ಪ್ರಾಧಿಕಾರಕ್ಕೆ ಸೇರಿದ ಜಾಗ ಮುಟ್ಟುಗೋಲು ಹಾಕಿಕೊಳ್ಳಲು ಬಿಡಿಎ ಎಂಜಿನಿಯರ್‌ಗಳಿಗೆ ಎಸಿಪಿ ಅಡ್ಡಿ

| Published : Nov 23 2024, 01:18 AM IST / Updated: Nov 23 2024, 09:09 AM IST

ಪ್ರಾಧಿಕಾರಕ್ಕೆ ಸೇರಿದ ಜಾಗ ಮುಟ್ಟುಗೋಲು ಹಾಕಿಕೊಳ್ಳಲು ಬಿಡಿಎ ಎಂಜಿನಿಯರ್‌ಗಳಿಗೆ ಎಸಿಪಿ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಡಿಎಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದ್ದ ಕಟ್ಟಡವನ್ನು ತೆರವು ಮಾಡುವಾಗ ಎಸಿಪಿ ಉಮಾಶಂಕರ್‌ ಅಡ್ಡಿ ಪಡಿಸಿದ್ದಾರೆ. ಅಲ್ಲದೆ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇಷ್ಟಕ್ಕೆ ನಿಲ್ಲದ ಅವರ ವರಾತ, ಕೀ ಕೊಡದ ಜೆಸಿಬಿ ಚಾಲಕನ ಮೇಲೂ ಹಲ್ಲೆ ಮಾಡಿದ್ದಾರೆ.

 ಬೆಂಗಳೂರು : ಪ್ರಾಧಿಕಾರಕ್ಕೆ ಸೇರಿದ ಜಾಗ ಮುಟ್ಟುಗೋಲು ಹಾಕಿಕೊಳ್ಳಲು ಬಿಡಿಎ ಎಂಜಿನಿಯರ್‌ಗಳಿಗೆ ಅಡ್ಡಿಪಡಿಸಿ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕೆಜಿಹಳ್ಳಿ ಉಪ ವಿಭಾಗದ ಎಸಿಪಿ ಉಮಾಶಂಕರ್‌ ವಿರುದ್ಧ ಪ್ರಕರಣ ದಾಖಲಿಸಲು ಬಿಡಿಎ ನಿರ್ಧರಿಸಿದೆ.

ಹಿರಿಯ ಸಚಿವರೊಬ್ಬರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಎಸಿಪಿ ಉಮಾಶಂಕರ್‌ ಒತ್ತುವರಿ ತೆರವು ಕಾರ್ಯಾಚರಣೆ ತಡೆದಿದ್ದಾರೆ. ಅಲ್ಲದೇ ಬಿಡಿಎ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೆಸಿಬಿ ಬೀಗದ ಕೀ ಕೊಡಲಿಲ್ಲ ಎಂಬ ಕಾರಣಕ್ಕೆ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಒಎಂಬಿಆರ್‌ ಬಡಾವಣೆಯ ಬಾಣಸವಾಡಿ ಗ್ರಾಮದ ಸರ್ವೆ ನಂ.159/1 ಜಾಗದಲ್ಲಿ ಪ್ರಭಾಕರ್‌ ರೆಡ್ಡಿ ಎಂಬುವರು ಅನಧಿಕೃತವಾಗಿ ನಿರ್ಮಿಸಿದ್ದ ಆರ್‌ಸಿಸಿ ಕಟ್ಟಡವನ್ನು ಶುಕ್ರವಾರ ಬೆಳಗ್ಗೆ ಬಿಡಿಎ ಎಂಜಿನಿಯರ್‌ಗಳು ತೆರವು ಮಾಡಲು ಆರಂಭಿಸಿದ್ದರು. ಆರ್‌ಸಿಸಿ ಕಟ್ಟಡದ ತೆರವು ಕಾರ್ಯ ಶೇ.30ರಷ್ಟು ಮುಗಿದಿರುವ ವೇಳೆ ಸ್ಥಳಕ್ಕೆ ಬಂದ ಕೆಜಿಹಳ್ಳಿ ಉಪ ವಿಭಾಗದ ಎಸಿಪಿ ಉಮಾಶಂಕರ್‌ ಅವರು, ಕಾರ್ಯಾಚರಣೆ ನಿಲ್ಲಿಸುವಂತೆ ತಾಕಿತು ಮಾಡಿದ್ದರು.

