ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ: ಅಶೋಕ ಹಂಚಲಿ

| Published : Mar 27 2024, 01:07 AM IST

ಸಾರಾಂಶ

ಯಾವುದೇ ರಂಗವಿರಲಿ ಪ್ರಯತ್ನಶೀಲರಿಗೆ ಸೋಲೆಂಬುದು ಹತ್ತಿರವು ಸುಳಿಯುವುದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ನಿರಂತರ ಪ್ರಯತ್ನದಲ್ಲಿದ್ದರೆ ಯಾವ ಸಾಧನೆಯೂ ದೊಡ್ಡದೆನಿಸುವುದಿಲ್ಲ ಎಂದು ಶಿಕ್ಷಕ ಅಶೋಕ ಹಂಚಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಯಾವುದೇ ರಂಗವಿರಲಿ ಪ್ರಯತ್ನಶೀಲರಿಗೆ ಸೋಲೆಂಬುದು ಹತ್ತಿರವು ಸುಳಿಯುವುದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ನಿರಂತರ ಪ್ರಯತ್ನದಲ್ಲಿದ್ದರೆ ಯಾವ ಸಾಧನೆಯೂ ದೊಡ್ಡದೆನಿಸುವುದಿಲ್ಲ ಎಂದು ಶಿಕ್ಷಕ ಅಶೋಕ ಹಂಚಲಿ ಹೇಳಿದರು.

ಅಫಜಲ್ಪುರ ಪಟ್ಟಣದ ಮನೋರಮಾ ಮಧ್ವರಾಜ ಶಿಕ್ಷಣ ಸಂಸ್ಥೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಕರಿಯರ್ ಅಕಾಡೆಮಿ ವತಿಯಿಂದ ಆರಂಭಗೊಳ್ಳುತ್ತಿರುವ 3 ತಿಂಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಸ್ಪರ್ಧಾತ್ಮಕ ಯುಗ ಕ್ಷಣಕ್ಷಣಕ್ಕೂ ಅಪಡೇಟ್ ಆಗುತ್ತಿರುತ್ತದೆ. ಅದರ ಜೊತೆಗೆ ವಿದ್ಯಾರ್ಥಿಗಳು ಅಪಡೇಟ್ ಆಗುತ್ತಿರಬೇಕು. ಅಂದಾಗ ಮಾತ್ರ ಸಾಧನೆ ನಿಮ್ಮ ಬೆನ್ನ ಹಿಂದೆ ಬರಲಿದೆ ಎಂದ ಅವರು, ರಾಧಾಕೃಷ್ಣ ಕರಿಯರ್ ಅಕಾಡೆಮಿಯವರು ಬಹಳ ಒಳ್ಳೆಯ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಈ ಉಚಿತ ಶಿಬಿರದ ಲಾಭ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಮನೋರಮಾ ಮಧ್ವರಾಜ ಪ್ರೌಢಶಾಲೆ ಮುಖ್ಯಗುರು ಬಸವರಾಜ ನಿಂಬರ್ಗಿ ಮಾತನಾಡಿ, ವಿದ್ಯಾರ್ಥಿ ಜೀವನ ತಪ್ಪಸ್ಸಿದ್ದಂತಿರಬೇಕು. ಓದುವ ಸಮಯದಲ್ಲಿ ಮೊಬೈಲ್ ಮತ್ತಿತರ ಮನಸ್ಸು ಚಂಚಲಗೊಳಿಸುವ ಅಂಶಗಳಿಂದ ದೂರವಿರಬೇಕು. ಹೀಗಾದಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದರು.

ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ವೀರ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಕರವೇ ತಾಲೂಕು ಅಧ್ಯಕ್ಷ ಗುರುದೇವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಫಜಲ್ಪುರ ತಾಲೂಕಿನಲ್ಲಿ ಒಂದೇ ಒಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳಿರಲಿಲ್ಲ. ನಮ್ಮ ತಾಲೂಕಿನ ನೂರಾರು ವಿದ್ಯಾರ್ಥಿಗಳು ವಿಜಯಪುರ, ಧಾರವಾಡ, ಬೆಂಗಳೂರು ಸೇರಿ ಅನೇಕ ನಗರಗಳಿಗೆ ದುಬಾರಿ ಹಣ ಖರ್ಚು ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆದುಕೊಳ್ಳುತ್ತಾರೆ. ಅದೇ ಗುಣಮಟ್ಟದ ತರಬೇತಿ ನಮ್ಮಲ್ಲಿ ಸಿಗುವಂತಾದರೆ ಹಣ, ಸಮಯ ಎರಡು ಉಳಿತಾಯ ಆಗಲಿದೆ. ಜೊತೆಗೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಕನಸು ನನಸಾಗಿಸಲು ಸಹಾಯವಾಗುತ್ತದೆ. ಹೀಗಾಗಿ ನಾವು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಎಲ್ಲರಿಂದಲೂ ಉತ್ತಮ ಸಹಕಾರ ದೊರೆಯುತ್ತಿದೆ. ವಿದ್ಯಾರ್ಥಿಗಳು ತರಬೇತಿ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಜಯಕುಮಾರ ಕುದರಿ, ಸಿದ್ದರಾಮ ಕಲಶೆಟ್ಟಿ, ಲಕ್ಷ್ಮೀಪುತ್ರ ಜಮಾದಾರ, ಗೌರಿಶಂಕರ ಸೇರಿದಂತೆ ಅನೇಕರು ಇದ್ದರು.