ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ: ಚಂದ್ರಶೇಖರ

| Published : May 31 2024, 02:15 AM IST

ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ: ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರಿಗೂ ಶೀಘ್ರವಾಗಿ ಜನನ ಮತ್ತು ಮರಣ ಪ್ರಮಾಣ ಪತ್ರ ದೊರೆಯಬೇಕು ಎಂಬ ಉದ್ದೇಶದಿಂದ ಗ್ರಾಪಂ ಕಾರ್ಯದರ್ಶಿಗಳನ್ನು ಉಪನೋಂದಣಾಧಿಕಾರಿಗಳಾಗಿ ನೇಮಕ ಮಾಡಿದೆ.

ಕಾರವಾರ: ಜನನ-ಮರಣ ಪ್ರಮಾಣ ಪತ್ರಗಳೆರಡೂ ಮನುಷ್ಯನ ಜೀವನದ ಪ್ರಮುಖ ದಾಖಲೆಗಳಾಗಿದ್ದು, ಹೊಸದಾಗಿ ಉಪನೋಂದಣಾಧಿಕಾರಿಗಳಾಗಿ ನೇಮಕವಾದ ಗ್ರಾಪಂ ಕಾರ್ಯದರ್ಶಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ಎಂ.ಸಿ. ಚಂದ್ರಶೇಖರ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಾರ್ಯಾಲಯದ ಸಹಯೋಗದಲ್ಲಿ ಹೊಸದಾಗಿ ಉಪನೋಂದಣಾಧಿಕಾರಿಗಳಾಗಿ ನೇಮಕವಾಗಿರುವ ಗ್ರಾಪಂ ಕಾರ್ಯದರ್ಶಿಗಳಿಗೆ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಗುರುವಾರ ಆಯೋಜಿಸಿದ್ದ ಜನನ-ಮರಣ ನೋಂದಣಿ ಅಧಿನಿಯಮ, ಮತ್ತು ಇ-ಜನ್ಮ ತಂತ್ರಾಂಶ ನಿರ್ವಹಣೆ ಕುರಿತು 2 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜನನ ಪ್ರಮಾಣ ಪತ್ರ ಹುಟ್ಟಿನಿಂದ ಜೀವನ ಉದ್ದಕ್ಕೂ ಚಾಲ್ತಿಯಲ್ಲಿದ್ದರೆ, ಮರಣ ಪ್ರಮಾಣ ಪತ್ರ ಮರಣ ನಂತರ ಅವರ ಅವಲಂಬಿತರ ಅನುಕೂಲಕ್ಕಾಗಿ ಚಾಲ್ತಿಯಲ್ಲಿರುತ್ತದೆ. ಪತ್ರಿಯೊಬ್ಬರಿಗೂ ಶೀಘ್ರವಾಗಿ ಜನನ ಮತ್ತು ಮರಣ ಪ್ರಮಾಣ ಪತ್ರ ದೊರೆಯಬೇಕು ಎಂಬ ಉದ್ದೇಶದಿಂದ ಗ್ರಾಪಂ ಕಾರ್ಯದರ್ಶಿಗಳನ್ನು ಉಪನೋಂದಣಾಧಿಕಾರಿಗಳಾಗಿ ನೇಮಕ ಮಾಡಿದೆ. ಆ ನಿಟ್ಟಿನಲ್ಲಿ ಈ ತರಬೇತಿಯಲ್ಲಿ ನೀಡುವ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸಿ ಎಂದರು.

ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್ ಮಾತನಾಡಿ, ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ತಮಗೆ ವಹಿಸಿದ ಕೆಲಸವನ್ನು ಯಾವುದೇ ಲೋಪ-ದೋಷಗಳಿಗೆ ಅವಕಾಶ ನೀಡದೇ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಮಾತನಾಡಿ, ಜನನ ಪ್ರಮಾಣ ಪತ್ರಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮರಣ ಪ್ರಮಾಣ ಪತ್ರಕ್ಕಿದೆ. ಹೀಗಾಗಿ ಜನರಿಗೆ ಸಿಗುವ ಸೌಲಭ್ಯಗಳು ಗ್ರಾಮ ಮಟ್ಟದಲ್ಲೇ ಸಿಗಬೇಕು ಎಂಬ ಉದ್ದೇಶದಿಂದ ಗ್ರಾಪಂ ಕಾರ್ಯದರ್ಶಿಗಳಿಗೆ ಸರ್ಕಾರ ಗುರುತರವಾದ ಜವಾಬ್ದಾರಿ ನೀಡಿದ್ದು, ಈ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ ಮೇಸ್ತ ಪ್ರಾಸ್ತಾವಿಕವಾಗಿ ಮಾತನಾಡಿ, ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸುವ ಬಗ್ಗೆ ತರಬೇತಿ ಪಡೆದುಕೊಳ್ಳುವುದು ಮಾತ್ರವಲ್ಲದೇ ತರಬೇತಿಯ ಆನಂತರ ಮಾಡಬೇಕಾದ ಕರ್ತವ್ಯದ ಜತೆಗೆ ಜನನ, ಮರಣ ನೋಂದಣಿ ಅಧಿನಿಯಮ ಮತ್ತು ನಿಯಮಗಳ ಉಪಬಂಧಗಳ ಪೂರ್ಣ ಅರಿವು ಇರಬೇಕು ಎಂದರು.

ಈ ಹಿಂದೆ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ನಿರ್ವಹಣೆಯಾಗುತ್ತಿತ್ತು. ಈಗ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮಗಳಲ್ಲಿಯೇ ಜನನ ಮತ್ತು ಮರಣ ಪ್ರಮಾಣ ಶೀಘ್ರವಾಗಿ ನೀಡುವ ಉದ್ದೇಶದಿಂದ ಗ್ರಾಪಂ ಕಾರ್ಯದರ್ಶಿಗಳನ್ನು ಉಪನೋಂದಣಾಧಿಕಾರಿಯಾಗಿ ನೇಮಕ ಮಾಡಿರುವುದರಿಂದ ಕಾರ್ಯದರ್ಶಿಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಹೀಗಾಗಿ ತರಬೇತಿಯಲ್ಲಿ ನೀಡುವ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು ಮತ್ತು ಯಾವುದೇ ಗೊಂದಲಗಳಿದ್ದರೆ ಕೇಳಿ ಬಗೆಹರಿಸಿಕೊಳ್ಳುವಂತೆ ಹೇಳಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ಸಹಾಯಕ ನಿರ್ದೇಶಕ ದತ್ತಾತ್ರೇಯ ನಾಯ್ಕ ತರಬೇತಿ ನೀಡಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ಪರೀಕ್ಷಾರ್ಥ ಸಹಾಯಕ ನಿರ್ದೇಶಕ ಅಶೋಕ ನಾಯ್ಕ, ಗ್ರಾಪಂ ಕಾರ್ಯದರ್ಶಿಗಳು, ಡಾಟಾ ಎಂಟ್ರಿ ಆಪರೇಟರ್‌ಗಳು ಇದ್ದರು.