ಸಾರಾಂಶ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಬಂಧಿಸಲು ತೆರಳಿದ ಯಲ್ಲಾಪುರ ಪೊಲೀಸರ ಮೇಲೆ ಆರೋಪಿಯೊಬ್ಬ ಹಲ್ಲೆ ನಡೆಸಿ, ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಮಂಗಳೂರಿನ ಮಹಮ್ಮದ್ ರಫೀಕ್ ಇಸ್ಮಾಯಿಲ್ ಎಂಬಾತನನ್ನು ಬ್ಯಾಂಕ್ ದರೋಡೆ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲು ಯಲ್ಲಾಪುರ ಪೊಲೀಸರು ಬೆಳಗಾವಿಗೆ ತೆರಳಿದ್ದರು. ಬೆಳಗಾವಿಯ ಖಾಸಭಾಗ ವಾಲಿ ಚೌಕದ ಬಳಿ ಇರುವ ವೊಡ್ಕಾ ಬಾರ್ ಬಳಿ ಈತನನ್ನು ಬಂಧಿಸಲು ಯತ್ನಿಸಿದಾಗ ಪಿಎಸ್‌ಐಗಳಾದ ರಾಜಶೇಖರ ಚೆನ್ನಪ್ಪ ವಂದಲಿ ಹಾಗೂ ಸಿದ್ದಪ್ಪ ಗುಡಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅವರನ್ನು ತಪ್ಪಿಸಿ ಆರೋಪಿಯನ್ನು ಹಿಡಿಯಲು ಹೋದ ಸಿಬ್ಬಂದಿ ಮಹಮ್ಮದ್ ಶಫಿ ಮೇಲೂ ಹಲ್ಲೆ ಮಾಡಿದ್ದಾನೆ.
ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ಚಾಕುವಿನಿಂದ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಾಗೂ ಆತ್ಮಹತ್ಯೆಗೆ ಯತ್ನಿಸಿದ ಮಹಮ್ಮದ್ ರಫೀಕ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಕ್ಕಳ ದತ್ತು ಹೆಸರಿನಲ್ಲಿ ಮೋಸ: ಐವರು ವಿರುದ್ಧ ಪ್ರಕರಣಕಾನೂನುಬದ್ಧವಾಗಿ ಮಗು ದತ್ತು ಪಡೆಯಲು ಬಯಸಿದ ದಂಪತಿಯನ್ನು ವಂಚಿಸಿರುವ ಘಟನೆ ಅಂಕೋಲಾದಲ್ಲಿ ಬೆಳಕಿಗೆ ಬಂದಿದೆ.ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕುಮಟಾದವರಾದ ಮಾಲಿನಿ ಗಣಪತಿ ಅಂಬಿಗೆ ಅಲಿಯಾಸ್ ಮಾಲಿನಿ ಶ್ರೀಧರ ಕುಮಟಾಕರ, ಶ್ರೀಧರ ಕುಮಟಾಕರ, ಹೊನ್ನಾವರದರಾದ ಲೋಹಿತ ಈಶ್ವರ ತಾಂಡೇಲ, ರಾಜೇಂದ್ರ ಮೇಸ್ತಾ ಹಾಗೂ ರಾಘವೇಂದ್ರ ಉದಯ ನಾಯ್ಕ ಕುಮಟಾ ಮೇಲೆ ಪ್ರಕರಣ ದಾಖಲಾಗಿದೆ.ಘಟನೆಯ ವಿವರ:
