ಸಾರಾಂಶ
ಶಾಂತಳ್ಳಿ ಸಮೀಪದ ಗುಡ್ಡಳ್ಳಿಯಲ್ಲಿ ನಡೆದಿದ್ದ ಕಾಫಿ ಕಳವು ಪ್ರಕರಣ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಶಾಂತಳ್ಳಿ ಸಮೀಪದ ಗುಡ್ಡಳ್ಳಿಯಲ್ಲಿ ನಡೆದಿದ್ದ ಕಾಫಿ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ಜನವರಿ 31ರಂದು ಗುಡ್ಡಳ್ಳಿ ಗ್ರಾಮದ ಸಂತೋಷ್ ಅವರಿಗೆ ಸೇರಿದ 3 ಚೀಲ ಪಾರ್ಚಮೆಂಟ್ ಕಾಫಿಯನ್ನು ಗಣಗೂರು ಗ್ರಾ.ಪಂ.ನ ಗೋಣಿಮರೂರು ನಿವಾಸಿ ಚಂದ್ರಪ್ಪ ಎಂಬಾತ ಕಳವು ಮಾಡಿ ಪಟ್ಟಣದ ಡಿಪೋವೊಂದಕ್ಕೆ ಮಾರಾಟ ಮಾಡಿದ್ದ ಎನ್ನಲಾಗಿದೆ.
ಬುಧವಾರ ಪಟ್ಟಣದಲ್ಲಿ ನಡೆದ ಹಸು ಕಳವು ಪ್ರಕರಣದಲ್ಲಿ ಚಂದ್ರಪ್ಪ ಭಾಗಿಯಾಗಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದ ಸಂದರ್ಭ, ಗುಡ್ಡಳ್ಳಿ ಗ್ರಾಮದಿಂದ ಕಾಫಿಯನ್ನು ಕಳವು ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ.ಈ ಹಿನ್ನೆಲೆ ಪೊಲೀಸರು ಆರೋಪಿಯೊಂದಿಗೆ ಡಿಪೋಗೆ ತೆರಳಿ, ಮಾರಾಟ ಮಾಡಿದ್ದ ಕಾಫಿಯನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಚಂದ್ರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಸು ಕಳವು ಪ್ರಕರಣದಲ್ಲಿ ಈಗಾಗಲೇ ಈರ್ವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ.