ಗುರಿಯೊಂದಿಗೆ ಕಠಿಣ ಶ್ರಮವಿದ್ದರೆ ಸಾಧನೆ ಸುಲಭ: ಎಡಿಜಿಪಿ ಡಿ.ರೂಪಾ

| Published : Oct 07 2025, 01:03 AM IST

ಗುರಿಯೊಂದಿಗೆ ಕಠಿಣ ಶ್ರಮವಿದ್ದರೆ ಸಾಧನೆ ಸುಲಭ: ಎಡಿಜಿಪಿ ಡಿ.ರೂಪಾ
Share this Article
  • FB
  • TW
  • Linkdin
  • Email

ಸಾರಾಂಶ

3ನೇ ತರಗತಿಯಲ್ಲಿದ್ದಾಗ ಐಪಿಎಸ್‌ ಆಗಬೇಕೆಂಬ ಗುರಿ ಈಡೇರಿಸಿಕೊಂಡ ಸಾಧಕಿ. ಕರ್ನಾಟಕದ ಮೊಟ್ಟ ಮೊದಲ ಐಪಿಎಸ್‌ ಅಧಿಕಾರಿಯಾದ ಎಡಿಜಿಪಿ ಡಿ.ರೂಪಾ ಅವರ ಕಥೆ.

ಕನ್ನಡಪ್ರಭ ಯುವ ಆವೃತ್ತಿ ಸಂದರ್ಶನ

ವೀರೇಶ ಉಳ್ಳಾಗಡ್ಡಿ, ಮಾಲಗಿತ್ತಿ

3 ನೇ ತರಗತಿಯಲ್ಲಿದ್ದಾಗ ಐಎಎಸ್, ಐಪಿಎಸ್ ಆಗಬೇಕೆಂದು ಗುರಿ ಇಟ್ಟುಕೊಂಡು ಕಠಿಣ ಅಭ್ಯಾಸ ಮಾಡಿ 2000 ಬ್ಯಾಚ್‌ನ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 43ನೇ ರ್‍ಯಾಂಕ್‌ ಪಡೆದರು. ಇವರು ಐಎಎಸ್ ಹುದ್ದೆಗೂ ಅರ್ಹರಿದ್ದರು. ಆದರೆ ಐಪಿಎಸ್‌ನಲ್ಲಿ ಆಸಕ್ತಿ ಇರುವುದರಿಂದ ಅದನ್ನೇ ಆಯ್ಕೆ ಮಾಡಿಕೊಂಡು ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ ಇತಿಹಾಸ ಸೃಷ್ಠಿಸಿದರು. ಇವರಿಂದ ಪ್ರೇರಣೆಯಾಗಿ ಎಷ್ಟೋ ಮಹಿಳೆಯರು ಇಂದು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಿದ್ದಾರೆ.

ಅವರೇ ಐಪಿಎಸ್ ಅಧಿಕಾರಿ ರೂಪಾ ದಿವಾಕರ್ ಮೌದ್ಗಿಲ್. ಇವರು ಪ್ರಸ್ತುತ ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್ ಫೋರ್ಸ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ದಾವಣಗೆರೆಯವರು. ಇವರ ಪತಿ ಮೌನೀಶ್ ಮೌದ್ಗಿಲ್ ಐಎಎಸ್ ಅಧಿಕಾರಿಯಾಗಿದ್ದು, ಸದ್ಯ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದಾರೆ. ರೂಪಾ 2007ರಲ್ಲಿ ಅಂದಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ಹಾಗೂ 2008ರಲ್ಲಿ ಮಾಜಿ ಸಚಿವ ಯಾವಗಲ್ ಅವರನ್ನು ಬಂಧಿಸಿದ್ದರು. ಹೀಗಾಗಿ ಇವರ ಹೆಸರು ಕೇಳಿದ ರಾಜಕಾರಣಿಗಳಿಗೆ ನಡುಕ ಶುರುವಾಗುತ್ತದೆ.

ಇವರ ಅತ್ಯುತ್ತಮ ಸೇವೆಗಾಗಿ 2016ರಲ್ಲಿ ರಾಷ್ಟ್ರಪತಿ ಪೊಲೀಸ್ ಪದಕ ಪಡೆದರು. ಭಾರತ ಹಾಗೂ ಇಸ್ರೇಲ್ ದೇಶಗಳ ನಡುವಿನ ಸಂಬಂಧಗಳನ್ನು ಉತ್ತೇಜಿಸಲು ‘ಇಸ್ರೇಲ್ ನಿಯೋಗವನ್ನು ಅನ್ವೇಷಿಸುವ‘ ಹಸ್ಬರಾ ಪ್ರಯತ್ನದ ಭಾಗವಾಗಿ ಇಸ್ರೇಲ್ ವಿದೇಶಾಂಗ ಸಚಿವಾಲಯವು ಇವರನ್ನು ಆಯ್ಕೆ ಮಾಡಿತ್ತು. ನಿರ್ಭಯಾ ಸೇಫ್ ಸಿಟಿ ಪ್ರೋಜೆಕ್ಟ್‌ನಲ್ಲಿ ಆದ ಅಕ್ರಮವನ್ನು ರೂಪಾ ಬೆಳಕಿಗೆ ತಂದರು. ಇದರಿಂದ ಸರ್ಕಾರಕ್ಕೆ 500 ಕೋಟಿ ರು. ಉಳಿಯಿತು. ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಮಾಜಿ ಸಿಎಂ ಜಯಲಲಿತಾ ಆಪ್ತೆ ಆಗಿದ್ದ ವಿಕೆ ಶಶಿಕಲಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಐಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಖಾಸಗಿ ಬಳಕೆಗಾಗಿ ಐದು ಕೋಣೆ ಒಳಗೊಂಡ ಸಂಪೂರ್ಣ ಕಾರಿಡಾರ್ ಮೀಸಲಿಡಲಾಗಿದೆ. ಅವರಿಗೆ ಊಟ ಬೇಯಿಸಲು ಅಡುಗೆ ಮನೆಯನ್ನು ಜೈಲಾಧಿಕಾರಿಗಳು ನೀಡಿದ್ದಾರೆ ಎಂದು ರೂಪಾ ಆರೋಪಿಸಿದ್ದರು. ಆಗ ಉನ್ನತ ಮಟ್ಟದ ತನಿಖೆ ನಡೆಸಿದಾಗ ಶಶಿಕಲಾಗೆ ವಿಶೇಷ ಸೌಲಭ್ಯ ನೀಡುತ್ತಿರುವುದು ಪತ್ತೆ ಆಯಿತು. ಈ ಪ್ರಕರಣ ಬೆಳಕಿಗೆ ತರುವಲ್ಲಿ ರೂಪಾ ಪ್ರಮುಖ ಪಾತ್ರವಹಿಸಿದ್ದರು. ಇವರು ಕನ್ನಡಪ್ರಭ ಯುವ ಆವೃತ್ತಿಯೊಂದಿಗೆ ಮುಖಾಮುಖಾಯಾಗಿದ್ದಾರೆ. ಇವರ ಐಪಿಎಸ್ ಪಯಣದ ಸಂಪೂರ್ಣ ಮಾಹಿತಿ ಇಲ್ಲಿದೆ. ನೀವು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಎಲ್ಲೆಲ್ಲಿ ಪೂರೈಸಿದ್ದೀರಿ?

ದಾವಣಗೆರೆಯ ಸೇಂಟ್ ಪಾಲ್ಸ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಎವಿಕೆ ಕಾಲೇಜಿನಲ್ಲಿ ಪಿಯುಸಿ, ಪದವಿ, ಬೆಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ.

ನೀವು ಐಪಿಎಸ್ ಸೇರಲು ಏನು ಪ್ರೇರಣೆ ನೀಡಿತು?

ನೀವೆಲ್ಲಾ ಮುಂದೆ ಏನಾಗಬೇಕೆಂದುಕೊಂಡಿದ್ದೀರಿ, ನಿಮ್ಮ ಪಾಲಕರ ಜೊತೆ ಚರ್ಚಿಸಿ ಬಂದು ಹೇಳಿ ಎಂದು ನಾನು ಮೂರನೇ ತರಗತಿಯಲ್ಲಿದ್ದಾಗ ಟೀಚರ್ ಹೇಳಿದ್ದರು. ನಾನು ನಮ್ಮ ತಾಯಿಯನ್ನು ಕೇಳಿದಾಗ ಡಾಕ್ಟರ್ ಆಗಬೇಕು ಅಂದ್ರು, ನನಗೆ ಅದು ಇಷ್ಟ ಆಗಲಿಲ್ಲ. ಬಳಿಕ ತಂದೆಯನ್ನು ಕೇಳಿದೆ. ಅವರು ಐಎಎಸ್, ಐಪಿಎಸ್ ಅಂತ ಇರುತ್ತೆ. ಐಎಎಸ್ ಆದ್ರೆ ಡಿಸಿ ಆಗಿರುತ್ತಿ, ಜಿಲ್ಲೆಯ ಎಲ್ಲಾ ಇಲಾಖೆಗಳು ನಿನ್ನ ವ್ಯಾಪ್ತಿಯಲ್ಲಿ ಬರುತ್ತವೆ. ಐಪಿಎಸ್ ಅಂದ್ರೆ ಪೊಲೀಸ್ ಆಗುತ್ತಿ, ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಸ್ಥೆ ಆಗಿರುತ್ತಿ ಅಂದ್ರು. ಆಗ ನಾನು ಶಾಲೆಯಲ್ಲಿ ಟೀಚರ್ ಮುಂದೆ ಐಎಎಸ್, ಐಪಿಎಸ್ ಆಗಬೇಕೆಂದು ಹೇಳಿದೆ. ಆಗ ಎಲ್ಲರಿಂದ ಚಪ್ಪಾಳೆ ತಟ್ಟಿಸಿದರು. ಇದು ನನಗೆ ವಿಶೇಷ ಅನಿಸಿತು. ಅಲ್ಲದೆ ಈ ಉತ್ತರ ಯಾರೂ ಕೊಟ್ಟಿರಲಿಲ್ಲ. ತಾಯಿ ಪ್ರೇರಣೆಯಿಂದ ೮ನೇ ತರಗತಿಯಲ್ಲಿ ಎನ್‌ಸಿಸಿಗೆ ಸೇರಿದೆ. ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಎನ್‌ಸಿಸಿ ಪರೇಡಿಗೆ ರಾಜ್ಯದಿಂದ ಆಯ್ಕೆಯಾಗಿದ್ದೆ. ಅಲ್ಲಿ ‘ಬೆಸ್ಟ್ ಕೆಡೆಟ್‌‘ ಪ್ರಶಸ್ತಿ ಬಂತು ಅದನ್ನು ಆಗ ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್‌ಬೇಡಿ ಅವರಿಂದ ಸ್ವೀಕರಿಸಿದಾಗ ಅವರಿಂದ ಪ್ರೇರಿತಳಾದೆ. ೨ ವರ್ಷ ಪ್ರೌಢಶಾಲೆ, ೩ ವರ್ಷ ಕಾಲೇಜಿನಲ್ಲಿ ಒಟ್ಟು ೫ ವರ್ಷ ಎನ್‌ಸಿಸಿ ಮುಗಿಸಿ ‘ಎ. ಬಿ.ಸಿ.‘ ಪ್ರಮಾಣ ಪತ್ರ ಪಡೆದೆ. ಆಗ ಖಾಕಿ ಬಗ್ಗೆ ಹೆಚ್ಚು ಒಲವು ಬೆಳೆದಿದ್ದರಿಂದ ಐಪಿಎಸ್ ಆಯ್ಕೆ ಮಾಡಿಕೊಂಡೆ. ಯುಪಿಎಸ್ಸಿ ಪರೀಕ್ಷೆಗೆ ನೀವು ಯಾವ ರೀತಿ ತಯಾರಿ ಮಾಡಿಕೊಂಡಿದ್ದಿರಿ? ಆ ವಿಧಾನ ಹಂಚಿಕೊಳ್ಳಬಹುದಾ?

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ೨೮ನೇ ರ್‍ಯಾಂಕ್‌ನಲ್ಲಿ ಉತ್ತೀರ್ಣ ಆಗಿದ್ದೆ. ಕಾಂಪಿಟೇಶನ ಸಕ್ಸ್‌ಸ್ ರೀವ್ಯೆವ್ ಎಂಬ ಸ್ಪರ್ಧಾತ್ಮಕ ಮ್ಯಾಗಜೀನ್ ಓದಿದೆ. ಅದರಲ್ಲಿ ಐಎಎಸ್, ಐಪಿಎಸ್ ಉತೀರ್ಣರಾದವರ ಸಂದರ್ಶನ ಇತ್ತು. ಅದನ್ನು ನೋಡಿದಾಗ ಯುಪಿಎಸ್ಸಿ ವಿಷಯಗಳ ಬಗ್ಗೆ ತಿಳಿದುಕೊಂಡೆ. ಪಿಯುಸಿಯಲ್ಲಿ ಕಲಾ ವಿಭಾಗಕ್ಕೆ ದಾಖಲಾದೆ. ಆಗ ಯುಪಿಎಸ್ಸಿ ಸಿಲೆಬಸ್ ಪುಸ್ತಕ ಓದಲು ಆರಂಭಿಸಿದೆ. ಪಿಯುಸಿ ಹಾಗೂ ಪದವಿಗೆ ಇರುವ ಸಿಲೆಬಸ್‌ಗಿಂತ ಹೆಚ್ಚು ಓದುತ್ತಿದ್ದೆ. ಎಂ. ಎ. ಮನಃಶಾಸ್ತ್ರ ಪದವಿ ಮುಗಿಸಿಕೊಂಡು ಇದೇ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡು ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆಂದು ಬೆಂಗಳೂರಿಗೆ ಬಂದಿದ್ದೆ. ಎರಡು ವರ್ಷ ಜ್ಞಾನ ಭಾರತಿ ಹಾಸ್ಟೆಲ್‌ನಲ್ಲಿ ಇದ್ದೆ. ಜೆ.ಎಸ್. ಎಸ್. ಇನ್‌ಸ್ಟಿಟ್ಯೂಟ್‌ಗೆ ಒಂದು ತಿಂಗಳು ಯುಪಿಎಸ್ಸಿ ಕೋಚಿಂಗ್ ಹೋಗಿದ್ದೆ. ಬಳಿಕ ದೆಹಲಿಯಲ್ಲಿರುವ ವಾಜಿರಾಂ ಇನ್‌ಸ್ಟಿಟ್ಯೂಟ್‌ನಲ್ಲಿ ಮೂರು ತಿಂಗಳು ಕೋಚಿಂಗ್ ತೆಗೆದುಕೊಂಡೆ. ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನಡೆಸುತ್ತಿದ್ದ ರಸಪ್ರಶ್ನೆ, ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಇದರಿಂದ ನನ್ನ ಸಾಮಾನ್ಯ ಜ್ಞಾನ ಹೆಚ್ಚಳವಾಯಿತು. ಇದು ಯುಪಿಎಸ್ಸಿಯ ಸಾಮಾನ್ಯ ಅಧ್ಯಯನ ಪತ್ರಿಕೆಗೆ ಅನುಕೂಲವಾಯಿತು. ಪಿಯುಸಿಯಲ್ಲಿ ಸಮಾಜಶಾಸ್ತ್ರ, ಸ್ನಾತಕೋತ್ತರ ಪದವಿಯಲ್ಲಿ ಮನಃಶಾಸ್ತ್ರವನ್ನು ಅಧ್ಯಯನ ಮಾಡಿದ್ದರಿಂದ ಯುಪಿಎಸ್ಸಿ ಪರೀಕ್ಷೆಗೆ ಅನುಕೂಲವಾಯಿತು.ಯುಪಿಎಸ್ಸಿ ಪರೀಕ್ಷೆಗೆ ಸ್ವತಃ ತಯಾರಿ ಮಾಡಿಕೊಂಡರೆ ಪಾಸ್ ಆಗಬಹುದಾ, ಕೋಚಿಂಗ್ ಪಡೆಯುವ ಅಗತ್ಯ ಇದೆನಾ?ಕೋಚಿಂಗ್ ಅಗತ್ಯವೇನಿಲ್ಲ. ನಾನು ನಾಲ್ಕು ತಿಂಗಳು ಕೋಚಿಂಗ್ ಪಡೆದುಕೊಂಡೆ. ಕೋಚಿಂಗ್ ಇಲ್ಲದೆಯೂ ಯುಪಿಎಸ್ಸಿ ಪರೀಕ್ಷೆ ಉತ್ತೀರ್ಣ ಆಗಬಹುದು.ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ನೀವು ಯಾವ ಸಲಹೆಗಳನ್ನು ನೀಡುತ್ತೀರಿ?ಯುಪಿಎಸ್ಸಿ ಪರೀಕ್ಷೆಯನ್ನು ಬಹಳಷ್ಟು ಸ್ಪರ್ಧಾರ್ಥಿಗಳು ಬರೆಯುತ್ತಾರೆ. ಯಾವುದೇ ಪದವಿ ಮುಗಿಸಿದವರು ಕೂಡ ಈ ಪರೀಕ್ಷೆ ಬರೆಯಬಹುದು. ನಿಮ್ಮ ಪ್ರತಿ ಸ್ಪರ್ಧಿ ಹೇಗೆ ತಯಾರಿ ಆಗಿರುತ್ತಾರೆ ಎಂಬುದು ನಿಮಗೆ ಗೊತ್ತಿರುವುದಿಲ್ಲ. ಈ ಪರೀಕ್ಷೆಗೆ ಬಹಳ ಕಠಿಣ ಅಭ್ಯಾಸದ ಅಗತ್ಯವಿದೆ. ಪೂರ್ವಭಾವಿ ಉತ್ತೀರ್ಣ ಬಳಿಕ ಮುಖ್ಯ ಪರೀಕ್ಷೆ ನಡೆಯುವಾಗ ನಾನು ಎರಡು ತಿಂಗಳ ಕಾಲ ದಿನದಲ್ಲಿ 16 ಗಂಟೆ ಅಭ್ಯಾಸ ಮಾಡಿದ್ದೇನೆ.

