ಕಠಿಣ ಪರಿಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ: ಯೋಗೇಂದ್ರ ಜಂಬಗಿ

| Published : May 14 2025, 12:01 AM IST

ಕಠಿಣ ಪರಿಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ: ಯೋಗೇಂದ್ರ ಜಂಬಗಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ಪಾಲಕರ ನೆರವು ಪಡೆದು ಉನ್ನತ ಸಾಧನೆ ಮಾಡಬೇಕು.

ಸವಣೂರು: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಅವಶ್ಯ. ಇದನ್ನು ಗಮನದಲ್ಲಿ ಇರಿಸಿಕೊಂಡು ಅಭ್ಯಸಿಸಿದಾಗ ಮಾತ್ರ ಶಿಕ್ಷಣ ರಂಗದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಜೆಸಿಐ ನಮ್ಮ ಸವಣೂರು ಘಟಕದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಜಂಬಗಿ ತಿಳಿಸಿದರು.ಪಟ್ಟಣದ ಹಾವಣಗಿ ಪ್ಲಾಟ್‌ನಲ್ಲಿರುವ ಜೆಸಿಐ ಕಚೇರಿ ಸಭಾ ಭವನದಲ್ಲಿ ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆಗೈದ ಜೆಸಿಐ ಪದಾಧಿಕಾರಿಗಳ ಮಕ್ಕಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ಪಾಲಕರ ನೆರವು ಪಡೆದು ಉನ್ನತ ಸಾಧನೆ ಮಾಡಬೇಕು ಎಂದರು.

ತರಬೇತಿದಾರ ಜೆಸಿ ವಿದ್ಯಾಧರ ಕುತನಿ ಮಾತನಾಡಿ, ಜೆಸಿಐ ನಮ್ಮ ಸವಣೂರು ತಾಲೂಕಿನ 9 ಕ್ಲಸ್ಟರ್ ವ್ಯಾಪ್ತಿಯ ಸರ್ವ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಭಯ ಹೋಗಲಾಡಿಸುವ ಕುರಿತು ನಿರಂತರ ಏರ್ಪಡಿಸಿದ್ದ ತರಬೇತಿಗಳು ಪರೀಕ್ಷೆಯಲ್ಲಿ ತಾಲೂಕು 2ನೇ ಸ್ಥಾನವನ್ನು ಕಾಯ್ದುಕೊಳ್ಳಲು ನೆರವಾಗಿದೆ ಎಂದು ಬಿಇಒ ಎಂ.ಎಫ್. ಬಾರ್ಕಿ ಶ್ಲಾಘಿಸಿರುವುದನ್ನು ತಿಳಿಸಿದರು.ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಜೆಸಿಐ ಪದಾಧಿಕಾರಿಗಳ ಮಕ್ಕಳಾದ ಈಶ್ವರ ಪರಶುರಾಮ ಹೊಳಲ ಹಾಗೂ ಸಹನಾ ಶ್ರೀಪಾದಗೌಡ ಪಾಟೀಲ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ರಮೇಶ ಅರಗೋಳ, ಬಸವರಾಜ ಚಳ್ಳಾಳ, ಡಾ. ಪರಶುರಾಮ ಹೊಳಲ, ಮಧುಕರ ಜಾಲಿಹಾಳ, ಅಶೋಕ ಕಾಳಶೆಟ್ಟಿ, ವೀಣಾ ಎ., ಕೃಷ್ಣ ಭೋವಿ, ಸೋನಿಯಾ ಮೇಟಿ, ವಾಣಿ ರಾಥೋಡ ಹಾಗೂ ಇತರರು ಪಾಲ್ಗೊಂಡಿದ್ದರು. ಆನಂದ ಮತ್ತಿಗಟ್ಟಿ ನಿರ್ವಹಿಸಿದರು.ಕೆ.ಬಿ. ಕೋಳಿವಾಡ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಗೆ ನಿರ್ಧಾರ

ರಾಣಿಬೆನ್ನೂರು: ಸ್ಥಳೀಯ ವಿಧಾನಸಭಾ(ರಾಣಿಬೆನ್ನೂರು) ಕ್ಷೇತ್ರದ ಜನತೆ ಐದು ದಶಕಗಳ ಕಾಲ ನನಗೆ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದು, ಅವರ ಋಣ ತೀರಿಸುವ ಸಲುವಾಗಿ ಬಡ ಜನರಿಗೆ ಉಚಿತವಾಗಿ ಶಿಕ್ಷಣ, ಆರೋಗ್ಯ, ಹಸಿವು ಮುಕ್ತವಾಗಿಸುವುದು ಸೇರಿದಂತೆ ವಿವಿಧ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆ.ಬಿ. ಕೋಳಿವಾಡ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಲು ನಿರ್ಧರಿಸಿರುವೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟ್ರಸ್ಟ್‌ಗೆ ನನ್ನ ವೈಯಕ್ತಿಕ ಹಣದಲ್ಲಿ ₹20 ಲಕ್ಷ ಠೇವಣಿ ಮಾಡಿದ್ದಲ್ಲದೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯುವ ₹70 ಸಾವಿರ ಮಾಸಾಶನ ಹಣವನ್ನು ಅದಕ್ಕೆ ವಿನಿಯೋಗಿಸುತ್ತೇನೆ. ಟ್ರಸ್ಟ್ ಮೂಲಕ ಕ್ಷೇತ್ರದಲ್ಲಿ ಯಾವುದೇ ಜಾತಿ, ಮತ, ಪಂಥ, ಪಕ್ಷ ಪರಿಗಣಿಸದೇ ಎಲ್ಲ ವರ್ಗದ ಜನರಿಗೂ ಸೇವೆ ಸಲ್ಲಿಸಲಾಗುವುದು. ಟ್ರಸ್ಟ್‌ಗೆ ತಾಲೂಕು, ಗ್ರಾಮ ಪಂಚಾಯಿತಿ, ಶಹರದಲ್ಲಿ ವಾರ್ಡ್‌ವಾರು ಸಲಹಾ ಸಮಿತಿ ರಚಿಸಲಾಗುವುದು. ಚಾರಿಟೇಬಲ್ ಟ್ರಸ್ಟ್ ಮೂಲಕ ಬಡವರಿಗಾಗಿ ಒಂದು ಕಲ್ಯಾಣಮಂಟಪ ಕಟ್ಟಿ ಉಚಿತವಾಗಿ ನೀಡುವ ಚಿಂತನೆಯಿದೆ. ಟ್ರಸ್ಟ್‌ಗೆ ಸಾರ್ವಜನಿಕರು, ಶಾಸಕರು, ಸಂಸದರು, ಸಚಿವರು ಕೂಡ ದೇಣಿಗೆ ಸಲ್ಲಿಸಬಹುದು ಎಂದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮುಂದಿನ ದಿನಗಳಲ್ಲಿ ಕೆ.ಬಿ. ಕೋಳಿವಾಡ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಲಾಗುವುದು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದರು.

ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಶೇರುಖಾನ ಕಾಬೂಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.