ಅರ್ಹರಿಗೆ ವಸತಿ ಯೋಜನೆಯಲ್ಲಿ ಅನ್ಯಾಯ ಆರೋಪ

| Published : May 16 2024, 12:51 AM IST

ಸಾರಾಂಶ

ಶಾದೀಪೂರ ಗ್ರಾಪಂ ನಿಂದ ಬಸವ ವಸತಿ ಮತ್ತು ಅಂಬೇಡ್ಕರ ವಸತಿ ಯೋಜನೆ ಅಡಿಯಲ್ಲಿ ಶಾದೀಪೂರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಬಲಗೈ ಮತ್ತು ಎಡಗೈ ಸಮುದಾಯಗಳಿಗೆ ಮನೆಗಳು ಮಂಜೂರಿಗೊಳಿಸಿಲ್ಲ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಶಾದೀಪೂರ ಗ್ರಾಪಂ ನಿಂದ ಬಸವ ವಸತಿ ಮತ್ತು ಅಂಬೇಡ್ಕರ ವಸತಿ ಯೋಜನೆ ಅಡಿಯಲ್ಲಿ ಶಾದೀಪೂರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಬಲಗೈ ಮತ್ತು ಎಡಗೈ ಸಮುದಾಯಗಳಿಗೆ ಮನೆಗಳು ಮಂಜೂರಿಗೊಳಿಸಿಲ್ಲ ಎಂದು ಶಾದೀಪೂರ ಡಾ. ಬಿ.ಆರ್. ಅಂಬೇಡ್ಕರ್‌ ನವಯುವಕ ಸಂಘದ ಅಧ್ಯಕ್ಷ ಕುಪೇಂದ್ರ ಬ್ಯಾಗರಿ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸ್ವಜಾತಿಯವರಿಗೆ ಹೆಚ್ಚಿನ ಆದ್ಯತೆ ನೀಡಿ ಇನ್ನುಳಿದ ಜಾತಿ ವರ್ಗಕ್ಕೆ ಭಾರಿ ಅನ್ಯಾಯ ಮಾಡಿದ್ದಾರೆ. ಗ್ರಾಪಂದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಇಬ್ಬರು ಮಹಿಳೆಯರೇ ಆಗಿದ್ದಾರೆ. ಅವರ ಅಧಿಕಾರದಲಿ ಪತಿಯಂದಿರು ಹಸ್ತಕ್ಷೇಪ ನಡೆಸುತ್ತಿದ್ದಾರೆ. ಶಾದೀಪೂರ ಗ್ರಾಪಂದಲ್ಲಿ ಸರಕಾರದ ಯೋಜನೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

೨೦೨೧-೨೨ನೇ ಸಾಲಿನಲ್ಲಿ ವಸತಿ ರಹಿತ ಕಡು ಬಡವರಿಗೆ ಮನೆ ನಿರ್ಮಿಸಿಕೊಳ್ಳುವುದಕ್ಕಾಗಿ ೩೩ಬಸವ ಮತ್ತು ೫೮ ಅಂಬೇಡ್ಕರ ವಸತಿ ಯೋಜನೆ ಅಡಿಯಲ್ಲಿ ಹೆಚ್ಚುವರಿ ಮನೆಗಳು ಸರಕಾರ ಮಂಜೂರಿಗೊಳಿಸಿದೆ. ಆದರೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತಾಂಡಾ ಮತ್ತು ಗ್ರಾಮಗಳನ್ನು ಕಡೆಗಾಣಿಸಿ ಚಾಪಲಾನಾಯಕ ತಾಂಡಾದಲ್ಲಿಯೇ ಎಲ್ಲ ಮನೆಗಳನ್ನು ಮಂಜೂರಿ ಮಾಡಿಕೊಂಡು ಇನ್ನುಳಿದ ಗ್ರಾಮದ ಬಡವರಿಗೆ ಸರಕಾರದ ಯೋಜನೆಗಳಿಂದ ವಂಚಿತಗೊಳಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.