ಯುಪಿಎಸ್ಸಿ ಪರೀಕ್ಷೆಗೆ ರಚನಾತ್ಮಕ ಅಧ್ಯಯನ ಯೋಜನೆ ಹೊಂದಿರುವುದು ಎಷ್ಟು ಮುಖ್ಯ ಮತ್ತು ತಯಾರಿ ಹಂತದಲ್ಲಿ ನೀವು ನಿಮ್ಮ ಸಮಯವನ್ನು ಹೇಗೆ ನಿರ್ವಹಿಸಿದ್ದಿರಿ?ಈ ಪರೀಕ್ಷೆಗಳಲ್ಲಿ ಬಹಳ ಸರಳವಾದ ಪ್ರಶ್ನೆಗಳು ಬರುವುದಿಲ್ಲ. ಉತ್ತರ ಬರೆಯುವಾಗ ಪ್ರಶ್ನೆಗಳನ್ನು ಆಳವಾಗಿ ವಿಶ್ಲೇಷಣೆ ಮಾಡಿ ಬರೆಯಬೇಕಾಗುತ್ತದೆ. ಬಹಳ ಆಳವಾದ ಜ್ಞಾನ ಬೇಕಾಗುತ್ತದೆ. ಆದ್ದರಿಂದ ಪ್ರತಿದಿನ ಕಠಿಣ ಅಭ್ಯಾಸ ಮಾಡಬೇಕು.

ಅನೇಕ ಆಕಾಂಕ್ಷಿಗಳು ಐಪಿಎಸ್‌ಗೆ ಸಿದ್ಧರಾಗುವ ಪ್ರಯಾಣ ದೀರ್ಘ ಮತ್ತು ಕಷ್ಟಕರವೆಂದು ಕಂಡುಕೊಳ್ಳುತ್ತಾರೆ. ಅಂತಹವರಿಗೆ ನೀವು ಏನು ಹೇಳಲು ಬಯಸುತ್ತೀರಿ?

ಯುಪಿಎಸ್ಸಿ ಪರೀಕ್ಷೆ ಕೂಡ ಕಷ್ಟ. ಪೂರ್ವಭಾವಿ, ಮುಖ್ಯ ಪರೀಕ್ಷೆ, ಸಂದರ್ಶನ ಪ್ರಕ್ರಿಯೆ ಪೂರ್ಣವಾಗಬೇಕಾದರೆ ೧.೫ ವರ್ಷ ಬೇಕಾಗುತ್ತದೆ. ಪೂರ್ವಭಾವಿ, ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿ ಸಂದರ್ಶನಕ್ಕೆ ಹೋದರೆ ಅಲ್ಲಿ ಫೇಲ್ ಆದರೆ ಮುಂದಿನ ವರ್ಷ ಮತ್ತೆ ಪೂರ್ವಭಾವಿ ಪರೀಕ್ಷೆಯಿಂದ ತಯಾರಿ ಮಾಡಬೇಕಾಗುತ್ತದೆ. ಫೇಲ್ ಆದರೆ ಎದೆಗುಂದದೆ ಕನಿಷ್ಠ ಮೂರು ಬಾರಿಯಾದರೂ ಈ ಪರೀಕ್ಷೆಗೆ ಪ್ರಯತ್ನ ಮಾಡಿ. ಒಂದೇ ಬಾರಿಗೆ ಕೈ ಬಿಡಬೇಡಿ.

