ಸಾರಾಂಶ
ರೈಲ್ವೆ, ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸೂಚನೆ। ಕೇಂದ್ರ ಸರ್ಕಾರದಿಂದ ₹49 ಕೋಟಿ ಬಿಡುಗಡೆ
ಕನ್ನಡಪ್ರಭ ವಾರ್ತೆ ದಾವಣಗೆರೆದಶಕಗಳ ಸಮಸ್ಯೆಯಾಗಿದ್ದ ಅಶೋಕ ಚಿತ್ರಮಂದಿರ ಸಮೀಪ ರೈಲ್ವೆ ಅಂಡರ್ ಪಾಸ್ ನಿರ್ಮಿಸಲು ಅಗತ್ಯ ಸ್ವತ್ತುಗಳನ್ನು ಭೂ ಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರೈಲ್ವೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಶೋಕ ಚಿತ್ರ ಮಂದಿರ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ₹49 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ. ತಕ್ಷಣವೇ ರೈಲ್ವೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಶೋಕ ಟಾಕೀಸ್ ಬಳಿಯ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಅಗತ್ಯ ಸ್ವತ್ತುಗಳ ಭೂ ಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸುವ ಕೆಲಸ ಮಾಡಬೇಕು ಎಂದರು.ಉಪ ವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಬೇಕು. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೇ ಮಾರ್ಗವು ದಾವಣಗೆರೆ ತಾ. ತೋಳಹುಣಸೆ, ಬುಳ್ಳಾಪುರ, ಆನಗೋಡು, ನೀರ್ಥಡಿ, ಹೆಬ್ಬಾಳ್, ಹುಣಸೇಕಟ್ಟೆ, ಪಂಚೇನಹಳ್ಳಿ, ಚಿಕ್ಕವ್ವನಹಳ್ಳಿ, ಕರಿಲಕ್ಕೇನಹಳ್ಳಿ, ಚಟ್ಟೋಬನಹಳ್ಳಿ, ಕೊಗ್ಗನರು, ಹಾಲುವರ್ತಿ ಗ್ರಾಮಗಳ ಮೂಲಕ ಹಾದು ಹೋಗಲಿದೆ. ರೈಲು ಮಾರ್ಗ ಸಾಗುವ ರಂಗವ್ವನಹಳ್ಳಿ, ಚಟ್ಟೋಬನಹಳ್ಳಿಯಲ್ಲಿ ಬಾಕಿ ಇರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ರೈತರ ಜಮೀನುಗಳ ಸರ್ವೇ ಮಾಡಿ, ಸರ್ಕಾರ ನಿಗದಿಪಡಿಸಿದ ನಿಗದಿತ ದರವನ್ನು ಅರ್ಹ ರೈತರಿಗೆ ಪಾವಕತಿಸಿ, ಆರ್‌ಟಿಸಿ ತಿದ್ದುಪಡಿ ಮಾಡಿ, ಕ್ರಮ ಮಾಡಿಕೊಳ್ಳಬೇಕು ಎಂದು ಆದೇಶಿಸಿದರು.
ಈಗಾಗಲೇ ಸರ್ವೇ ಕಾರ್ಯ ಆರಂಭ:ರೈಲ್ವೆ ಮತ್ತು ಕಂದಾಯ ಇಲಾಖೆಗಳ ಮೂಲಕ ಈಗಾಗಲೇ ಸರ್ವೇ ಕಾರ್ಯ ಆರಂಭವಾಗಿದ್ದು, ಶೀಘ್ರವೇ ಭೂ ಸ್ವಾಧೀನಕ್ಕೆ ಒಳಪಡುವ ಜಮೀನುಗಳ ಮೂಲ ದಾಖಲೆಗಳ ಪರಿಶೀಲಿಸಿ, ಪೋಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ರೈತರು ಯಾವುದೇ ಗೊಂದಲಕ್ಕೆ ಒಳಗಾಗದಂತೆ ನ್ಯಾಯ ಸಮ್ಮತವಾಗಿ ಭೂ ಸ್ವಾಧೀನ ಮಾಡಿಕೊಳ್ಳಬೇಕು. ರೈಲ್ವೆ ಮಾರ್ಗ ಹಾದು ಹೋದ ಜಮೀನುಗಳಲ್ಲಿ ಯಾವುದೇ ತಕರಾರು, ಇಂಡೀಕರಣ, ಪೋಡಿ ಹಾಗೂ ತಾಂತ್ರಿಕ ಸಮಸ್ಯೆಗಳಾದಲ್ಲಿ ಶೀಘ್ರವೇ ಪರಿಹರಿಸಬೇಕು ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ಉಪ ವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ತಹಸೀಲ್ದಾರ್ ಡಾ.ಅಶ್ವತ್, ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕಿ ಭಾವನಾ ಬಸವರಾಜ, ರೈಲ್ವೇ ಅಧಿಕಾರಿಗಳಿದ್ದರು. ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದವರ ಜಮೀನುಗಳು ರೈಲ್ವೆ ಮಾರ್ಗದ ಸ್ವಾಧೀನಕ್ಕೆ ಬಂದಲ್ಲಿ ಅಂತಹ ಸಾಗುವಳಿದಾರರಿಗೆ ಬೇರೆಡೆ ಜಮೀನು ನೀಡಿ ಸಕ್ರಮಗೊಳಿಸಿಕೊಳ್ಳಬೇಕು. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿ ತ್ವರಿತವಾಗಿ ನಮ್ಮ ಜಿಲ್ಲೆಯಲ್ಲಿ ಬಾಕಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಂಡು, ಕಾಮಗಾರಿಗೆ ಅನುಕೂಲವಾಗುವಂತೆ ಅನುವು ಮಾಡಿ ಕೊಡಿ.
ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