ಹೊಸದುರ್ಗ ತಾಲೂಕಿನ ಭಗೀರಥ ಮಠದ ಆವರಣದಲ್ಲಿ ಮಂಗಳವಾರ ನಡೆದ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ದಲಿತ ಮತ್ತು ಹಿಂದುಳಿದ ಸಮುದಾಯದ ಮಠಗಳಿಗೆ ಬೆಂಗಳೂರಿನಲ್ಲಿ ಜಮೀನು ಮಂಜೂರು ಮಾಡಿದ್ದು ಅದರಂತೆ ಉಪ್ಪಾರ ಸಮಾಜ ಅಭಿವೃದ್ಧಿ ದೃಷ್ಠಿಯಿಂದ 1 ಎಕರೆ ಜಮೀನು ನೀಡಲಾಗಿದೆ ಎಂದು ಲೊಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.ತಾಲೂಕಿನ ಮಧುರೆ ಸಮೀಪದ ಬಿವಿ ನಗರದ ಭಗೀರಥ ಗುರುಪೀಠದ ಆವರಣದಲ್ಲಿ ಸಗರ ಚಕ್ರವರ್ತಿ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರುಷೋತ್ತಮನಂದ ಸ್ವಾಮೀಜಿ ಅವರು 27 ವರ್ಷಗಳ ಕಾಲ ಸಮುದಾಯವನ್ನು ಎಲ್ಲಾ ರಂಗದಲ್ಲಿಯೂ ಸದೃಢವಾಗಿ ಕಟ್ಟುವಂತಹ ಕೆಲಸ ಮಾಡಿದ್ದಾರೆ. ಯಾವುದೇ ಸಮುದಾಯಕ್ಕೆ ಗುರಿ ಬೇಕು. ತತ್ವ, ಸಿದ್ಧಾಂತ ಇರಬೇಕು. ಶ್ರೀಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸ್ವಾಮೀಜಿ ಅವರ ಕನಸು ದೊಡ್ಡದಿದೆ. ಅವರ ಜೊತೆ ನಾನು ಗಟ್ಟಿಯಾಗಿ ನಿಲ್ಲುತ್ತೇನೆ. ಸ್ವಾಮೀಜಿ ಅವರು ಸಾಧನೆಯ ಮೆಟ್ಟಿಲುಗಳನ್ನು ಹತ್ತಲು ಎಲ್ಲಾ ಭಕ್ತರು ಸಹಕಾರ ನೀಡಬೇಕು ಎಂದರು.ಉಪ್ಪಾರ ಸಮಾಜ ಎಲ್ಲಾ ಶೋಷಿತ ಸಮುದಾಯಕ್ಕೆ ಧ್ವನಿ ಕೊಡುವಂತಹ ಕೆಲಸ ಮಾಡುತ್ತಿದೆ. ಹೊಸದುರ್ಗ ಶ್ರೀಮಠಕ್ಕೆ ಮಂಜೂರಾಗಿದ್ದ ಜಮೀನು ಅರಣ್ಯ ವ್ಯಾಪ್ತಿಗೆ ಸೇರಿದ್ದರಿಂದ ಅದನ್ನು ಸರ್ಕಾರ ವಾಪಸ್ಸು ಪಡೆದಿತ್ತು. ಅದನ್ನು ಮಠಕ್ಕೆ ಮರಳಿ ಕೊಡಿಸಲು ಶಾಸಕ ಬಿ.ಜಿ.ಗೋವಿಂದಪ್ಪ ಪ್ರಯತ್ನ ನಡೆಸುತ್ತಿದ್ದಾರೆ. ನಾನು ಕೂಡ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು.
ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾತನಾಡಿ ಶೋಷಿತ ಹಿಂದುಳಿದ ಸಮಾಜಗಳು ಶಿಕ್ಷಣ ಮತ್ತು ಸಂಸ್ಕಾರದ ಮೂಲಕ ಪ್ರಗತಿ ಕಾಣಬೇಕು. ಅದಕ್ಕೆ ಸಂಸ್ಕಾರ ಗುರುವಿನ ಮಾರ್ಗದರ್ಶನಬೇಕೆಂಬ ಎಚ್ಚರಿಕೆ ಭಾವನೆ ಬೆಳೆಸಿಕೊಂಡ ಪರಿಣಾಮ ಇಂದು ಮಠ, ಪೀಠಗಳ ಮೂಲಕ ಯಶಸ್ಸಿನ ದಾರಿಯಲ್ಲಿ ಹೋಗುತ್ತಿವೆ ಎಂದರು.ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಆಗುವಂತೆ ಮನವಿ ಮಾಡಲಾಗುವುದು. ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ, ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಭಗೀರಥ ಗುರುಪೀಠದ ಡಾ.ಪುರುಷೋತ್ತಮಾನಂದಪುರಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು. ಶಾಸಕ ಪುಟ್ಟರಂಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಪಂಡಿತಾರಾಧ್ಯ ಸ್ವಾಮೀಜಿ, ನಿರಂಜನಾನಂದ ಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಈಶ್ವರಾನಂದ ಪುರಿ ಸ್ವಾಮೀಜಿ, ಕಬೀರರಾನಂದ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕರಾದ ಟಿ.ರಘುಮೂರ್ತಿ, ಶ್ರೀನಿವಾಸ್ ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ, ಉಪ್ಪಾರ ಸಮಾಜದ ಮುಖಂಡರು ಇದ್ದರು.