ಸಾರಾಂಶ
ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅಪ್ರತಿಮ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗೌರವಿಸುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹ.
ಧಾರವಾಡ:
ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅಪ್ರತಿಮ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗೌರವಿಸುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಯೋಗ ತರಬೇತುದಾರರಾದ ಲೀಲಾವತಿ ಸಾಂಬ್ರಾಣಿ ಹೇಳಿದರು.ಇಲ್ಲಿಯ ಚರಂತಿಮಠ ಗಾರ್ಡನ್‌ನ ರಾಮ ರಹೀಂ ಕಾಲನಿ ಮಹಿಳಾ ಸಂಘದ ವತಿಯಿಂದ ನಡೆದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿಯೊಬ್ಬ ಮಹಿಳೆ ತನ್ನ ಸಾಮರ್ಥ್ಯವನ್ನು ಪೂರೈಸುವ ಮತ್ತು ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಮೂಲಕ ಉತ್ತಮ ಸಮಾಜ ರಚಿಸಬಹುದು ಎಂದರು.ಪ್ರತಿದಿನ ಬೆಳಗ್ಗೆ 100ಕ್ಕೂ ಹೆಚ್ಚು ದಿನಪತ್ರಿಕೆಗಳನ್ನು ಮನೆ-ಮನೆಗೆ ವಿತರಿಸಿ ಅದರಿಂದ ಬಂದ ಹಣದಿಂದ ಕಾಲೇಜು ವ್ಯಾಸಂಗ ಮಾಡುತ್ತಿರುವ ಹೊಸಯಲ್ಲಾಪುರದ ಸೌಂದರ್ಯ ಶಿವಾನಂದ ಗಾಣಗೇರ ಅವರನ್ನು ಮಹಿಳಾ ದಿನಾಚರಣೆ ನಿಮಿತ್ತ ಗೌರವಿಸಲಾಯಿತು. ಈಗಿನ ಮಕ್ಕಳು ತಮ್ಮ ಕೆಲಸವನ್ನೇ ಮಾಡಿಕೊಳ್ಳುವುದು ವಿರಳ. ಆದರೆ ಸೌಂದರ್ಯ ಬೆಳಗ್ಗೆ ಎದ್ದು ದಿನಪತ್ರಿಕೆ ಹಾಕಿ ಕಾಲೇಜು ಹೋಗಿ ಅಧ್ಯಯನ ಮಾಡುವ ಛಲ ಅಳವಡಿಸಿಕೊಂಡಿದ್ದು ಮೆಚ್ಚುವಂತಹದ್ದು ಎಂದು ಸುಶೀಲಾ ನೇಸರಗಿ ಹೆಮ್ಮೆ ವ್ಯಕ್ತಪಡಿಸಿದರು.ಅನಸೂಯಾ ಹಿರೇಮಠ, ಲಕ್ಷ್ಮಿ ಮಡಿವಾಳರ, ನರಸಮ್ಮ ಜವಳಕರ, ದೀಪಾ ರಾಕ್ಷಿ, ವೀಣಾ ಚವ್ಹಾಣ, ಪುಷ್ಪಾ ಕಾಟಿಗಾರ, ಶ್ವೇತಾ ರೋಖಡೆ, ರೇಣುಕಾ ಮುನಾವರಕರ, ಅಕ್ಷತಾ ದೊಡಮನಿ, ಸರೋಜಾ ಆಮ್ಟೆ, ಕಾವ್ಯಾ ವಜ್ಜಣ್ಣವರ, ಸೀಮಾ ಪಾಟೀಲ ಮತ್ತಿತರರು ಇದ್ದರು. ನಂತರ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.