ಮದ್ದೂರು ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ

ಕನ್ನಡಪ್ರಭ ವಾರ್ತೆ ಮದ್ದೂರು

ಶೋಷಣೆಗೆ ಒಳಗಾಗುವ ಎಸ್ಸಿ, ಎಸ್ಟಿ ಜನಾಂಗದವರ ಸಮಸ್ಯೆ ತಾಲೂಕು ಹಂತದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಶೋಷಣೆಗೆ ಒಳಗಾಗುವ ಎಸ್ಸಿ, ಎಸ್ಟಿ ಜನಾಂಗದವರು ಯಾರೇ ಆಗಿರಲಿ ಆಯೋಗಕ್ಕೆ ಬಂದು ನಿರ್ಭೀತಿಯಿಂದ ಪ್ರಕರಣ ದಾಖಲಿಸಬಹುದು ಎಂದು ಹೇಳಿದರು.

ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟು ಅಯೋಗ ಸದಾ ನಿಮ್ಮೊಂದಿಗೆ ಇರುತ್ತದೆ. ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಾಲೂಕಿನಿಂದ ಈಗಾಗಲೇ 48 ಅರ್ಜಿ ಆಯೋಗಕ್ಕೆ ಸಲ್ಲಿಕೆಯಾಗಿದ್ದು, ಅದರಲ್ಲಿ ನ್ಯಾಯಾಲಯದ ಮುಖಾಂತರ 12 ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.


ಜನರು ಆಯೋಗಕ್ಕೆ ಅಲೆದಾಡಬಾರದು ಎಂಬ ಉದ್ದೇಶದಿಂದ ಕೆಲವು ಅರ್ಜಿ ತಾಲೂಕು ಮಟ್ಟದಲ್ಲೆ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರಸಭೆಯಲ್ಲಿ 2023 ರಿಂದ 2025 ರವರೆಗೆ ಶೇ. 25ರ ಅನುದಾನದ ಖರ್ಚು ವೆಚ್ಚಗಳ ಬಗ್ಗೆ ಪೌರಾಯುಕ್ತರ ಬಳಿ ಮಾಹಿತಿ ಕೇಳಿದೆ. ಸೂಕ್ತ ಮಾಹಿತಿ ಆಯೋಗಕ್ಕೆ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಲಿತ ಜನಾಂಗಕ್ಕೆ ಪರ್ಯಾಯವಾಗಿ ಸ್ಮಶಾನ ಭೂಮಿ ನೀಡುವಂತೆ ಮನವಿ ಬಂದಿದ್ದು, ಅಂತಹ ಸೂಕ್ಷ್ಮ ಗ್ರಾಮಗಳಲ್ಲಿ ಪರ್ಯಾಯವಾಗಿ ಸ್ಮಶಾನ ಭೂಮಿ ಮಂಜೂರು ಮಾಡಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮುಖ್ಯವಾಗಿ ಎಲ್ಲಾ ಇಲಾಖೆಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ ಹಣ ಸರಿಯಾಗಿ ಅರ್ಹರಿಗೆ ತಲುಪಬೇಕು. ಎಸ್‌ಸಿ, ಎಸ್‌ಟಿ ಸಮುದಾಯಗಳ ನಾಗರಿಕ ಹಕ್ಕುಗಳು, ಶಿಕ್ಷಣ ಹಾಗೂ ಅವರನ್ನು ಸಾಮಾಜಿಕವಾಗಿ ಸದೃಢ ಮಾಡಲು ಅಧಿಕಾರಿಗಳು ಕ್ರಮವಹಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಶೀಘ್ರ ಪರಿಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯ. ಇದರಲ್ಲಿ ಯಾವುದೇ ಲೋಪ ದೋಷಗಳು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಆಯೋಗವು ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ರಾಮಲಿಂಗಯ್ಯ, ನಗರಸಭೆ ಪೌರಾಯುಕ್ತೆ ರಾಧಿಕಾ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಸಿಪಿಐ ನವೀನ್, ನಾರಾಯಣಿ, ಮುಖಂಡರಾದ ಚಿದಂಬರ ಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಎಚ್.ರಾಜೇಂದ್ರ, ಕೆಡಿಪಿ ಸದಸ್ಯ ಅರುವನಹಳ್ಳಿ ಸಿದ್ದರಾಜು, ಶಿವಲಿಂಗಯ್ಯ, ಮಹದೇವಯ್ಯ, ಮೂರ್ತಿ, ಕೆ.ಶ್ರೀನಿವಾಸ್, ಸ್ವಾಮಿ, ಆಲೂರು ಕುಮಾರ್, ಭಾನು ಪ್ರಕಾಶ್ ಮತ್ತಿತರರು ಇದ್ದರು.

--------------

5ಕೆಎಂಎನ್ ಡಿ21

ಮದ್ದೂರು ಪ್ರವಾಸಿ ಮಂದಿರದಲ್ಲಿ ಡಾ.ಎಲ್. ಮೂರ್ತಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.