ಮಕ್ಕಳಿಲ್ಲದ ಕಾರಣ ತೆಂಕಣಕೇರಿಯ ದಂಪತಿ ಕಾನೂನುಬದ್ಧವಾಗಿ ಮಗು ದತ್ತು ಪಡೆಯಲು ಪ್ರಯತ್ನಿಸುತ್ತಿದ್ದರು. ಈ ವಿಷಯವನ್ನು ತಮ್ಮ ಸಂಬಂಧಿ ಹೊನ್ನಾವರದ ಲೋಹಿತ ಈಶ್ವರ ತಾಂಡೇಲ ಅವರ ಬಳಿ ಹೇಳಿಕೊಂಡಾಗ, ತಾನು ನಿಮಗೆ ಕಾನೂನುಬದ್ಧವಾಗಿ ಗಂಡು ಮಗು ದೊರಕಿಸುವಲ್ಲಿ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ಮಾಲಿನಿ ಶ್ರೀಧರ ಕುಮಟಾಕರ ಅವರನ್ನು ಭೇಟಿ ಮಾಡಿಸಿದ್ದ.ನಂತರ 2024 ಸೆ. 12ರಂದು ಗಂಡು ಮಗು ನೀಡುವ ಸಲುವಾಗಿ ತುರ್ತು ಹಣ ಬೇಕಾಗಿದೆ ಎಂದು ತಿಳಿಸಿ ಅಂಕೋಲಾದ ಎಸ್‌ಬಿಐ ಎದುರು ಕಾರಿನಲ್ಲಿ ಬಂದ ಮಾಲಿನಿ ಗಣಪತಿ ಅಂಬಿಗೆ ಅಲಿಯಾಸ್ ಮಾಲಿನಿ ಶ್ರೀಧರ ಕುಮಟಾಕರ, ಶ್ರೀಧರ ಕುಮಟಾಕರ ಅವರು ತಮ್ಮ ಕಾರಿನ ಚಾಲಕ ರಾಘವೇಂದ್ರ ಉದಯ ನಾಯ್ಕ ಕುಮಟಾ ಬಳಿ ₹3 ಲಕ್ಷದ ಚೆಕ್ ಹಾಗೂ ₹1 ಲಕ್ಷ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ತಿಳಿಸಿದ್ದರು. ಅದರನ್ವಯ ₹4 ಲಕ್ಷವನ್ನು ಅವರಿಗೆ ದಂಪತಿ ಸಂದಾಯ ಮಾಡಿದ್ದರು.ಆನಂತರ ಮತ್ತೆ ವಕೀಲರ ಶುಲ್ಕ ಹಾಗೂ ದತ್ತು ಶುಲ್ಕ ಮತ್ತು ಕಾರ ಬಾಡಿಗೆಗಾಗಿ ₹50 ಸಾವಿರ ಬೇಡಿಕೆ ಇಟ್ಟಾಗ 2024 ಸೆ. 29ರಂದು ಮತ್ತೆ ₹50 ಸಾವಿರವನ್ನು ದಂಪತಿ ವರ್ಗಾಯಿಸಿದ್ದರು. ಆನಂತರ ಮತ್ತೆ ಮಗು ದತ್ತು ಪಡೆಯಲು ಬೇರೆ ಕಾನೂನುಗಳಿವೆ, ಅದಕ್ಕೆ ₹2 ಲಕ್ಷ ನೀಡಬೇಕು ಎಂದಾಗ ಆಗ ದಂಪತಿ ನಿರಾಕರಿಸಿದ್ದಾರೆ. ಆಗ ಆರೋಪಿತರು ಅಸಭ್ಯವಾಗಿ ಮಾತನಾಡಿದ್ದಾರೆ.ನಿಮ್ಮ ಹಣ ಹಿಂತಿರುಗಿಸಲು 6ರಿಂದ 9 ತಿಂಗಳು ಬೇಕು, ಮತ್ತೆ ಕರೆ ಮಾಡಿದರೆ ಮನೆಗೆ ಬಂದು ಕಟ್ಟಿ ಹಾಕಿ ಹೊಡೆಯುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಆರೋಪಿತರ ವಿರುದ್ಧ ಮೋಸ, ವಂಚನೆ ಮತ್ತು ಬೆದರಿಕೆ ಆರೋಪ ಮಾಡಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))