ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ

| Published : Apr 21 2024, 02:25 AM IST

ಸಾರಾಂಶ

ತಾಳಿಕೋಟೆ: ಹುಬ್ಬಳ್ಳಿಯಲ್ಲಿ ಯುವತಿ ನೇಹಾಳನ್ನು ಕ್ರೂರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ತಾಳಿಕೋಟೆ ತಾಲೂಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ: ಹುಬ್ಬಳ್ಳಿಯಲ್ಲಿ ಯುವತಿ ನೇಹಾಳನ್ನು ಕ್ರೂರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ತಾಳಿಕೋಟೆ ತಾಲೂಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.ಈ ವೇಳೆ ಮಾತನಾಡಿದ ಎಬಿವಿಪಿ ಕಾರ್ಯಕರ್ತ ವಿಠ್ಠಲಸಿಂಗ್ ಹಜೇರಿ, ರಾಜ್ಯದಲ್ಲಿ ಮೇಲಿಂದ ಮೇಲೆ ವಿದ್ಯಾರ್ಥಿಗಳ ಮೇಲಿನ ದಾಳಿ ಘಟನೆಗಳು ಹೆಚ್ಚುತ್ತಿದ್ದು, ಜಿಹಾದಿ ಮನಸ್ಥಿತಿಯ ಯುವಕ ಫಯಾಜ್ ಹಾಡುಹಗಲೇ ಚಾಕುವಿನಿಂದ ಇರಿದು ನೇಹಾಳನ್ನು ಕೊಲೆ ಮಾಡಿದ್ದಾನೆ. ಇದು ವಿದ್ಯಾರ್ಥಿ ಸಮುದಾಯಕ್ಕೆ ಭೀತಿ ಹುಟ್ಟಿಸಿದೆ. ಜಿಹಾದಿ ಮನಸ್ಥಿತಿಯ ಫಯಾಜ್‌ ನೇಹಾ ಹಿರೇಮಠಳ ಹಿಂದೆ ಬಿದ್ದಿದ್ದಲ್ಲದೇ ಒತ್ತಾಯಪೂರ್ವಕವಾಗಿ ಪ್ರೀತಿಸಬೇಕೆಂದು ಬೆನ್ನಟ್ಟಿದ್ದಾನೆ. ಆದರೆ, ಯುವತಿ ಪ್ರೀತಿಯ ನಾಟಕಕ್ಕೆ ಒಳಗಾಗದಿದ್ದಾಗ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಹೆಣ್ಣು ಮಕ್ಕಳಿಗೆ ಜೀವ ರಕ್ಷಣೆಯ ಗ್ಯಾರಂಟಿ ಕೊಟ್ಟಿಲ್ಲ. ಸರ್ಕಾರ ರಾಜ್ಯದ ಮಹಿಳೆಯರ ಪಾಲಿಗೆ ಇದ್ದು ಸತ್ತಂತಾಗಿದೆ. ಮುಖ್ಯಮಂತ್ರಿಗಳು ನೇಹಾ ಹಿರೇಮಠ ಕುಟುಂಬಸ್ಥರ ಕ್ಷಮೆಯಾಚಿಸಬೇಕು, ಫಯಾಜ್‌ಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ತಾಲೂಕ ಸಂಚಾಲಕ ಗುರುಪ್ರಸಾದ ಹಗರಗುಂಡ ಮಾತನಾಡಿ, ಯಾರಿಗೂ ಪ್ರವೇಶವಿಲ್ಲದ ಕಾಲೇಜ್‌ ಕ್ಯಾಂಪಸ್‌ನೊಳಗೆ ನುಗ್ಗಿ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲು ಸಾಧ್ಯವಾಗಿದೆ ಎಂದರೆ ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದಂತಾಗಿದೆ. ಈ ಘಟನೆಯಿಂದ ರಾಜ್ಯದ ವಿದ್ಯಾರ್ಥಿ ಸಮುದಾಯ ಬೆಚ್ಚಿ ಬಿದ್ದಿದೆ. ಇಂತಹ ಘಟನೆ ಮರುಕಳಿಸದಂತೆ ಕೃತ್ಯ ನಡೆಸಿದ ಜಿಹಾದಿ ಮನಸ್ಥಿತಿಯ ಫಯಾಜ್‌ನನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು. ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ವೇಳೆ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ಪ್ರತಿಭಟನೆಯಲ್ಲಿ ಎಬಿವಿಪಿ ಸಂಘಟನೆಯ ಸಂಪ್ರೀತ್, ನಾರಾಯಣಸಿಂಗ್, ಸುರೇಶ ಹಜೇರಿ, ಗುರುರಾಜ್, ಸಂಗಮೇಶ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.