ಸರ್ಕಾರದ ಪರಿಹಾರ ಹಣ ಕಡಿತಗೊಳಿಸಿದರೆ ಬ್ಯಾಂಕ್‌ ವಿರುದ್ಧ ಕ್ರಮ

| Published : Jul 15 2025, 01:06 AM IST / Updated: Jul 15 2025, 01:07 AM IST

ಸರ್ಕಾರದ ಪರಿಹಾರ ಹಣ ಕಡಿತಗೊಳಿಸಿದರೆ ಬ್ಯಾಂಕ್‌ ವಿರುದ್ಧ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮದಲ್ಲಿ ಒಂದೇ ದಿನ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಾವೆಲ್ಲರೂ ಜವಾಬ್ದಾರರು. ಇನ್ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಲು ಈ ಸಭೆ ಮಾಡಿದ್ದು, 50 ಸಾವಿರ ಅಕೌಂಟ್‌ಗಳು ಎನ್‌ಪಿಎ ಆಗಿವೆ. ಈ ಅಕೌಂಟ್‌ಗಳನ್ನು ಎ, ಬಿ, ಸಿ ಎಂದು ವಿಭಾಗಿಸಿ ಯಾರು ತೊಂದರೆಯಲ್ಲಿದ್ದಾರೆ?, ಕಾರಣ ಏನು? ಎಂಬುದನ್ನು ಪತ್ತೆ ಹಚ್ಚಿ ಪರಿಹರಿಸಲು ಪ್ರಯತ್ನಿಸಲಾಗುವುದು.

ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರ್ಥಿಕ ಸೌಲಭ್ಯ ಹಾಗೂ ಪರಿಹಾರದ ಹಣವನ್ನು ಯಾವುದೇ ಬ್ಯಾಂಕ್‌ಗಳು ಎನ್‌ಪಿಎ (ಅನುತ್ಪಾದಕ ಆಸ್ತಿ) ಅಕೌಂಟ್‌ಗಳಿಂದ ಕಡಿತಗೊಳಿಸಿ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಇನ್ಮುಂದೆ ಪರಿಹಾರ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡರೆ ಅಂತಹ ಬ್ಯಾಂಕ್‌ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿಗಳಿಗೆ ಕಾರ್ಮಿಕ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸೂಚಿಸಿದರು.

ಇಲ್ಲಿಯ ಜಿಪಂ ಸಭಾಂಗಣದಲ್ಲಿ ಸೋಮವಾರ ರೈತ ಆತ್ಮಹತ್ಯೆ ಪ್ರಕರಣಗಳು ಹಾಗೂ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಡವರು ಹಾಗೂ ರೈತರ ಮೇಲೆ ಬ್ಯಾಂಕ್‌ಗಳು ಬ್ರಹ್ಮಾಸ್ತ್ರ ಬಳಸುವುದು ಬೇಡ. ಸಾಲ ತುಂಬಲು ಅವರ ಮೇಲೆ ಒತ್ತಡ ಹಾಕುವುದು ಹಾಗೂ ಎನ್‌ಪಿಎ ಅಕೌಂಟ್‌ಗಳಲ್ಲಿನ ಸರ್ಕಾರದ ಪರಿಹಾರ ಹಣವನ್ನು ರೈತರಿಗೆ ಮಾಹಿತಿ ನೀಡದೇ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು ಯಾವ ನ್ಯಾಯ. ಉದ್ದಿಮೆದಾರರು ಸೇರಿದಂತೆ ಶ್ರೀಮಂತರ ಎನ್‌ಪಿಎ ಅಕೌಂಟ್‌ಗಳಿಗೂ ಬಡವರಿಗೆ ಕಾಡಿದಂತೆಯೇ ಕಾಡುತ್ತೀರಾ? ಎಂದು ಬ್ಯಾಂಕ್‌ಗಳ ವಿರುದ್ಧ ಲಾಡ್‌ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿದ್ದ ಲೀಡ್‌ ಬ್ಯಾಂಕ್‌ ಮುಖ್ಯಸ್ಥ ಬಸವರಾಜು, ನಮ್ಮಲ್ಲಿ ಕೋರ್‌ ಬ್ಯಾಂಕ್‌ ವ್ಯವಸ್ಥೆ ಇದ್ದು, ಎನ್‌ಪಿಎ ಅಕೌಂಟ್‌ಗೆ ಸರ್ಕಾರದ ಪರಿಹಾರ ಸೇರಿದಂತೆ ಯಾವುದೇ ಹಣ ಬಂದರೂ ಅದನ್ನು ಸಾಲಕ್ಕೆ ಹೊಂದಾಣಿಕೆ ಆಗುತ್ತದೆ. ಒಂದು ವೇಳೆ ಖಾತೆದಾರರು ಎನ್‌ಪಿಎದಲ್ಲಿನ ಪರಿಹಾರ ಹಣಕ್ಕೆ ಕೋರಿಕೆ ಸಲ್ಲಿಸಿದರೆ, ಅವರಿಗೆ ಮರಳಿಸಲಾಗುವುದು ಎಂದು ಸಮಾಜಾಯಿಸಿದರು. ಈ ಹೇಳಿಕೆಗೆ ಮತ್ತಷ್ಟು ಸಿಟ್ಟಾದ ಸಚಿವ ಲಾಡ್‌, ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆ ಮಾಡಿಕೊಂಡಿದ್ದು ನೀವು. ಯಾವ ಕಾಯ್ದೆ ಅಡಿ ಸರ್ಕಾರದ ಪರಿಹಾರವನ್ನು ಖಾತಾದಾರರಿಗೆ ಗೊತ್ತಿಲ್ಲದಂತೆ ಪಡೆದುಕೊಳ್ಳುತ್ತೀರಿ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ರಾಜ್ಯಾದ್ಯಂತ ಇರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಇತ್ತೀಚೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾತೆದಾರರ ವಂಶವೃಕ್ಷ ಕೇಳುತ್ತಿರುವುದಕ್ಕೂ ಹಾಗೂ ಕೃಷಿ ಸಾಲಕ್ಕೆ ಸೇವಾ ಶುಲ್ಕ ತೆಗೆದುಕೊಳ್ಳುತ್ತಿರುವುದಕ್ಕೆ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಚಿವ ಲಾಡ್‌, ನಿಯಮಾವಳಿ ಪ್ರಕಾರ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಜತೆಗೆ, ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ ಗಳ ಹಾವಳಿ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು.

