ಸಾರಾಂಶ
ಮನೆಯ ಬಾಗಿಲು ಹೊಡೆದು 15 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ದಾಬಸ್‍ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಮನೆಯ ಬಾಗಿಲು ಹೊಡೆದು 15 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ದಾಬಸ್‍ಪೇಟೆ ಪೊಲೀಸರು ಬಂಧಿಸಿದ್ದಾರೆ.ಸೋಂಪುರ ಹೋಬಳಿಯ ಗೊಟ್ಟಿಕೆರೆ ಗ್ರಾಮದ ವಾಸಿ ಗೋಪಾಲ (49) ಬಂಧಿತ ಆರೋಪಿಯಾಗಿದ್ದು, ಪೈಟಿಂಗ್ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದನು. ಈತನು ಮೂಲತಃ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ದೇವಯ್ಯನಪಾಳ್ಯ ಗ್ರಾಮದವನು.ಘಟನಾ ವಿವರ: ಫೆ.12ರಂದು ಗೊಟ್ಟಿಕೆರೆ ಗ್ರಾಮದ ವಾಸಿಯಾದ ದ್ರಾಕ್ಷಾಯಿಣಿ ಎಂಬುವವರು ತನ್ನ ಗಂಡನ ಮನೆಗೆ ಹೋಗಿದ್ದಾಗ ಅದೇ ದಿನ ರಾತ್ರಿ ಬಂಧಿತ ಆರೋಪಿ ಗೋಪಾಲ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಮನೆಯ ಬಾಗಿಲನ್ನು ಹೊಡೆದು ಬೀರುವಿನಲ್ಲಿದ್ದ 104.18 ಗ್ರಾಂನ ಚಿನ್ನದ ಮಾಂಗಲ್ಯ ಸರ, 60.300 ಗ್ರಾಂ ನ 4 ಚಿನ್ನದ ಬಳೆಗಳು, 19.700 ಗ್ರಾಂನ ಚಿನ್ನದ ನೆಕ್ಲೇಸ್, 13.800ಗ್ರಾಂ ಒಂದು ಜೊತೆ ಹ್ಯಾಂಗಿಂಗ್ಸ್, 177.600 ಗ್ರಾಂನ ಮೂರು ಜೊತೆ ಬೆಳ್ಳಿ ಕಾಲು ಜೈನು ಕದ್ದು ಪರಾರಿಯಾಗಿದ್ದನು.ಕಳ್ಳತನ ಪ್ರಕರಣ ದಾಖಲಿಸಿಕೊಂಡ ದಾಬಸ್‍ಪೇಟೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ತನಿಖೆ ಮಾಡಿದಾಗ ಗೋಪಾಲ ಸಿಕ್ಕಿಬಿದ್ದಿದ್ದು, ಕಳ್ಳತನ ಮಾಡಿ ಮನೆಯ ತಲೆದಿಂಬುವಿನಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ನಂತರ ಪೊಲೀಸರು ಕಳ್ಳತನವಾದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಆರೋಪಿ ಗೋಪಾಲನನ್ನು ಬಂಧಿಸಿದ್ದಾರೆ.