ಕನ್ನಡಪ್ರಭ ವಾರ್ತೆ ವಿಜಯಪುರ ನ್ಯಾಯ ವ್ಯವಸ್ಥೆಯಲ್ಲಿ ನಿಖರವಾದ ತನಿಖೆ ಮತ್ತು ದೃಢವಾದ ಸಾಕ್ಷ್ಯಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ.ಎ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನ್ಯಾಯ ವ್ಯವಸ್ಥೆಯಲ್ಲಿ ನಿಖರವಾದ ತನಿಖೆ ಮತ್ತು ದೃಢವಾದ ಸಾಕ್ಷ್ಯಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ.ಎ ಹೇಳಿದರು.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕಾನೂನು ಶಾಲೆ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗ, ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಪರಾಧ ಕಾನೂನುಗಳು, ವಿಶೇಷ ಕಾಯಿದೆಗಳು ಮತ್ತು ಫೋರೆನ್ಸಿಕ್ ವಿಜ್ಞಾನ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಫೋರೆನ್ಸಿಕ್ ವಿಜ್ಞಾನವು ನ್ಯಾಯ ನಿರ್ಣಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ತಂತ್ರಜ್ಞಾನ ಮತ್ತು ಕಾನೂನುಗಳ ಸಮನ್ವಯ ಅಗತ್ಯವಾಗಿದೆ ಎಂದು ಅವರು ಹೇಳಿದರು.

ವಿಜಯಪುರ ಎಸ್ಪಿ ಲಕ್ಷ್ಮಣ.ಬಿ ನಿಂಬರಗಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸೈಬರ್ ಅಪರಾಧಗಳು ಮತ್ತು ಸಂಘಟಿತ ಅಪರಾಧಗಳು ಹೆಚ್ಚುತ್ತಿದ್ದು, ತನಿಖೆ ಪ್ರಕ್ರಿಯೆಯಲ್ಲಿ ವಿಜ್ಞಾನಾಧಾರಿತ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಕಾನೂನು ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಬೇಕು ಎಂದು ಕರೆ ನೀಡಿದರು.

ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಮಾತನಾಡಿ, ಕಾನೂನು ಮತ್ತು ವೈದ್ಯಕೀಯ ಕ್ಷೇತ್ರಗಳ ನಡುವೆ ಸಮನ್ವಯವು ಉತ್ತಮ ನ್ಯಾಯ ವ್ಯವಸ್ಥೆ ರೂಪಿಸಲು ಸಹಾಯಕವಾಗುತ್ತದೆ. ಇಂದಿನ ಸಮಾಜದಲ್ಲಿ ಸಾಮಾಜಿಕ ಜಾಲತಾಣಗಳನ್ನು ಯುವಕರು ಜವಾಬ್ದಾರಿಯುತವಾಗಿ ಬಳಸಬೇಕು. ಇಂಥ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮನೋಭಾವನೆ ಮತ್ತು ವೃತ್ತಿಪರ ಕೌಶಲ್ಯಗಳನ್ನು ಬೆಳೆಸುತ್ತವೆ ಎಂದು ಹೇಳಿದರು.ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಕಾನೂನು ಶಾಲೆಯ ಡೀನ್ ಮತ್ತು ಪ್ರಾಚಾರ್ಯ ಡಾ.ರಘುವೀರ ಕುಲಕರ್ಣಿ, ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ತೇಜಸ್ವಿನಿ ವಲ್ಲಭ, ಸಂಪನ್ಮೂಲ ವ್ಯಕ್ತಿಗಳಾದ ಡಿ.ಎಸ್.ಪಿ (ಸಿಐಡಿ) ಘಟಕದ ಯಶವಂತ, ಎಫ್‌.ಎಸ್‌.ಎಲ್ ವಿಭಾಗದ ನಿವೃತ್ತ ಉಪನಿರ್ದೇಶಕ ವಿ.ಜಿ.ನಾಯಕ, ನಿವೃತ್ತ ಸಹಾಯಕ ನಿರ್ದೇಶಕ ಬಿ.ಸಿ.ರವೀಂದ್ರ, ಸಿಐಡಿ ಘಟಕದ ಕಾನೂನು ಹಿರಿಯ ಸಲಹೆಗಾರ ಮಹೇಶ ವೈದ್ಯ, ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿ, ಜಿಲ್ಲಾ ಅಭಿಯೋಜಕರು, ಕಾನೂನು ಶಾಲೆಯ ವಿದ್ಯಾರ್ಥಿಗಳು, ಹಾಗೂ ಫೋರೆನ್ಸಿಕ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕಿ ಲಾವಣ್ಯ ಕುಲಕರ್ಣಿ ಸ್ವಾಗತಿಸಿದರು. ಫೋರೆನ್ಸಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಈಶ್ವರ ನವಲಗುಂದ ವಂದಿಸಿದರು.