ಬೆಳೆವಿಮೆ ಗೊಂದಲ ಪರಿಹರಿಸಿ: ಬೆಳೆ ಹಾನಿಯಾದರೂ ತುಂಬಿದಷ್ಟು ಸಹ ವಿಮೆ ಬರೋದಿಲ್ಲ ಎಂದು ರೈತರಿಂದ ಹೆಚ್ಚಿನ ದೂರುಗಳಿದ್ದು, ಏತಕ್ಕೆ ಹೀಗಾಗುತ್ತಿದೆ ಎಂದು ಪ್ರಶ್ನಿಸಿದ ಸಚಿವರು, ಹೊಲಗಳ ಆಯ್ಕೆ, ಬೆಳೆ ಸಮೀಕ್ಷೆ? ಸೇರಿದಂತೆ ಯಾವ ಪದ್ಧತಿ ಮೂಲಕ ರೈತರಿಗೆ ವಿಮೆ ಕೊಡಲಾಗುತ್ತಿದೆ ಎಂದು ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಜನಪ್ರತಿನಿಧಿಗಳು ಸೇರಿದಂತೆ ರೈತರು ಈ ವಿಷಯದಲ್ಲಿ ಸರಿಯಾದ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ 3.43 ಲಕ್ಷ ಹೆಕ್ಟೇರ್‌ ಅಂದರೆ ಅಂದಾಜು 8.5 ಲಕ್ಷ ಎಕರೆ ಕೃಷಿ ಭೂಮಿ ಇದ್ದು ಬೆಳೆ ವಿಮೆ ಪ್ರತಿಬಾರಿ ಸಮಸ್ಯೆ ಏತಕ್ಕೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜನಾಥ ಅಂತರವಳ್ಳಿ ಸೇರಿದಂತೆ ಬೆಳೆ ಸಮೀಕ್ಷೆಯ ಅಧಿಕಾರಿಗಳ ಉತ್ತರಕ್ಕೆ ಸಮಧಾನ ಆಗದ ಸಚಿವರು, ರೈತರಿಗೆ ಯಾವ ರೀತಿ ಬೆಳೆ ಸಮೀಕ್ಷೆ ಮಾಡಲಾಗುತ್ತದೆ ಎಂಬುದನ್ನು ಪ್ರಚಾರ ಮಾಡಲು ಕಟ್ಟುನಿಟ್ಟಿನ ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಕುಂದಗೋಳ ತಾಲೂಕಿನ ಭಾರದ್ವಾಡ ಗ್ರಾಮದ ರೈತರಿಬ್ಬರ ಆತ್ಮಹತ್ಯೆ ಪ್ರಾಥಮಿಕ ತನಿಖೆಯಿಂದ ಸಾಲದ ಬಾಧೆ ಎಂದು ತಿಳಿದು ಬಂದಿದೆ. ಆದ್ದರಿಂದ ಬ್ಯಾಂಕ್‌ಗಳು ಮಾರ್ಗಸೂಚಿ ಬಿಟ್ಟು ಬೇರೆ ಮಾರ್ಗದಿಂದ ಸಾಲ ವಸೂಲಾತಿಗೆ ಮುಂದಾಗಬೇಡಿ. ಕೃಷಿ ಇಲಾಖೆ ಅಧಿಕಾರಿಗಳು ಸಹ ಇಂತಹ ಸಂಗತಿಗಳ ಬಗ್ಗೆ ಗಮನ ಹರಿಸಿ ಮುನ್ನೆಚ್ಚರಿಕೆ ವಹಿಸಿ ಅಂತಹ ಪ್ರಕರಣಗಳಿದ್ದರೆ ತಮ್ಮ ಗಮನಕ್ಕೆ ತನ್ನಿ. ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆಗಳು ತಲುಪುತ್ತಿದ್ದರೂ ಇಂತಹ ಆತ್ಮಹತ್ಯೆ ಪ್ರಕರಣಗಳು ಆಗಬಾರದು ಎಂದರು.