ಆದರೆ, ಬಿಡಿಎ ಅಧಿಕಾರಿಗಳು ತಮ್ಮಲ್ಲಿದ್ದ ದಾಖಲೆಗಳನ್ನು ತೋರಿಸಿ ನಿಯಮ ಪ್ರಕಾರ ಕಟ್ಟಡ ತೆರವು ಮಾಡುತ್ತಿರುವುದಾಗಿ ಹೇಳಿದ್ದರೂ ಒಪ್ಪದ ಉಮಾಶಂಕರ್‌, ದರ್ಪದಿಂದ ನಡೆದುಕೊಂಡರು. ದಾಖಲೆಗಳನ್ನು ಸ್ಟೇಷನ್‌ಗೆ ತೆಗೆದುಕೊಂಡು ಬರಬೇಕೆಂದಿದ್ದಲ್ಲದೇ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆ. ಕಾರ್ಯಾಚರಣೆಗೆ ಬಳಸಿದ ಜೆಸಿಬಿ ಕೀ ಕೊಡಲಿಲ್ಲ ಎಂಬ ಕಾರಣಕ್ಕೆ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿದರು ಎಂದು ಅಧಿಕಾರಿಗಳು ಆರೋಪಿಸಿದರು.

ಕಟ್ಟಡದ ಮಾಲೀಕ ಪ್ರಭಾಕರ ರೆಡ್ಡಿ ಅವರಿಗೆ ಸೇರಿದ್ದೆನ್ನಲಾದ ಮತ್ತು ನ್ಯಾಯಾಲಯದಲ್ಲಿ ಪ್ರಕರಣವಿರುವ ಜಾಗ ಸರ್ವೆ ಸಂಖ್ಯೆ 147ರಲ್ಲಿ ಇದೆ. ಆದರೆ, ಅವರು ಸರ್ವೆ ಸಂಖ್ಯೆ. 159/1ರಲ್ಲಿ ಕಟ್ಟಡ ಕಟ್ಟಿ ಕೊಂಡಿದ್ದಾರೆ. ಆರಂಭದಿಂದಲೂ ಈ ಬಗ್ಗೆ ನಮ್ಮ ಎಂಜಿನಿಯರ್‌ ವಾಸುದೇವಮೂರ್ತಿ ಅವರು ಎಚ್ಚರಿಸುತ್ತಿದ್ದರೂ ಕೇಳಿರಲಿಲ್ಲ. ಆದ್ದರಿಂದ ಕಟ್ಟಡ ತೆರವು ಕಾರ್ಯ ಕೈಗೊಂಡಿದ್ದೇವೆ ಎಂದು ದಾಖಲೆ ಸಮೇತ ಎಸಿಪಿ ಉಮಾಶಂಕರ್‌ಗೆ ಮಾಹಿತಿ ನೀಡಿದ್ದರೂ, ಅಸ್ತಿ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ್ದಾರೆ. ಎಸಿಪಿ ಉಮಾಶಂಕರ್‌ ವಿರುದ್ಧ ಬಿಡಿಎ ಎಸ್‌ಟಿಎಫ್‌ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಿದೆ ಎಂದು ಬಿಡಿಎ ಎಂಜಿನಿಯರ್‌ ಜಯರಾಂ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಕಟ್ಟಡ ತೆರವಿಗೂ ಮೊದಲು ಕಾರ್ಯಾಚರಣೆಗೆ ರಕ್ಷಣೆ ನೀಡುವಂತೆ ರಾಮಮೂರ್ತಿನಗರ ಪೊಲೀಸ್‌ ಠಾಣೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಘಟನಾ ಸ್ಥಳದಲ್ಲಿ ರಾಮಮೂರ್ತಿನಗರ ಪೊಲೀಸ್‌ ಸಿಬ್ಬಂದಿ ಮತ್ತು ಬಿಡಿಎ ಎಸ್‌ಟಿಎಫ್‌ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು ಎಂದು ಅಧಿಕಾರಿಗಳು ತಿಳಿಸಿದರು.