ಪ್ರಕರಣವೊಂದರಲ್ಲಿ ಬಂಧನಕ್ಕೆ ಪೊಲೀಸರು ಕಾರಣ ನೀಡದ್ದಕ್ಕೆ ಆರೋಪಿಗೆ ಹೈಕೋರ್ಟ್‌ ಬೇಲ್‌!

| N/A | Published : Mar 17 2025, 12:31 AM IST / Updated: Mar 17 2025, 10:13 AM IST

Karnataka highcourt
ಪ್ರಕರಣವೊಂದರಲ್ಲಿ ಬಂಧನಕ್ಕೆ ಪೊಲೀಸರು ಕಾರಣ ನೀಡದ್ದಕ್ಕೆ ಆರೋಪಿಗೆ ಹೈಕೋರ್ಟ್‌ ಬೇಲ್‌!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸುವ ಸಮಯದಲ್ಲಿ ಸೂಕ್ತ ಕಾರಣ ನೀಡದ ಪೊಲೀಸರ ಕರ್ತವ್ಯ ಲೋಪ ಪರಿಗಣಿಸಿ ಬಂಧಿಸಲ್ಪಟ್ಟ ವ್ಯಕ್ತಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

 ಬೆಂಗಳೂರು : ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸುವ ಸಮಯದಲ್ಲಿ ಸೂಕ್ತ ಕಾರಣ ನೀಡದ ಪೊಲೀಸರ ಕರ್ತವ್ಯ ಲೋಪ ಪರಿಗಣಿಸಿ ಬಂಧಿಸಲ್ಪಟ್ಟ ವ್ಯಕ್ತಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮಹಿಳೆಯನ್ನು ಪ್ರೇರೇಪಿಸಿದ ಆರೋಪ ಮೇಲೆ ಉಡುಪಿಯ ಮಹಿಳಾ ಠಾಣೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಅನುದೀಪ್‌ ಪುತ್ತೂರು ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ ಗೌಡರ್‌ ಅವರ ಪೀಠ ಈ ಆದೇಶ ಮಾಡಿದೆ.

ಬಂಧನಕ್ಕೆ ಪೊಲೀಸರು ಸೂಕ್ತ ಕಾರಣ ನೀಡಿಲ್ಲ. ಪೊಲೀಸರ ಈ ನಡೆ ಸಂವಿಧಾನದ ಪರಿಚ್ಛೇದ 22(1)ರ ಉಲ್ಲಂಘನೆ ಎಂದು ಅರ್ಜಿದಾರರ ವಾದವಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) 2023ರ ಸೆಕ್ಷನ್‌ 48(2) ಅಡಿ ಆರೋಪಿ ಬಂಧನ ವೇಳೆ ನೀಡಿದ ನೋಟಿಸ್‌ನಲ್ಲೂ ಆರೋಪಿ ವಿರುದ್ಧ ದೂರು ದಾಖಲಾಗಿರುವ ಅಂಶ ಹೊರತುಪಡಿಸಿ ಬಂಧಿಸಲು ಯಾವುದೇ ಕಾರಣ ಬಹಿರಂಗಪಡಿಸಿಲ್ಲ. ಆದ್ದರಿಂದ ಅರ್ಜಿದಾರನನ್ನು ಬಂಧಿಸಿರುವುದು ಸಂವಿಧಾನ ಪರಿಚ್ಛೇದ 22(1)ರ ಉಲ್ಲಂಘನೆಯಾಗಿದ್ದು, ಜಾಮೀನು ನೀಡಬಹುದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ ಪಂಕಜ್‌ ಬನ್ಸಾಲ್‌ ಮತ್ತು ಕೇಂದ್ರ ಸರ್ಕಾರ, ಪ್ರಬೀರ್‌ ಪುರ್ಕಾಯಸ್ತಾ ಮತ್ತು ದೆಹಲಿ ಸರ್ಕಾರ, ವಿಹಾನ್ ಕುಮಾರ್‌ ಮತ್ತು ಹರಿಯಾಣ ಸರ್ಕಾರ ನಡುವಿನ ಪ್ರಕರಣದಲ್ಲಿ ಬಂಧನಕ್ಕೆ ಕಾರಣ ನೀಡದ್ದಕ್ಕೆ ಆರೋಪಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ. ಈ ಆದೇಶ ಪರಿಗಣಿಸಿರುವ ಹೈಕೋರ್ಟ್‌, ಅನುದೀಪ್‌ ಬಿಡುಗಡೆಗೆ ಉಡುಪಿ ಜೈಲು ಅಧೀಕ್ಷಕರಿಗೆ ನಿರ್ದೇಶಿಸಿದೆ. ಪ್ರಕರಣದಲ್ಲಿ 1 ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌, ಅಷ್ಟೇ ಮೊತ್ತಕ್ಕೆ ಭದ್ರತಾ ಖಾತರಿ, ಅಗತ್ಯವಿದ್ದಾಗ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಎಂಬುದೂ ಸೇರಿ ವಿವಿಧ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.

