ಪ್ರತಿಯೊಬ್ಬರಿಗೂ ತಮ್ಮ ವಿಶೇಷ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಸಿಗುತ್ತದೆ. ಆದರೇ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವವರು ಮಾತ್ರ ಬೆಳವಣಿಗೆ ಹೊಂದುತ್ತಾರೆ ಎಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ಗೌರವಾಧ್ಯಕ್ಷ ಹಾಗೂ ನಿವೃತ್ತ ದೈಹಿಕ ನಿರ್ದೇಶಕ ಡಾ.ಅಶೋಕಕುಮಾರ ರಾ.ಜಾಧವ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರತಿಯೊಬ್ಬರಿಗೂ ತಮ್ಮ ವಿಶೇಷ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಸಿಗುತ್ತದೆ. ಆದರೇ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವವರು ಮಾತ್ರ ಬೆಳವಣಿಗೆ ಹೊಂದುತ್ತಾರೆ ಎಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ಗೌರವಾಧ್ಯಕ್ಷ ಹಾಗೂ ನಿವೃತ್ತ ದೈಹಿಕ ನಿರ್ದೇಶಕ ಡಾ.ಅಶೋಕಕುಮಾರ ರಾ.ಜಾಧವ ಹೇಳಿದರು.ಗುಜರಾತಿನ ನವಸಾರಿ ಜಿಲ್ಲೆಯ ಮತವಾಡಿ ಸ್ಟೇಡಿಯಂದಲ್ಲಿ ನಡೆಯಲಿರುವ ಸರ್ದಾರ ವಲ್ಲಭಭಾಯಿ ರಾಷ್ಟ್ರೀಯ ಲೆದರಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಕರ್ನಾಟಕ ಪುರುಷರ ಮತ್ತು ಮಹಿಳೆಯರ ತಂಡಗಳ ಬಿಳ್ಕೋಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ತಾವು ಇಲ್ಲಿಯವರೆಗೆ ಪಡೆದಿರುವ ತರಬೇತಿಯ ಅನುಭವದಿಂದ ಆತ್ಮವಿಶ್ವಾಸ ಹೊಂದಿ ಭಾಗವಹಿಸಲಿರುವ ಪಂದ್ಯಾವಳಿಯ ಗುರಿಯ ಬಗ್ಗೆ ಸ್ಪಷ್ಟತೆಯೊಂದಿಗೆ ಮುನ್ನಡೆದು ಉನ್ನತ ಸಾಧನೆಗೈದು ರಾಜ್ಯದ ಕೀರ್ತಿ ತರಬೇಕು. ನಿಮ್ಮ ಬಿಳ್ಕೋಡುಗೆ ಹೇಗೆ ಇರಲಿ, ಆದರೇ ನಿಮ್ಮ ಮತ್ತು ನಿಮ್ಮ ತಂಡದ ಸ್ವಾಗತ ಅವಿಸ್ಮರಣೀಯ ಆಗಿರಬೇಕು. ನಿಮಗೆ ಹೆಮ್ಮೆಯಿಂದ ಸ್ವಾಗತ ಮಾಡುವ ಅವಕಾಶ ನಮಗೆ ಸಿಗುವಂತ ಸಾಧನೆಯೊಂದಿಗೆ ಮರಳಿ ಬನ್ನಿ ಎಂದು ತಂಡಗಳಿಗೆ ಶುಭಹಾರೈಸಿದರು.ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಿಜಯಪುರ ಜಿಲ್ಲಾ ಸಂಯೋಜಕರು ಹಾಗೂ ಪ್ರತಿಷ್ಠಿತ ಕೋಹಿನೂರ ಕ್ರಿಕೆಟ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಎನ್.ಎಂ.ಹುಟಗಿ ಮಾತನಾಡಿ, ವಿಜಯಪುರ ಜಿಲ್ಲೆಯ ಕ್ರಿಕೆಟ್ ಆಟಗಾರರ ಬೆಳವಣಿಗೆಗಾಗಿ ಕಳೆದ 35-40 ವರ್ಷಗಳಿಂದ ಶ್ರಮಪಟ್ಟಿದ್ದು ಸಾರ್ಥಕ ಆಗವುದು ನಿಮ್ಮ ಸಾಧನೆಗಳಿಂದ. ಭವಿಷ್ಯದಲ್ಲಿ ಜಿಲ್ಲೆಯ ಆಟಗಾರರಿಗೆ ಉಜ್ವಲ ಭವಿಷ್ಯ ಇದೆ. ಆಟಗಾರರ ಭವಿಷ್ಯ ರೂಪಿಸಲು ಪಾಲಕರು ಮತ್ತು ಕ್ರೀಡಾ ಪ್ರೋತ್ಸಾಹಕರು ಸಹಕರಿಸಬೇಕು. ಭವಿಷ್ಯದಲ್ಲಿ ಕ್ರಿಕೆಟ ಆಟಗಾರರಿಗೆ ಬೇಕಾಗುವ ಮೂಲಸೌಕರ್ಯ ಮತ್ತು ಕ್ರಿಕೆಟ್ ಸ್ಟೇಡಿಯಂನ್ನು ಕೆಎಸ್‌ಸಿಎ ವತಿಯಿಂದ ವಿಜಯಪುರದಲ್ಲಿ ನಿರ್ಮಾಣ ಮಾಡಲು ಸಚಿವರ ಸಹಕಾರದೊಂದಿಗೆ ಪ್ರಯತ್ನ ನಡೆದಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ನೆರವೇರಲಿದೆ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಹಾಗೂ ವಕೀಲ ಜಾಫರ ಅಂಗಡಿ ಮಾತನಾಡಿ, ಈಗಾಗಲೇ ವಕೀಲರಿಗಾಗಿ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಬಹಳ ವರ್ಣರಂಜಿತವಾಗಿ ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದು, ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯ ಯುವ ಕ್ರಿಕೆಟ್ ಆಟಗಾರರಿಗೆ ಬೃಹತ್ ಮಟ್ಟದ ಪಂದ್ಯಾವಳಿಯ ಆಯೋಜನೆಯ ಜೊತೆಗೆ ಉದಯೋನ್ಮುಖ ಆಟಗಾರರಿಗೆ ಬೇಕಾಗುವ ಸಹಾಯ ಸಹಕಾರ ನೀಡಲು ತಾವು ಸಿದ್ಧ ಎಂದು ಹೇಳಿದರು.ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯದ ಭವಿಷ್ಯದ ಕ್ರಿಕೆಟ್ ತಾರೆ ಅನ್ನಪೂರ್ಣ ಭೋಸಲೆ ಅವರ ತಂದೆ ಮತ್ತು ದೈಹಿಕ ಶಿಕ್ಷಕ ಗಣೇಶ ಭೋಸಲೆ ತಂಡಗಳಿಗೆ ಶುಭಹಾರೈಸಿದರು. ಕಾರ್ಯದರ್ಶಿ ಹಜರತ ಬಿಲಾಲ ಹೆಬ್ಬಾಳ ಪ್ರಾಸ್ತಾವಿಕ ಮತ್ತು ಸ್ವಾಗತಿಸಿ, ಶ್ರೀಕಾಂತ ಕಾಖಂಡಕಿ ವಂದನಾರ್ಪಣೆ ಮತ್ತು ಚಾಂದವಸೀಮ ಮುಕಾದಮ ನಿರೂಪಿಸಿದರು. ಪುರುಷರ ಮತ್ತು ಮಹಿಳೆಯರ ತಂಡದ ಆಟಗಾರರಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಆಟಗಾರರ ಪಾಲಕರು, ಹಲವು ಜನ ಕ್ರೀಡಾ ಪ್ರೋತ್ಸಾಹಕರು ಮತ್ತು ಗುಜರಾತಿಗೆ ಪ್ರಯಾಣ ಬೆಳೆಸಲಿರುವ ಆಟಗಾರರು ಇದ್ದರು. ತಂಡಗಳ ಜೊತೆಗೆ ತರಬೇತುದಾರರಾಗಿ ಸಲೀಮ ಬೇಪಾರಿ, ಶ್ರೀಕಾಂತ ಕಾಖಂಡಕಿ, ಮ್ಯಾನೇಜರ್‌ರಾದ ಚಾಂದವಸೀಮ ಮುಕಾದಮ ಮತ್ತು ಹಜರತಬಿಲಾಲ ಹೆಬ್ಬಾಳ ಪ್ರಯಾಣಿಸಲಿದ್ದಾರೆ.