ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಇಂದಿನ ಯುವ ದಲಿತ ಹೋರಾಟಗಾರರು ಹಿರಿಯ ಹೋರಾಟಗಾರರ ತ್ಯಾಗ ಬಲಿದಾನ ಅರಿತು ಅವರ ಮಾರ್ಗದರ್ಶನದಲ್ಲಿ ಹೋರಾಟಗಳನ್ನು ರೂಪಿಸಿಕೊಂಡು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ( ಪರಿವರ್ತನವಾದ)ದ ರಾಜ್ಯಾಧ್ಯಕ್ಷ ಗೋವಿಂದರಾಜು ಸಲಹೆ ನೀಡಿದರು.ನಗರದಲ್ಲಿ ಶನಿವಾರ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ನಮ್ಮ ಸಂಘಟನೆ ಅಂಬೇಡ್ಕರ್ ನೆರಳಿನಲ್ಲಿ ಮುನ್ನಡೆಯುತ್ತಿದ್ದು ಅಂಬೇಡ್ಕರ್ ಅವರ ತತ್ವಾದರ್ಶಕ್ಕೆ ಕಳಂಕ ಆಗದಂತೆ ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ನೊಂದವರಿಗೆ, ಅಹಾಯಕರಿಗೆ, ದೀನ ದಲಿತರಿಗೆ ನ್ಯಾಯಕೊಡಿಸಲು ಹೋರಾಟ ಮಾಡಬೇಕಿದೆ ಎಂದರು.ಗುರಿ ಇಲ್ಲದ ಚಳವಳಿ ಜೀವಂತವಾಗಿರುವುದಿಲ್ಲ. ಗುರಿ ಹೊಂದಿರುವ ಚಳುವಳಿಗಳು ಮುಂದಿನ ಪೀಳಿಗೆ ಜೀವಂತವಾಗಿರುತ್ತವೆ. ಆದ್ದರಿಂದ ಯುವ ಹೋರಾಟಗಾರರು ಹಿರಿಯ ಹೋರಾಟಗಾರರ ಹೋರಾಟಗಳನ್ನು ಅರ್ಥಮಾಡಿಕೊಂಡು ಹೋರಾಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಹೋರಾಟಗಾರ ಚಂದ್ರಪ್ರಸಾದ್ ತ್ಯಾಗಿ ಅವರ ಹೋರಾಟಗಳ ಬಗ್ಗೆ ನೆನಪಿಸಿಕೊಂಡರು.ದಲಿತ ಚಳುವಳಿ ಹೋರಾಟಗಳು ನೊಂದವರಿಗೆ ಆಶ್ರಯ ನೀಡುವಂತಾಗಬೇಕು. ಆದರೆ ಅವರನ್ನೇ ಶೋಷಣೆ ಮಾಡುವ ಮಾತುಗಳು ಇತ್ತೀಚೆಗೆ ಕೇಳಿ ಬರುತ್ತಿದ್ದು ಇದು ಕೊನೆಯಾಗಬೇಕು. ಅಂಬೇಡ್ಕರ್ ಹೆಸರಿಗೆ ಕಳಂಕ ತರುವಂತ ಯಾವುದೇ ಕೆಲಸ ಮಾಡದೇ ಸಂಘಟನೆಗಳನ್ನು ಬಲಪಡಿಸಿಕೊಂಡು ನ್ಯಾಯಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.ಧರ್ಮಸ್ಥಳದಲ್ಲಿ ಪತ್ರಕರ್ತರ ಮೇಲೆ ನಡೆದಿರುವ ದಾಳಿ ಖಂಡನೀಯ. ಈಗಾಗಗಲೇ ಪ್ರಕರಣಗಳ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದ್ದು ಯಾರು ತಪ್ಪು ಮಾಡಿದ್ದಾರೆ ಅಂತಹ ಗೋಮುಖವ್ಯಾಗ್ರಗಳನ್ನು ಬಯಲಿಗೆ ಎಳೆಯಬೇಕಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಗೃಹ ಮಂತ್ರಿಗಳು ಎಚ್ಚರಿಕೆ ವಹಿಸಬೇಕು ಎಂದು ಆಗ್ರಹ ಮಾಡಿದರು.ಇನ್ನು ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನವಾಗಿ ಮಾತನಾಡುತ್ತಿರುವುದು ಹೆಚ್ಚಾಗಿ ನಡೆಯುತ್ತಿದ್ದು ಇದನ್ನು ಪ್ರತಿಯೊಬ್ಬರು ಖಂಡಿಸಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಹೋರಾಟ ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯ ವಾಗಿದೆ. ಇನ್ನು ಸಂವಿಧಾನ ವಿರೋಧಿ ಹೇಳಿಕೆಗಳು ಆಗಾಗ ಕೇಳಿಬರುತ್ತಿರುವುದು ಸಂವಿಧಾನಕ್ಕೆ ಮಾರಕವಾಗಿದೆ ನಾವೆಲ್ಲರೂ ಸಂವಿಧಾನವನ್ನು ಉಳಿಸುವ-ರಕ್ಷಿಸುವ ಹೋರಾಟಗಳನ್ನು ರೂಪಿಸಿಬೇಕಾಗಿದೆ ಎಂದರು.ದಲಿತ ಸಂಘಟನೆಗಳ ಒಕ್ಕೂಟದಿಂದ ಈಗಾಗಲೇ ಪಿಟಿಸಿಎಸ್ ಕಾಯ್ದೆ ಬಗ್ಗೆ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ. ಈಗಾಗಲೇ ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆ ಅವೈಜ್ಞಾನಿಕವಾಗಿದ್ದು ಇದನ್ನು ತಿದ್ದುಪಡಿ ತರುಲು ಸರ್ಕಾರಕ್ಕೆ ಒತ್ತಡ ಹಾಕುವ ಕೆಲಸ ಮಾಡಬೇಕಿದೆ. ಆ. 15ರಂದು ಸ್ವಾತಂತ್ರ್ಯ ದಿನಾಚರಣೆ ಧ್ವಜರೋಣ ಮಾಡಲು ಬರುವ ಸಚಿವರಿಗೆ ಸಂಘಟನೆಗಳ ಮುಖಂಡರು ಈ ಬಗ್ಗೆ ಮನವಿ ನೀಡುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ದಲಿತ ಹೋರಾಟಗಾರ ಎಚ್.ಕೆ. ಸಂದೇಶ್, ಕೆ. ಈರಪ್ಪ, ವಿರೇಶ್ ಹಿರೇಹಳ್ಳಿ, ಶಂಕರ್‌ರಾಜ್, ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್, ರಾಜ್ಯ ಸಂಘಟನಾ ಸಂಚಾಲಕ ಧರ್ಮಯ್ಯ, ಖಜಾಂಚಿ ಶಿವಶಂಕರ್, ಮೈಸೂರು ವಿಭಾಗೀಯ ಅಧ್ಯಕ್ಷ ಶಿವರಾಜ್ ಬೆಳವಾಡಿ, ತಟ್ಟಕೆರೆ ಮಂಜಣ್ಣ, ದಿನೇಶ್, ವಿಜಯಕುಮಾರ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ವಿಠಲ್, ಕುಮಾರ್, ಜಗದೀಶ್,ಅನಂತರಾಜ್, ತೇಜೂರು ಮಂಜು, ಉಮೇಶ್ , ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರರು ಇದ್ದರು.ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಗೋವಿಂದರಾಜ್ ಅವರು ಹಾಸನ ಜಿಲ್ಲಾಘಟಕದ ಪದಾಧಿಕಾರಿಗಳ ಘೋಷಣೆ ಮಾಡಿದರು. ಹಾಸನ ಜಿಲ್ಲೆಯ ಮುಖ್ಯ ಸಂಘಟನಾ ಸಂಚಾಲಕರಾಗಿ ಮಂಜುತೇಜೂರು, ಪ್ರಧಾನ ಸಂಚಾಲಕರಾಗಿ ಅನಂತರಾಜ್(ಅನು), ಸಂಚಾಲಕರಾಗಿ ಉಮೇಶ್, ಮಂಜು ಇವರ ಆಯ್ಕೆಯ ಜೊತೆಗೆ ತಾಲೂಕು ಘಟಕದ ಸಂಚಾಲಕರನ್ನು ಘೋಷಣೆ ಮಾಡಿದರು. ದಲಿತ ಚಳುವಳಿಯ ಸಿದ್ಧಾತದಡಿ ಹೋರಾಟ ಮುಂದುವರೆಸಿಕೊಂಡು ಹೋಗುವುದಾಗಿ ಎಲ್ಲರು ಪ್ರತಿಜ್ಞೆ ಮಾಡಿದರು. ಅಂಬೇಡ್ಕರ್ ಬಂದು ಹೋಗಿರುವ ನೆಲದಲ್ಲಿ ಸಂಘಟನೆ ಬಲಗೊಳಿಸಿ ಸಲಹೆ ನೀಡಿದರು.