ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲ ಧಗೆ ಹೆಚ್ಚಾಗುತ್ತಿದ್ದು, ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಕುಡಿವ ನೀರಿನ ಸಮಸ್ಯೆ ಕಂಡುಬಂದ ತಕ್ಷಣ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆ ಬರ ಹಾಗೂ ಕುಡಿವ ನೀರಿನ ಪರಿಸ್ಥಿತಿ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿವ ನೀರಿಗೆ ಸಂಬಂಧಪಟ್ಟಂತೆ ತಾಲೂಕು ಮಟ್ಟ ಹಾಗೂ ಹೋಬಳಿ ಹಂತದವರೆಗೂ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಇಲಾಖೆಯೊಂದಿಗೆ ಸಂಬಂಧಪಟ್ಟ ತಹಸೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿರುವ ಗ್ರಾಮಗಳ ನಿಖರವಾದ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.ಟ್ಯಾಂಕರುಗಳಲ್ಲಿ ಸರಬರಾಜು ಮಾಡುವ ನೀರು ಕುಡಿಯಲು ಯೋಗ್ಯವಾದುದೇ ಎಂಬ ಬಗ್ಗೆ ಪರಿಶೀಲಿಸಬೇಕೆಂದು ಸಲಹೆ ನೀಡಿದರು. ಕೊಳವೆ ಬಾವಿ ಮತ್ತು ಆರ್‌ಓ ಘಟಕಗಳ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ದಿನಗಳಲ್ಲಿ ಎಷ್ಟು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ, ಈ ಸಮಸ್ಯೆಯಾತ್ಮಕ ಗ್ರಾಮಗಳಿಗೆ ಕೈಗೊಂಡಿರುವ ಕ್ರಮಗಳು, ಟ್ಯಾಂಕರ್ ಪೂರೈಕೆ ಮಾಡುವ ಗ್ರಾಮಗಳಲ್ಲಿ ಇರುವ ಜನಸಂಖ್ಯೆ, ಗ್ರಾಮದಲ್ಲಿರುವ ಇರುವ ಬೋರ್‌ವೆಲ್ ಮಾಹಿತಿ ಸೇರಿ ಇನ್ನೂ ವಾರ ಹಾಗೂ ಹದಿನೈದು ದಿನಗಳಲ್ಲಿ ಸಮಸ್ಯೆಯಾಗುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಶೀಘ್ರ ವರದಿ ನೀಡುವಂತೆ ತಿಳಿಸಿದ ಅವರು, ಬರ ಹಿನ್ನೆಲೆ ಜನರಿಗೆ ನೀರು ಕೊಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.ಗೋಶಾಲೆಗಳ ಮಾಹಿತಿ ನಿಖರವಾಗಿರಲಿ:
ಜಿಲ್ಲೆಯಲ್ಲಿ ತೆರೆಯಲಾಗಿರುವ ಗೋಶಾಲೆಗಳಲ್ಲಿ ಎಷ್ಟು ಜಾನುವಾರುಗಳಿವೆ. ಗೋಶಾಲೆಗಳಲ್ಲಿ ಪ್ರತಿನಿತ್ಯವೂ ಖರ್ಚಾಗುವ ಮೇವು ಮಾಹಿತಿ ನಿಖರವಾಗಿರಬೇಕು. ಗೋಶಾಲೆಗಳಲ್ಲಿ ಕುಡಿವ ನೀರು, ನೆರಳಿನ ವ್ಯವಸ್ಥೆ, ಮೇವು ಇತ್ಯಾದಿಗಳು ಸಮರ್ಪಕವಾಗಿ ವಿತರಣೆಯಾಗುತ್ತಿದೆಯೇ ಎಂಬುವುದರ ಕುರಿತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಗೋಶಾಲೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಸಹಾಯವಾಣಿ ಸಂಖ್ಯೆಗೆ ಸ್ವೀಕೃತವಾದ ದೂರುಗಳ ವರದಿ ನೀಡಿ:ಜಿಲ್ಲೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿವ ನೀರು ಸಮಸ್ಯೆ ಕಂಡುಬಂದಲ್ಲಿ, ತ್ವರಿತವಾಗಿ ಸ್ಪಂದಿಸಲು ಈ ಹಿಂದೆ ತಾಲೂಕು ಕಚೇರಿಗಳಲ್ಲಿ ತಾಲೂಕುವಾರು ಸಹಾಯವಾಣಿ ಪ್ರಾರಂಭಿಸಲಾಗಿತ್ತು. ಸಹಾಯವಾಣಿ ಸಂಖ್ಯೆಗೆ ಕಳೆದ ಎರಡು ತಿಂಗಳ ಹಿಂದೆ ತಾಲೂಕುವಾರು ಸ್ವೀಕೃತವಾದ ದೂರು ಮಾಹಿತಿಯ ವರದಿ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕಿ ಇಂದಿರಾಬಾಯಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಜಿಲ್ಲೆಯ 6 ತಾಲೂಕು ತಹಸೀಲ್ದಾರ್‌ಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿವ ನೀರು ಇಲಾಖೆ ಅಧಿಕಾರಿಗಳು ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.ಚಿತ್ರದುರ್ಗ ತಾಲೂಕಿನ ಚನ್ನಯ್ಯನಹಟ್ಟಿ, ಬಹದ್ಧೂರ್ ಘಟ್ಟ, ಬಸವನಶಿವನಕೆರೆ, ಬೇಡರ ಶಿವನಕೆರೆ, ಲಿಂಗವ್ವನಾಗ್ತಿಹಳ್ಳಿ, ನೆಲ್ಲಿಕಟ್ಟೆ, ಪೇಲೂರಹಟ್ಟಿ, ಮಾಡನಾಯಕನಹಳ್ಳಿ, ಚಿಕ್ಕಪ್ಪನಹಳ್ಳಿ, ಮುದ್ದಾಪುರ, ಸಿದ್ದವ್ವನದುರ್ಗ, ಹಳೇ ಕಲ್ಲಹಳ್ಳಿ, ಗೋನೂರು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಚಿತ್ರದುರ್ಗ ತಾಲೂಕು ನೋಡಲ್ ಆಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾತ್ ಸಭೆಗೆ ಮಾಹಿತಿ ನೀಡಿದರು.
ಚಳ್ಳಕೆರೆ ತಾಲೂಕಿನ 15 ಗ್ರಾಮಗಳು, ಹಿರಿಯೂರು 53 ಹಳ್ಳಿ, ಹೊಳಲ್ಕೆರೆ 32 ಹಳ್ಳಿ, ಹೊಸದುರ್ಗ 15 ಗ್ರಾಮಗಳಲ್ಲಿ ಹಾಗೂ ಮೊಳಕಾಲ್ಮುರಿನ ಹಳ್ಳಿಗಳಲ್ಲಿ ಸದ್ಯದ ಪರಿಸ್ಥಿತಿಯಿಲ್ಲಿ ಕುಡಿವ ನೀರಿಗೆ ತೊಂದರೆ ಇಲ್ಲ. ಒಂದು ವಾರದ ನಂತರ ತುಮಕೂರ್ಲಹಳ್ಳಿ, ದೇವಸಮುದ್ರ, ಬಿ.ಜಿ.ಕೆರೆ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ತಿಳಿಸದರು.