ಮಹಿಳಾ ಐಪಿಎಸ್ ಅಧಿಕಾರಿಯಾಗುವುದರಲ್ಲಿ ಅತ್ಯಂತ ಪ್ರತಿಫಲದಾಯಕ, ಸವಾಲಿನ ಅಂಶಗಳು ಯಾವುವು?ನಾನು 2000ರಲ್ಲಿ ಯುಪಿಎಸ್ಸಿ ಪರೀಕ್ಷೆ ಉತ್ತೀರ್ಣ ಆದಾಗ ಕರ್ನಾಟಕದವರು ಯಾರೂ ಮಹಿಳಾ ಐಪಿಎಸ್ ಅಧಿಕಾರಿ ಇದ್ದಿಲ್ಲ. ನಾನೇ ಕರ್ನಾಟಕದ ಮೊಟ್ಟ ಮೊದಲ ಐಪಿಎಸ್ ಅಧಿಕಾರಿ. ಆಗ ಉನ್ನತ ಹುದ್ದೆಯಲ್ಲಿ ಹೆಚ್ಚು ಮಹಿಳೆಯರು ಇರುತ್ತಿರಲಿಲ್ಲ. ಹುದ್ದೆ ಕೊಡುವ ಮುಂಚೆ ಮಹಿಳೆಯರು ಹೇಗೆ ನಿಭಾಯಿಸುತ್ತಾರೆ ಎಂದು ಯೋಚನೆ ಮಾಡುತ್ತಾರೆ. ಆಗ ಡೊಡ್ಡ ಜಿಲ್ಲೆ ಮತ್ತು ಅತೀ ಹೆಚ್ಚು ಸಮಸ್ಯೆಗಳಿರುವ ಜಿಲ್ಲೆಯನ್ನು ಮಹಿಳೆಯರಿಗೆ ಕೊಡುತ್ತಿರಲಿಲ್ಲ. ನಾವೂ ಪುರುಷ ಬರೆಯುವ ಪರೀಕ್ಷೆಯನ್ನೇ ಬರೆದಿರುತ್ತೇವೆ. ಟ್ರೇನಿಂಗ್‌ನಲ್ಲಿ ಕ್ರಾಸ್ ಕಂಟ್ರಿ, ಶಸ್ತ್ರ ಹೊತ್ತೊಯ್ಯುವುದು ಪುರುಷರ ಹಾಗೆ ನಾವು ಮಾಡಿರುತ್ತೇವೆ. ಮಹಿಳೆಯರಿಗೆ ಯಾವುದೇ ವಿನಾಯಿತಿ ಇಲ್ಲ. ಆದರೆ ಹುದ್ದೆ ಕೊಡುವಾಗ ತಾರತಮ್ಯ ಮಾಡುತ್ತಾರೆ. ಸದ್ಯ ಈಗ ಆ ರೀತಿ ಮಾಡಲ್ಲ. ಎಲ್ಲಾ ಬದಲಾವಣೆಯಾಗಿದೆ. ಮಹಿಳೆಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.ಕಾನೂನು ಮತ್ತು ನೈಜ ಜಗತ್ತಿನ ಆಡಳಿತದ ವಿಷಯಗಳ ಪ್ರಾಯೋಗಿಕ ಜ್ಞಾನ ಹೊಂದಿರುವುದು ಎಷ್ಟು ಮುಖ್ಯ?ಪ್ರಾಯೋಗಿಕ ಜ್ಞಾನ ತುಂಬಾ ಅಗತ್ಯ. ಅಧಿಕಾರಿಗಳಾದವರು ಸಾರ್ವಜನಿಕರನ್ನು ಭೇಟಿಯಾಗಿ ಅವರ ಅಹವಾಲು ಆಲಿಸಬೇಕು. ಅಧಿಕಾರಿಗಳು ಜನರೊಂದಿಗೆ ಹೆಚ್ಚು ಬೆರೆಯಬೇಕು.