ಅನುದೀಪ್‌ ಮೇಲೆ ಮಹಿಳೆಯೊಬ್ಬರು ಮಹಿಳಾ ಪೊಲೀಸ್‌ ಠಾಣೆಗೆ 2025ರ ಫೆ.11ರಂದು ದೂರು ದಾಖಲಿಸಿದ್ದರು. ಅದನ್ನಾಧರಿಸಿ ಭಾರತೀಯ ನ್ಯಾಯ ಸಂಹಿತೆ-2023ರ (ಬಿಎನ್‌ಎಸ್‌) ಸೆಕ್ಷನ್‌ 64 (2) ಮತ್ತು 318(2) ಅಡಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ಅನುದೀಪ್‌ನನ್ನು ಬಂಧಿಸಿದ್ದರು.

ಅರೆಸ್ಟ್‌ ಮೆಮೊ ಲೋಪದಿಂದಾಗೇ ನಟ ದರ್ಶನ್‌ಗೂ ಸಿಕ್ಕಿತ್ತು ಬೇಲ್‌:

ಆರೋಪಿಗಳನ್ನು ಬಂಧಿಸುವಾಗ ಪೊಲೀಸರು ಬಂಧನಕ್ಕೆ ಕಾರಣ ನೀಡಿ ಅರೆಸ್ಟ್‌ ಮೆಮೊ ವಿತರಿಸಬೇಕು. ಕಾರಣಗಳನ್ನು ನೀಡದಿರುವುದು ಸಂವಿಧಾನದ ಪರಿಚ್ಛೇದ ಸೆಕ್ಷನ್‌ 22(1)ರ ಸ್ಪಷ್ಟ ಉಲ್ಲಂಘನೆ. ಪಂಕಜ್‌ ಬನ್ಸಾಲ್‌ ಮತ್ತು ಕೇಂದ್ರ ಸರ್ಕಾರ ಸೇರಿ ಇನ್ನಿತರ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಇದೇ ತೀರ್ಪು ನೀಡಿದೆ. ಈ ಆದೇಶ ಆಧರಿಸಿಯೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ನಟಿ ಪವಿತ್ರಾ ಗೌಡಗೂ ಹೈಕೋರ್ಟ್‌ ಜಾಮೀನು ನೀಡಿತ್ತು. ಇದೇ ರೀತಿ ಕೋಟ್ಯಂತರ ಹಣ ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಐಶ್ವರ್ಯಾ ಬಿಡುಗಡೆಗೂ ಆದೇಶಿಸಿತ್ತು. ಚಿನ್ನ ಸ್ಮಗ್ಲಿಂಗ್‌ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ ಸಹ ಜಾಮೀನಿಗಾಗಿ ಮಂಡಿಸಿದ ವಾದದಲ್ಲಿ ಅರೆಸ್ಟ್‌ ಮೆಮೊವಿನಲ್ಲಿ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ವಾದಿಸಿದ್ದಾರೆ.