ಸರ್ಕಾರದ ವಿವಿಧ ಯೋಜನೆ ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಗಳಡಿಯಲ್ಲಿ ಸಬ್ಸಿಡಿ ಸಹಿತ ಬ್ಯಾಂಕ್ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಸರ್ಕಾರದ ವಿವಿಧ ಯೋಜನೆ ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಗಳಡಿಯಲ್ಲಿ ಸಬ್ಸಿಡಿ ಸಹಿತ ಬ್ಯಾಂಕ್ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಜನತಾ ಬಜಾರ್ ಎದುರಿನ ಶ್ರೀ ಲಕ್ಷ್ಮೀ ಎಂಟರ್‌ಪ್ರೈಸಸ್ ಹೆಸರಿನ ಕಚೇರಿಯ ಮೂಲಕ ಸಾಲ ಕೊಡಿಸುವುದಾಗಿ ಭರವಸೆ ನೀಡಿ ಕಳೆದ ಒಂದು ತಿಂಗಳಿನಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ, ಒಂದು ತಿಂಗಳೊಳಗೆ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಲಕ್ಷಾಂತರ ಹಣ ಪಡೆದ ಆರೋಪಿ ಬೆಟಗೇರಿಯ ಯಮನೂರ ತಂದೆ ಹುಲಗೆಪ್ಪ ಗುರಿಕಾರ ಎಂದು ಗುರುತಿಸಲಾಗಿದೆ.

ಬಂಧಿತನಿಂದ ಒಂದು ಕಾರು, ₹೧.೫೦ ಲಕ್ಷ ನಗದನ್ನು ಶಿರಹಟ್ಟಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸರ್ಕಾರದ ಸಬ್ಸಿಡಿ ಯೋಜನೆಗಳಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದು ಸ್ವಂತ ಉದ್ಯೋಗ ಆರಂಭಿಸಬಹುದು ಎಂಬ ನಿರೀಕ್ಷೆಯಿಂದ ಅನೇಕ ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರು ಹಣ ನೀಡಿದ್ದರು. ೩೦ರಿಂದ ೩೫ ಜನರಿಂದ ಸುಮಾರು ೫ ಲಕ್ಷಕ್ಕೂ ಹೆಚ್ಚು ಹಣ ಪಡೆದು ಬ್ಯಾಂಕ್‌ಗಳಿಗೆ ಯಾವ ಅರ್ಜಿಯನ್ನು ಸಲ್ಲಿಸದೇ ಜನರಿಗೆ ಬೋಗಸ್ ಚಕ್ ನೀಡಿ ಪರಾರಿಯಾಗಿದ್ದ ಆರೋಪಿ ಸಧ್ಯ ಪೊಲೀಸರ ಬಲೆಗೆ ಬಿದ್ದಾನೆ.

ತಾಲೂಕಿನ ಜಲ್ಲಿಗೇರಿ ತಾಂಡಾದ ಸಂತೋಷ ಬಡ್ಡೆಪ್ಪ ಲಮಾಣಿ ನೀಡಿದ ದೂರಿನ ಮೇರೆಗೆ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬ್ಯಾಡಗಿ ಸಮೀಪ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

ಹಲವು ಕಡೆ ವಂಚನೆಯ ಆರೋಪ:

ಪ್ರಕರಣದ ಪ್ರಮುಖ ಆರೋಪಿ ಯಮನೂರ ಹುಲಗೆಪ್ಪ ಗುರಿಕಾರ ಈ ಹಿಂದೆ ರಾಯಚೂರ ಜಿಲ್ಲೆಯ ಲಿಂಗಸುಗೂರ ಹಾಗೂ ಹೊಸಪೇಟೆ ನಗರಗಳಲ್ಲಿ ಇದೇ ಮಾದರಿಯ ಕೃತ್ಯ ಎಸಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿರುವ ಆರೋಪವಿದೆ. ಈ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಶಿರಹಟ್ಟಿ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.