ಅಧಿಕಾರಿಯಾಗಿ ನಿಮ್ಮ ವೃತ್ತಿಪರ ಜೀವನದಲ್ಲಿ ನಿಮಗೆ ಸಹಾಯ ಮಾಡಿದ ಪುಸ್ತಕ, ಕೋರ್ಸ್ ಬಗ್ಗೆ ತಿಳಿಸಿ. ನಮ್ಮ ತಾಯಿನೇ ನನಗೆ ಸ್ಫೂರ್ತಿ. ನನಗೆ ಯಾವಾಗಲೂ ಬೆಂಬಲವಾಗಿದ್ದರು. ನಾನು ಐಪಿಎಸ್ ಅಧಿಕಾರಿಯಾಗಲು ನಮ್ಮ ತಂದೆಯೇ ಕಾರಣ. ದಾರಿ ಸಾಗುವುದು ಕಠಿಣವಾದಾಗ ಭಾವನಾತ್ಮಕ ರೀತಿಯಲ್ಲಿಯೂ ನಮ್ಮ ತಾಯಿ ಬೆಂಬಲವಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಾಗ ತಂದೆ, ತಾಯಿ ಬೆಂಬಲ ಬಹಳ ಮುಖ್ಯವಾಗುತ್ತದೆ.

ನೀವು ಯುಪಿಎಸ್ಸಿ ಸಂದರ್ಶನಕ್ಕೆ ಹೇಗೆ ತಯಾರಿ ನಡೆಸಿದ್ದಿರಿ?

ಅತೀ ಹೆಚ್ಚು ದಿನಪತ್ರಿಕೆ ಓದುತ್ತಿದ್ದುದರಿಂದ ಸಂದರ್ಶನಕ್ಕೆ ಅನುಕೂಲವಾಯಿತು.

ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸುವಾಗ ಅಥವಾ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು ಯಾವುವು ಮತ್ತು ಅವುಗಳನ್ನು ಹೇಗೆ ತಪ್ಪಿಸಬಹುದು?

ಪರೀಕ್ಷೆ ಸಮಯ ಸಾಕಾಗುವುದಿಲ್ಲ ಆದ್ದರಿಂದ ಪದೇ ಪದೆ ಬರೆದು ಬರವಣಿಗೆ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಬೇಕು. ಡೊಡ್ಡ ಗುರಿ ಇಟ್ಟುಕೊಂಡು ಪ್ರತಿದಿನ ಕಠಿಣ ಅಭ್ಯಾಸ ಮಾಡಬೇಕು. ಐಪಿಎಸ್ ಅಧಿಕಾರಿಗೆ ದೈಹಿಕ ಸದೃಢತೆ ಎಷ್ಟು ಮುಖ್ಯ?

ಇತ್ತೀಚೆಗೆ ನಕ್ಸಲ ವಿಕ್ರಂಗೌಡ ಹತ್ಯೆ ಆಯಿತು. ಇಂತಹ ಸಮಯದಲ್ಲಿ ದೈಹಿಕ ಸದೃಢತೆ ಬಹಳ ಮುಖ್ಯವಾಗುತ್ತದೆ. ಯುಪಿಎಸ್ ಯಶಸ್ಸಿಗೆ ಯಾವ ವೈಯಕ್ತಿಕ ಗುಣಗಳು ಅಗತ್ಯ ಎಂದು ನೀವು ಭಾವಿಸುತ್ತೀರಿ?

ಮೇಲಾಧಿಕಾರಿ/ ರಾಜಕಾರಣಿಗಳು ಒತ್ತಡ ಹಾಕಿದರೆಂದು ತಪ್ಪು ಕೆಲಸ ಮಾಡಬಾರದು. ‘ಸರ್ಕಾರಿ ಕೆಲಸ ದೇವರು ಕೆಲಸ‘ ಎಂಬುದನ್ನು ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕು. ಕರುಣೆ, ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡಬೇಕು.