ಸಾಧನೆ ಎನ್ನುವುದು ಸಾಧಕನ ಸ್ವತ್ತು, ಸೋಮಾರಿಯ ಸ್ವತ್ತಲ್ಲ. ಸಂಘ ಸಂಸ್ಥೆಗಳು ಸಮಾಜಕ್ಕೆ ಕೊಡುಗೆ ನೀಡಲು ಸಂಘಟನೆಯಿಂದ ಹೋರಾಟ ಮಾಡಿದಾಗ ಮಾತ್ರ ಬಹುದೊಡ್ಡ ಸಾಧನೆ ಉಂಟಾಗುತ್ತದೆ ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೊನ್ನಾಳಿಯಲ್ಲಿ ನುಡಿದಿದ್ದಾರೆ.
- ಬೇಡ ಜಂಗಮ ಸಂಘ ವಾರ್ಷಿಕೋತ್ಸವದಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಅಭಿಮತ । ಪ್ರತಿಭಾ ಪುರಸ್ಕಾರ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಾಧನೆ ಎನ್ನುವುದು ಸಾಧಕನ ಸ್ವತ್ತು, ಸೋಮಾರಿಯ ಸ್ವತ್ತಲ್ಲ. ಸಂಘ ಸಂಸ್ಥೆಗಳು ಸಮಾಜಕ್ಕೆ ಕೊಡುಗೆ ನೀಡಲು ಸಂಘಟನೆಯಿಂದ ಹೋರಾಟ ಮಾಡಿದಾಗ ಮಾತ್ರ ಬಹುದೊಡ್ಡ ಸಾಧನೆ ಉಂಟಾಗುತ್ತದೆ ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಹೊನ್ನಾಳಿ ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘದ ವತಿಯಿಂದ ಹಿರೇಕಲ್ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀವಚನ ನೀಡಿದರು.
ಹೊನ್ನಾಳಿ ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘ ಕಳೆದೊಂದು ವರ್ಷದಿಂದ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತಸದ ವಿಷಯ. ಒಗ್ಗಟ್ಟಿನಲ್ಲಿ ಬಲವಿದೆ. ಸಾಧನೆಗೆ ಸಂಘಟನಾ ಶಕ್ತಿ ಮುಖ್ಯವಾದ ಪಾತ್ರ ವಹಿಸುವುದು ಎನ್ನುವುದನ್ನು ಮನಗಾಣಬೇಕು. ಸಮಾಜದ ಎಲ್ಲ ಬಾಂಧವರು ಏಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.ಸಂಘಟನಾಶಕ್ತಿ ಫಲ:
ಸರ್ಕಾರಿ ನೌಕರರು 7ನೇ ವೇತನ ಆಯೋಗವನ್ನು ಸರ್ಕಾರ ಆದಷ್ಟು ಬೇಗನೆ ಜಾರಿಗೊಳಿಸದಿದ್ದಲ್ಲಿ ಎಲ್ಲ ನೌಕರರು ಕರ್ತವ್ಯಕ್ಕೆ ಗೈರಾಗುವ ಚಳವಳಿ ಹಮ್ಮಿಕೊಳ್ಳುವುದಾಗಿ ಹೇಳಿ, ಸರ್ಕಾರಕ್ಕೆ ಸರ್ಕಾರಿ ನೌಕರರು ಗಡುವು ನೀಡಿದ್ದರು. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಮನಗಂಡ ಸರ್ಕಾರ 7ನೇ ವೇತನವನ್ನು ತಕ್ಷಣ ಜಾರಿಗೊಳಿಸಿತು ಇದರಿಂದ ಸಂಘಟನೆಯ ಶಕ್ತಿ ಎಷ್ಟಿದೆ ಎನ್ನುವುದು ಅರ್ಥವಾಗುತ್ತದೆ ಎಂದರು.ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯ ಶ್ಲಾಘನೀಯ. ಬೇಡ ಜಂಗಮ ಸಮಾಜ ಸೇವಾ ಸಂಘದವರು ಕೇವಲ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸದೇ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾದವರನ್ನೂ ಸನ್ಮಾನಿಸಿದ್ದಾರೆ. ಈ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳಲ್ಲಿ ಪ್ರೇರೇಪಣೆ ಲಭಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೊನ್ನಾಳಿ ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಪಂಚಾಕ್ಷರಯ್ಯ ಬೈರನಹಳ್ಳಿ ಮಾತನಾಡಿ, ಸಂಘವನ್ನು ಅಧಿಕೃತ ನೋಂದಣಿ ಮಾಡಿಸಿ ಸಂಘದಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪದಾಧಿಕಾರಿಗಳು ಹಾಗೂ ಸಮಾಜದ ಬಾಂಧವರಿಂದ ಸಹಕಾರ ಮುಖ್ಯವಾಗಿದೆ. ಸಮಾಜದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಸಾವು ಸಂಭವಿಸಿದರೆ ಸಂಘದಿಂದ ಅಂತ್ಯಕ್ರಿಯೆಗೆ ತಕ್ಷಣ ₹2 ಸಾವಿರ ಧನ ಸಹಾಯ ಮಾಡುವುದು ಮತ್ತು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.ಬೇಡ ಜಂಗಮ ಸಮಾಜದ ಹಿರಿಯ ಮುಖಂಡ ಎಚ್.ಎಂ. ಗಂಗಾಧರಯ್ಯ ಮಾತನಾಡಿ, ಸಮಾಜ ಬಾಂಧವರೆಲ್ಲರಿಗೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಲಭಿಸಬೇಕು. ಆದರೆ, ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಿದರೆ ಇತರ ಜನಾಂಗದವರು ತಮಗೆ ಮತ ಹಾಕುವುದಿಲ್ಲ ಎನ್ನುವ ಹೆದರಿಕೆ ನಮ್ಮನ್ನಾಳುವ ಜನಪ್ರತಿನಿಧಿಗಳಿಗಿದೆ. ಆದ್ದರಿಂದ ಸಮಾಜದ ಎಲ್ಲ ಬಾಂಧವರು ಒಗ್ಗಟ್ಟು ಪ್ರದರ್ಶಿಸಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ವಿಶ್ರಾಂತ ಪ್ರಾಂಶುಪಾಲ ಎಂ.ಶಿವಶಂಕರಯ್ಯ, ಸಮಾಜದ ಮುಖಂಡರಾದ ಡಾ.ಚಂದ್ರಶೇಖರ ಸಾಲಿಮಠ, ಕೆ.ಎಂ.ಪರಮೇಶ್ವರಯ್ಯ, ನ್ಯಾಮತಿ ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ರೇವಣಸಿದ್ದಯ್ಯ, ಮಾತನಾಡಿದರು.ರಾಂಪುರ ಬೃಹನ್ಮಠದ ಸದ್ಗುರು ಶಿವಕುಮಾರ ಹಾಲಸ್ವಾಮೀಜಿ, ಗೋವಿನಕೋವಿ ಬೃಹನ್ಮಠದ ಸದ್ಗುರು ಶಿವಯೋಗಿ ಮಹಾಲಿಂಗ ಶೀವಾಚರ್ಯಸ್ವಾಮೀಜಿ, ಕತ್ತಿಗೆ ಮಠದ ಸದ್ಗುರು ಚನ್ನವೀರಸ್ವಾಮೀಜಿ ನೇತೃವಹಿಸಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇ.ಕುಮಾರಸ್ವಾಮಿ ಮತ್ತು ವೇ.ಎಂ.ಎಸ್.ಶಾಸ್ತ್ರಿ ಹೊಳೆಮಠ ವೇದಘೋಷ ನಡೆಸಿಕೊಟ್ಟರು. ಎ.ಜಿ.ಹೇಮಲತಾ, ಎ.ಜಿ.ಸುನಂದ ಪ್ರಾರ್ಥಿಸಿದರು. ವರ್ತಕ ಎಚ್.ಎಂ.ರುದ್ರೇಶ್ ಸ್ವಾಗತಿಸಿದರು. ಡಾ.ಎಸ್.ರುದ್ರಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಕೊಟ್ರೇಶ್ ನಿರೂಪಿಸಿದರು. ಎಂ.ಎನ್.ವಿಶ್ವಾರಾಧ್ಯ ವಂದಿಸಿದರು.- - -
ಕೋಟ್ ಬೇಡ ಜಂಗಮ ಸಮಾಜವು ಆರ್ಥಿಕ, ಉದ್ಯೋಗ, ಸಾಮಾಜಿಕ ಸಮಸ್ಯೆಗಳು ಸೇರಿದಂತೆ ಅನೇಕ ಸಮಸ್ಯಗಳಿಂದ ಬಳಲುತ್ತಿದ್ದು ಈ ಎಲ್ಲ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘ ಪ್ರಯತ್ನ ಮಾಡಬೇಕು- ಶ್ರೀ ಡಾ.ಒಡೆಯರ್ ಚನ್ನಮಲ್ಲಿಕಾರ್ಜು ಶ್ರೀ, ಹಿರೇಕಲ್ಮಠ
- - - -28ಎಚ್.ಎಲ್.ಐ1:ಹೊನ್ನಾಳಿ ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘದ ವತಿಯಿಂದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸಸ್ಸೆಲ್ಸಿ, ಪಿಯುಸಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಉತ್ತೀರ್ಣರಾದ ವಿದ್ಯಾಥಿಗಳನ್ನು ಸನ್ಮಾನಿಸಲಾಯಿತು.