ತಪ್ಪಿಸಿಕೊಳ್ಳಲು ಯತ್ನ, ಆರೋಪಿಗೆ ಯಲ್ಲಾಪುರದಲ್ಲಿ ಗುಂಡೇಟು

| Published : Jul 15 2025, 01:00 AM IST

ತಪ್ಪಿಸಿಕೊಳ್ಳಲು ಯತ್ನ, ಆರೋಪಿಗೆ ಯಲ್ಲಾಪುರದಲ್ಲಿ ಗುಂಡೇಟು
Share this Article
  • FB
  • TW
  • Linkdin
  • Email

ಸಾರಾಂಶ

ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದ ಆರೋಪಿಯನ್ನು ಹಿಡಿಯುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಯಲ್ಲಾಪುರ ತಾಲೂಕಿನ ಕಣ್ಣೀಗೇರಿ ಬಳಿ ಸೋಮವಾರ ಸಂಜೆ ೬.೫೦ ರ ಸುಮಾರಿಗೆ ಘಟನೆ ನಡೆದಿದೆ.

ಯಲ್ಲಾಪುರ: ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದ ಆರೋಪಿಯನ್ನು ಹಿಡಿಯುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಜೋಯಿಡಾ ತಾಲೂಕಿನ ರಾಮನಗರದ ಪ್ರವೀಣ ಮನೋಹರ ಸುಧೀರ (೩೭) ಬಂಧಿತ ಆರೋಪಿ.

ಯಲ್ಲಾಪುರ ತಾಲೂಕಿನ ಕಣ್ಣೀಗೇರಿ ಬಳಿ ಸೋಮವಾರ ಸಂಜೆ ೬.೫೦ ರ ಸುಮಾರಿಗೆ ಘಟನೆ ನಡೆದಿದೆ.

ಈ ಕುರಿತು ಎಸ್‌ಪಿ ಎಸ್‌. ನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರವೀಣ ಮೇಲೆ ೧೬ ಪ್ರಕರಣಗಳಿವೆ. ೯ ಪ್ರಕರಣಗಳು ಇನ್ನು ವಿಚಾರಣೆಯಲ್ಲಿದೆ. ಸಾಕ್ಷಿಗಳನ್ನು ಹೆದರಿಸಿ ಪ್ರಕರಣ ಇತ್ಯರ್ಥ ಮಾಡಿಕೊಂಡು ಈತ ಮೆರೆಯುತ್ತಿದ್ದ. ೩ ತಿಂಗಳ ಹಿಂದೆ ಈತ ಖಾನಾಪುರದಲ್ಲಿ ಪೋಲೀಸರಿಂದ ತಪ್ಪಿಸಿಕೊಂಡಿದ್ದ. ಗುಂಡಾ ಆಕ್ಟ್, ಎಟ್ರಾಸಿಟಿ, ದರೋಡೆ, ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ಇಡೀ ಕುಟುಂಬ, ಅಂದರೆ ಸಹೋದರ, ೧೪ ವರ್ಷದ ಮಗ, ಹೆಂಡತಿ ಎಲ್ಲರೂ ಇವನ ಕಾರ್ಯದಲ್ಲಿ ನೆರವಾಗುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

ಈತನನ್ನು ಬೆನ್ನಟ್ಟಿ ಹೋಗಿ ಕಣ್ಣೀಗೇರಿ ಕಾಡಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದಾಗ ಭಯಗೊಳ್ಳದೇ ಪೊಲೀಸರ ಮೇಲೆ ತಿರುಗಿಬಿದ್ದಿದ್ದಾನೆ. ಕಲ್ಲು ಮತ್ತು ಚೂರಿಯಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಫೈರಿಂಗ್‌ ನಡೆಸಿದ್ದಾರೆ. ರಾಮನಗರ ಪಿಎಸ್‌ಐ ಮಹಾಂತೇಶ ನಾಯ್ಕ, ಪಿಸಿ ಮಲ್ಲಿಕಾರ್ಜುನ ಹೊಸ್ಮನಿ, ಜೋಯಿಡಾದ ಜಾಫರ್ ಅದರಗುಂಜಿ, ಅಸ್ಲಾಂ ಘಟ್ಟದ ಅವರಿಗೆ ಗಾಯಗಳಾಗಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಪ್ರವೀಣಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಡಿಶನಲ್ ಎಸ್‌ಪಿ ಜಗದೀಶ ಎಂ., ದಾಂಡೇಲಿ ಡಿಎಸ್‌ಪಿ ಶಿವಾನಂದ ಮದರಕಂಡಿ, ಶಿರಸಿ ಡಿಎಸ್‌ಪಿ ಗೀತಾ ಪಾಟೀಲ, ಯಲ್ಲಾಪುರ ಪಿಐ ರಮೇಶ ಹಾನಾಪುರ, ರಾಮನಗರ ಪಿಎಸ್‌ಐ ಬಸವರಾಜ ಮಗಳ, ಜೋಯಿಡಾ ಪಿಎಸ್‌ಐ ಚಂದ್ರಶೇಖರ ಉಪಸ್ಥಿತರಿದ್ದರು.

ಆರೋಪಿಯ ಪತ್ತೆ ಹಚ್ಚುವಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ., ಎಂ. ಜಗದೀಶ, ದಾಂಡೇಲಿ ಉಪ-ವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ ನೇತೃತ್ವದಲ್ಲಿ ಪಿಎಸ್‌ಐ ಮಹಾಂತೇಶ ನಾಯಕ, ಪಿಎಸ್‌ಐ ಎಚ್.ಬಿ. ಕುಡಗುಂಟಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.