ಸಾರಾಂಶ
ಹುಬ್ಬಳ್ಳಿ:
ಮುಖ್ಯಮಂತ್ರಿ, ಗೃಹ ಮಂತ್ರಿಗಳೇ ನಿಮ್ಮ ಮನೆಯಲ್ಲೇ ಈ ರೀತಿಯ ಘಟನೆಯಾಗಿದ್ದರೆ ಸುಮ್ಮನೆ ಕೂರುತ್ತಿದ್ದೀರಾ? ಸಚಿವ ಸಂತೋಷ ಲಾಡ್ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದರೆ ಸುಮ್ಮನಿರುತ್ತಿದ್ದರಾ? ರಾಜ್ಯ ಸರ್ಕಾರ ಇಂತಹವರನ್ನು ಮೊದಲು ಗುಂಡಿಟ್ಟು ಕೊಲ್ಲಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ಕೊಲೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ತಾಲೂಕಿನ ಬಿಡನಾಳದಲ್ಲಿದಲ್ಲಿರುವ ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮದೇ ಪಕ್ಷದ ಪಾಲಿಕೆ ಸದಸ್ಯನ ಮಕ್ಕಳಿಗೆ ಸುರಕ್ಷತೆ ಇಲ್ಲ ಎಂದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಇಂತಹ ಘಟನೆಗಳನ್ನು ಪಾಕಿಸ್ತಾನದಲ್ಲಿ ಆಗಿರುವುದನ್ನು ಕೇಳುತ್ತಿದ್ದೆವು. ಆದರೆ, ಈಗ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವುದು ದುರಂತದ ಸಂಗತಿ ಎಂದರು.ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯೋರ್ವಳನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಆದರೆ, ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ಬೇಜಾವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ. ಗೃಹ ಸಚಿವರಿಗೆ ಮಾನ, ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದ ಯತ್ನಾಳ, ಘಟನೆ ಬಗ್ಗೆ ಯಾವುದೇ ಮಾಹಿತಿ ತೆಗೆದುಕೊಳ್ಳದೇ ಬೇಜಾವಾಬ್ದಾರಿ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು ಕಿಡಿಕಾರಿದರು.
ಗುಂಡಿಕ್ಕಿ ಕೊಲ್ಲಿ:ಸರ್ಕಾರವೇ ರಕ್ಷಣೆ ನೀಡದಿದ್ದರೆ ಇನ್ನೇನು ಹಿಂದೂಗಳು ಆತ್ಮರಕ್ಷಣೆಗಾಗಿ ಆಯುಧ ಇಟ್ಟುಕೊಳ್ಳಬೇಕೆ? ಈ ರೀತಿ ಘಟನೆಗಳು ನಡೆದರೆ ರಕ್ಷಣೆ ಮಾಡುವವರಾದರೂ ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ನಿಮಗೆ ತಾಕತ್ ಇದ್ದರೆ ಇಂಥವರನ್ನು ಮೊದಲು ಎನ್ ಕೌಂಟರ್ ಮಾಡಿ. ನೇಹಾ ಕುಟುಂಬಸ್ಥರೊಂದಿಗೆ ನಾವೂ ಕಾನೂನು ಹೋರಾಟ ಮಾಡುತ್ತೇವೆ. ಆರೋಪಿಗೆ ಮೂರು ತಿಂಗಳಲ್ಲಿ ಶಿಕ್ಷೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿಯಮವಿದೆ. ಮೂರು ತಿಂಗಳಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಹಿಂದೂಗಳ ರಕ್ಷಣೆಗೆ ಯಾರು?ಆರೋಪಿ ಮನೆಗೆ ಪೊಲೀಸ್ ಭದ್ರತೆ ವಿಚಾರಕ್ಕೆ ಉತ್ತರಿಸಿದ ಯತ್ನಾಳ, ರಾಜ್ಯ ಸರ್ಕಾರದ ಈ ಕ್ರಮ ನಾಚಿಕೆಗೇಡಿನ ಸಂಗತಿ. ಮುಸ್ಲಿಮರಿಗೆ ಕಾಂಗ್ರೆಸ್ಸಿನವರು ಪ್ರಚೋದನೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ರಕ್ಷಣೆಗೆ ಕಾನೂನು ಜಾರಿಗೆ ತರುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಆದರೆ, ಹಿಂದೂಗಳ ರಕ್ಷಣೆ ಮಾಡುವವರು ಯಾರು? ಮದರಸಾಗಳಲ್ಲಿ ಮುಸ್ಲಿಮರಿಗೆ ಹಿಂದೂಗಳ ಕೊಲೆ, ಹಲ್ಲೆ ಮಾಡುವಂತಹ ಶಿಕ್ಷಣವನ್ನೇ ನೀಡುತ್ತಾರೆ ಎಂದು ಆರೋಪಿಸಿದರು.
ಇದು ಲವ್ ಜಿಹಾದ್ ಅಲ್ಲ:ಈ ಘಟನೆ ಲವ್ ಜಿಹಾದ್ ಅಲ್ಲ. ಲವ್ ಜಿಹಾದ್ ಅಂದರೆ ಹಿಂದೂ ಯುವತಿಯನ್ನು ಮದುವೆಯಾಗಿ ಅವಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸುವುದು. ಆದರೆ, ಇಲ್ಲಿ ಈ ಘಟನೆ ನಡೆದಿಲ್ಲ. ನೇಹಾ ಮುಸ್ಲಿಂ ಯುವಕನ ಪ್ರೀತಿಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದಳು. ಇದಕ್ಕೆ ಕೋಪಗೊಂಡು ಅಮಾಯಕ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಸ್ಪಷ್ಟಪಡಿಸಿದರು.