾತೆ ಬದಲಾವಣೆ ಮಾಡಬಾರದು ಎಂದು ಗಂಗಮ್ಮ, ಅನಿಲ್‌ಕುಮಾರ್, ರಾಜು ಶಾಂತಿಯುತ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಆನವಟ್ಟಿ
ಆಮಿಷಕ್ಕೆ ಒಳಗಾಗಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಾನೂನು ಉಲ್ಲಘನೆ ಮಾಡಿ, ಬೇನಾಮಿ ವ್ಯಕ್ತಿಯ ಹೆಸರಿಗೆ ಖಾತೆ ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಗಂಗಮ್ಮ, ಅನಿಲ್ ಕುಮಾರ್, ರಾಜು ಪಟ್ಟಣ ಪಂಚಾಯಿತಿ ಮುಂದೆ ಕುಳಿತು ಬುಧವಾರ ಪ್ರತಿಭಟಿಸಿದರು.ಸೊರಬ ನ್ಯಾಯಾಲಯದಲ್ಲಿ 25 ವರ್ಷದಿಂದ ಸಿವಿಲ್ ವ್ಯಾಜ್ಯದಲ್ಲಿರುವ ಆನವಟ್ಟಿಯ ಕುರುಬರ ಓಣಿಯಲ್ಲಿರುವ ಕುಟುಂಬದ 8 ಜನರಿಗೆ ಸೇರಬೇಕಾದ ನಮ್ಮ ಪಿತ್ರಾರ್ಜಿತ ಆಸ್ತಿ ಖಾತೆ ಸುಮಾರಿ ನಂಬರ್ 36 ರನ್ನು ಬೆನಾಮಿ ವ್ಯಕ್ತಿಯ ಪ್ರಭಾವಕ್ಕೆ ಒಳಗಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಖಾತೆ ಬದಲಾವಣೆಗೆ ಮುಂದಾಗಿರುವ ಕ್ರಮವನ್ನು ಖಂಡಿಸುತ್ತೇವೆ ಎಂದರು.
ಈಗಾಗಲೇ ಸೊರಬ ನ್ಯಾಯಾಲಯದಲ್ಲಿ 8 ಜನಕ್ಕೂ ಆಸ್ತಿ ಡಿಕ್ರಿಯಾಗಿದ್ದು, ಅಂತಿಮ ತೀರ್ಪು ನೀಡುವ ಹಂತದಲ್ಲಿ ನಮ್ಮ ಆಸ್ತಿಯ ಸಿವಿಲ್ ವ್ಯಾಜ್ಯವಿದೆ.ಸಿವಿಲ್ ವ್ಯಾಜ್ಯವಿರುವಾಗ ಖಾತೆ ಬದಲಾವಣೆ ಮಾಡಬಾರದು. ಆದರೆ ಕಾನೂನನ್ನು ಮೀರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಯಾವುದೇ ಸಿವಿಲ್ ವ್ಯಾಜ್ಯವಿಲ್ಲ ಎಂದು ಟಿಪ್ಪಣಿ ಬರೆದು ಖಾತೆ ಬದಲಾವಣೆಗೆ ಮೂರು ಹಂತದ ಪ್ರಕ್ರಿಯೆ ನಡೆಸಿದ್ದಾರೆ. ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಬದಲಾವಣೆ ಆದಾಗಲೆಲ್ಲ ನಮ್ಮ ಆಸ್ತಿ ಮೇಲೆ ವ್ಯಾಜ್ಯವಿರುವ ಬಗ್ಗೆ ಹಾಗೂ ಖಾತೆ ಬದಲಾವಣೆ ಮಾಡದಂತೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೂ ಈ ವಿಷಯ ತಿಳಿಸಿದರೂ ಪ್ರಭಾವಕ್ಕೆ ಒಳಗಾಗಿ ಖಾತೆ ಬದಲಾವಣೆ ಮುಂದುವರೆಸುವ ಸೂಚನೆ ಸಿಕಿರುವುದರಿಂದ, ಪ್ರತಿಭಟನೆ ಕೈಗೊಳ್ಳಬೇಕಾಯಿತು. ಇಂದು ಮುಖ್ಯಾಧಿಕಾರಿ ಅವರು ಜಿಲ್ಲಾಧಿಕಾರಿಗಳ ಸಭೆ ಹೋಗಿದ್ದಾರೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದರಿಂದ, ಕುಟುಂಬದ ವರು ಶಾಂತಿಯುತ ಪ್ರತಿಭಟನೆ ಮಾಡಿದ್ದೇವೆ. ನಮ್ಮ ಕುಟುಂಬವನ್ನು ಅಲೆದಾಡಿಸುವ, ಸಂಕಷ್ಟಕ್ಕೆ ಈಡು ಮಾಡುವ ದೃಷ್ಟಿಯಿಂದ ಬೆನಾಮಿ ವ್ಯಕ್ತಿಗಳು ತೊಂದರೆ ನೀಡುತ್ತಿದ್ದಾರೆ. ಸಿವಿಲ್ ವ್ಯಾಜ್ಯವಿರುವ ನಮ್ಮ ಪಿತ್ರಾರ್ಜಿತ ಆಸ್ತಿಯ ಖಾತೆ ಬದಲಾವಣೆಗೆ ಅಧಿಕಾರಿಗಳು ಮುಂದಾದರೆ ಪಂಚಾಯಿತಿ ಮುಂದೆ ಉಗ್ರವಾಗಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.