ಪ್ರತಿಭೆಗಳಿಗೆ ಅವಕಾಶ ನೀಡಿದಾಗ ಸಾಧನೆ ಸಾಧ್ಯ

| Published : Nov 16 2025, 03:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ವಿದ್ಯೆ ಮತ್ತು ಪ್ರತಿಭೆ ಯಾರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿದಾಗ ಸಾಧಕರಾಗಲು ಸಾಧ್ಯ ಎಂದು ನದಿ ಇಂಗಳಗಾಂವದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ವಿದ್ಯೆ ಮತ್ತು ಪ್ರತಿಭೆ ಯಾರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿದಾಗ ಸಾಧಕರಾಗಲು ಸಾಧ್ಯ ಎಂದು ನದಿ ಇಂಗಳಗಾಂವದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾವಿಕಾಸ ಸಂಸ್ಥೆಯ ಸಭಾಂಗಣದಲ್ಲಿ ಕಾಮ್ಸ್ ಶಾಖೆ ಅಥಣಿ ಹಾಗೂ ಅಥಣಿ ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ದಿನ ನಿಮಿತ್ತ ಪ್ರತಿಭಾನ್ವಿತ ಮಕ್ಕಳಿಗೆ ವಿಚಾರ ಸಂಕಿರಣ ಹಾಗೂ ಉದಯೋನ್ಮುಖ ಪ್ರತಿಭೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸಾಧನೆಗೆ ಬಡತನ, ಅಂಗವಿಕಲತೆ ಎಂದಿಗೂ ಅಡ್ಡಿಯಾಗದು, ಅವರಿಗೆ ವೇದಿಕೆಗಳನ್ನ ಕಲ್ಪಿಸಿಕೊಡುವ ಪ್ರೋತ್ಸಾಹ ನೀಡಬೇಕು. ಇಂತಹ ಪ್ರಶಸ್ತಿ ಮತ್ತು ಪ್ರೋತ್ಸಾಹ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.

ಜಾದವಜಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಂಕ ಗಳಿಸುವುದಷ್ಟೇ ಮಾನದಂಡವಾಗುತ್ತಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಹೊರಹಾಕಬೇಕು ಎಂದು ಸಲಹೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತವಾದ ಕನಸು ಕಟ್ಟಿಕೊಂಡು ಸತತ ಪ್ರಯತ್ನ ಮಾಡಿದಾಗ ಯಶಸ್ವಿಯಾಗಲು ಸಾಧ್ಯವಿದೆ. ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದು ಇಂಧಿನ ಅಗತ್ಯ. ಜೊತೆಗೆ ಮಕ್ಕಳಿಗೆ ಮಾತೃಭಾಷೆ ಕನ್ನಡವನ್ನು ಅವರಿಗೆ ಮನಮುಟ್ಟುವಂತೆ ಕಲಿಸಿಕೊಡುವುದು ಬಹಳ ಅವಶ್ಯ. ಈ ನಿಟ್ಟಿನಲ್ಲಿ ಬರುವ ಡಿಸೆಂಬರ್ ಒಳಗಾಗಿ ಎಲ್ಲಾ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಯವರು ಆಸಕ್ತಿ ವಹಿಸಬೇಕೆಂದು ಸಲಹೆ ನೀಡಿದರು.

ಕಾಮ್ಸ್ ಹಾಗೂ ಅಥಣಿ ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿದರು. ಕಾಮ್ಸ್ ಶಾಖೆ ಉಪಾಧ್ಯಕ್ಷ ಡಿ.ಡಿ ಮೇಕನಮರಡಿ, ಕೋಶಾಧ್ಯಕ್ಷ ಎ.ಎಸ್.ಜೋಶಿ, ಪತ್ರಕರ್ತ ಹಾಗೂ ಕನ್ನಡಪರ ಹೋರಾಟಗಾರ ಅಣ್ಣಾಸಾಹೇಬ ತೆಲಸಂಗ ಮಾತನಾಡಿದರು. ಈ ಸಂದರ್ಭದಲ್ಲಿ ಅಥಣಿ ತಾಲೂಕು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2025 ನೇ ಸಾಲಿನ ಉದಯೋನ್ಮುಖ ಪ್ರತಿಭೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜಕುಮಾರ ದಳವಾಯಿ, ಮುತ್ತಪ್ಪ ಬಡಿಗೇರ, ಶ್ರೀಶೈಲ ಇಂಚಗೇರಿ, ಜಗದೀಶ ಅವಟಿ, ರಾಯಗೊಂಡ ಪಾಟೀಲ, ಚಿದಾನಂದ ಪಾಟೀಲ, ಲಲಿತಾ ಮೇಕನಮರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎ.ಎಸ್.ಜೋಶಿ ಸ್ವಾಗತಿಸಿದರು, ಚಿದಾನಂದ ಪಾಟೀಲ ನಿರೂಪಿಸಿದರು. ಶ್ರೀಶೈಲ ಇಂಚಗೇರಿ ವಂದಿಸಿದರು. ಇದೇ ಕಾರ್ಯಕ್ರಮದಲ್ಲಿ ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕನ ನಿಧನದಿಂದ ಪರಿಸರ ಲೋಕ ಅನಾಥವಾಗಿದೆ ಎಂದು ಅವರ ಸ್ಮರಣೆ ಮಾಡುವ ಮೂಲಕ ಒಂದು ನಿಮಿಷ ಮೌನಚರಣೆ ಸಲ್ಲಿಸಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.