ಮಹಿಳೆಯನ್ನು ನಂಬಿಸಿ 16 ಲಕ್ಷ ರು. ಪಡೆದು ವಂಚಿಸಿದಲ್ಲದೇ ಆಕೆಗೆ ಲೈಂಗಿಕ ಕಿರುಕುಳ ನೀಡಿ, ಜಾತಿ ನಿಂದನೆ ಮಾಡಿದ ಆರೋಪದಡಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್​ಇ) ಪೊಲೀಸರು, ಎನ್​ಜಿಒವೊಂದರ ಅಧ್ಯಕ್ಷನನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಿಳೆಯನ್ನು ನಂಬಿಸಿ 16 ಲಕ್ಷ ರು. ಪಡೆದು ವಂಚಿಸಿದಲ್ಲದೇ ಆಕೆಗೆ ಲೈಂಗಿಕ ಕಿರುಕುಳ ನೀಡಿ, ಜಾತಿ ನಿಂದನೆ ಮಾಡಿದ ಆರೋಪದಡಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್​ಇ) ಪೊಲೀಸರು, ಎನ್​ಜಿಒವೊಂದರ ಅಧ್ಯಕ್ಷನನ್ನು ಬಂಧಿಸಿದ್ದಾರೆ.

43 ವರ್ಷದ ಮಹಿಳೆ ನೀಡಿದ ದೂರಿನನ್ವಯ ಮೊಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ದಂಪತಿ ಅನೋನ್ಯವಾಗಿದ್ದಾಗ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದರು. ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಪತ್ನಿಗೆ ತಿಳಿಯದಂತೆ ಶಾಲೆಯನ್ನು ಪತಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಪತಿಯೊಂದಿಗೆ ಜಗಳವಾಡಿ. ಮಾಧ್ಯಮದ ಸಹಾಯ ಪಡೆಯಲು ನಿರೀಕ್ಷಿಸಿದ ಮಹಿಳೆಗೆ ಪರಿಚಯಸ್ಥರ ಮೂಲಕ ಖಾಸಗಿ ಮಾಧ್ಯಮವೊಂದರ ಎಂಡಿ ಹಾಗೂ ಸ್ವಯಂಸೇವಾ ಸಂಸ್ಥೆಯೊಂದರ ಅಧ್ಯಕ್ಷ ಎಂದು ಹೇಳಿಕೊಂಡಿದ್ದ ಆರೋಪಿ ಹನೀಫ್​ನನ್ನು ಸಂಪರ್ಕಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆ ಮಾಲೀಕತ್ವ ಕೊಡಿಸುವ ಭರವಸೆ:

ತಮ್ಮ ಎನ್​​ಜಿಒ ಮೂಲಕ ವಿವಾದವಿರುವ ಪ್ರಕರಣಗಳನ್ನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಮಹಿಳೆಯನ್ನ ನಂಬಿಸಿದ್ದ. ಸುದ್ದಿ ಪ್ರಸಾರ ಮಾಡಿ ಶಾಲೆ ಮಾಲೀಕತ್ವವನ್ನು ನಿಮಗೆ ವಾಪಸ್‌ ಕೊಡಿಸುವುದಾಗಿ ಮಹಿಳೆಗೆ ಭರವಸೆ ನೀಡಿದ್ದ. ಇದೇ ವಿಚಾರವಾಗಿ ಆರೋಪಿಯನ್ನು ಆಗಾಗ ಭೇಟಿಯಾಗುತ್ತಿದ್ದರು. ಕೆಲ ತಿಂಗಳ ಬಳಿಕ ಎನ್​ಜಿಒ ಮಹಿಳಾ ವಿಭಾಗದ ರಾಜಾಧ್ಯಕ್ಷೆಯಾಗಿ ನೇಮಿಸಿದ್ದ.

ಶಾಲೆ ವಾಪಸ್ ಕೊಡಿಸುವ ಬಗ್ಗೆ ಪ್ರಸ್ತಾಪಿಸಿದಾಗ ಆರೋಪಿಯು ನನಗೆ ಗೊತ್ತಿರುವ ಕೇರಳ ಮೂಲದ ಗುರುಗಳ ಪರಿಚಯವಿದೆ. ಅವರಿಂದ ಕೆಲ ಪೂಜೆಗಳನ್ನು ಮಾಡಿಸಿದರೆ ಒಳ್ಳೆಯದಾಗುತ್ತೆ ಎಂದು ಹೇಳಿದ್ದ. ಅದರಂತೆ ಜ್ಯೋತಿಷಿ ಅವರ ಮನೆಗೆ ಆಗಾಗ ಹೋಗುತ್ತಿದ್ದರು. ಪ್ರತಿ ಬಾರಿ ಮನೆಗೆ ಹೋದಾಗ ಟೀಯಲ್ಲಿ ಮದ್ದು ಬೆರೆಸಿ ಕೊಡುತ್ತಿದ್ದ. ಬಳಿಕ ಲೈಂಗಿಕವಾಗಿ ಮಾತನಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ. ಇದೇ ವೇಳೆ ಹನೀಫ್ 7 ಲಕ್ಷ ರು. ಹಣ ಪಡೆದುಕೊಂಡಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.ಇದಾದ ಎರಡು ವರ್ಷಗಳ ಬಳಿಕ ಆರೋಪಿಯು ತನ್ನ ಕಚೇರಿಯನ್ನು ನಾಯಂಡಹಳ್ಳಿಗೆ ವರ್ಗಾಯಿಸಿದ್ದ. ಅಲ್ಲಿಗೆ ಹೋದಾಗ ಆರೋಪಿ ನನ್ನ ಇಚ್ಚೆಗೆ ವಿರುದ್ಧವಾಗಿ ಮೈ ಮುಟ್ಟಿ ಕಿರುಕುಳ ನೀಡಿದ್ದ. ಇದನ್ನು ಪ್ರಶ್ನಿಸಿದಾಗ ನನ್ನನ್ನ ಮದುವೆಯಾಗು ಎಲ್ಲವೂ ಸರಿಯಾಗಲಿದೆ. ವಿವಾಹ ಬಳಿಕ ಮತಾಂತರವಾಗು ಎಂದು ಒತ್ತಾಯಿಸಿದ್ದ.

ಈತನ ದೈಹಿಕ ಹಾಗೂ ಮಾನಸಿಕ ಕಿರುಕುಳ ದಿನೇ ದಿನೇ ಹೆಚ್ಚಾಗಿತ್ತು. ಒಟ್ಟು 16 ಲಕ್ಷ ರು. ನೀಡಿದರೂ ಶಾಲೆಯನ್ನು ಮರಳಿ ಕೊಡಿಸಲಿರಲಿಲ್ಲ. ಈ ಬಗ್ಗೆ ಆತನ ಮನೆಗೆ ಹೋಗಿ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿದ್ದ ಎಂದು ಮಹಿಳೆಯು ಆರೋಪಿಸಿ ಬ್ಯಾಟರಾಯಪುರ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣ ಡಿಸಿಆರ್​ಇಗೆ ವರ್ಗಾವಣೆಯಾಗಿತ್ತು. ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.