ರೈತರ ಆತ್ಮಹತ್ಯೆಗೆ ನಾವೇ ಜವಾಬ್ದಾರರು?: ಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮದಲ್ಲಿ ಒಂದೇ ದಿನ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಾವೆಲ್ಲರೂ ಜವಾಬ್ದಾರರು. ಇನ್ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಲು ಈ ಸಭೆ ಮಾಡಿದ್ದು, 50 ಸಾವಿರ ಅಕೌಂಟ್‌ಗಳು ಎನ್‌ಪಿಎ ಆಗಿವೆ. ಈ ಅಕೌಂಟ್‌ಗಳನ್ನು ಎ, ಬಿ, ಸಿ ಎಂದು ವಿಭಾಗಿಸಿ ಯಾರು ತೊಂದರೆಯಲ್ಲಿದ್ದಾರೆ?, ಕಾರಣ ಏನು? ಎಂಬುದನ್ನು ಪತ್ತೆ ಹಚ್ಚಿ ಪರಿಹರಿಸಲು ಪ್ರಯತ್ನಿಸಲಾಗುವುದು. ಜತೆಗೆ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣಗಳ ಬಗ್ಗೆ ಕೃಷಿ ವಿವಿ ಸಹಕಾರದಲ್ಲಿ ವೈಜ್ಞಾನಿಕ ಅಧ್ಯಯನ ಮಾಡುವ ಚಿಂತನೆಯೂ ಇದೆ ಎಂದು ಸಚಿವ ಸಂತೋಷ ಲಾಡ್‌ ತಿಳಿಸಿದರು.

ರೈತರ ಆತ್ಮಹತ್ಯೆ ಪ್ರಕರಣಗಳು: 2020-212ನೇ ಸಾಲಿನಿಂದ 2025 ರ ಜುಲೈ ತಿಂಗಳವರೆಗೆ ಕಳೆದ ಐದು ವರ್ಷಗಳಲ್ಲಿ ಅಳ್ನಾವರ ತಾಲೂಕಿನಲ್ಲಿ ಆರು, ಅಣ್ಣಿಗೇರಿಯಲ್ಲಿ 28, ಧಾರವಾಡ ತಾಲೂಕಿನಲ್ಲಿ 73, ಕಲಘಟಗಿ ತಾಲೂಕಿನಲ್ಲಿ 38, ಹುಬ್ಬಳ್ಳಿಯಲ್ಲಿ 36, ಹುಬ್ಬಳ್ಳಿ ನಗರದಲ್ಲಿ ಮೂರು, ಕುಂದಗೋಳ ತಾಲೂಕಿನಲ್ಲಿ 53 ಮತ್ತು ನವಲಗುಂದ ತಾಲೂಕಿನಲ್ಲಿ 77 ರೈತರ ಆತ್ಮಹತ್ಯೆ ಪ್ರಕರಣಗಳಾಗಿವೆ. ಕಳೆದ ಐದು ವರ್ಷಗಳಲ್ಲಿನ ಕೆಲವು ಪ್ರಕರಣಗಳಲ್ಲಿ ವಾರಸಾ ಪ್ರಮಾಣ ಪತ್ರ, ಆಧಾರ ಕಾರ್ಡ್‌ಲ್ಲಿನ ತಾಂತ್ರಿಕ ದೋಷ, ಬಿಬಿಟಿ ತಂತ್ರಾಂಶದಲ್ಲಿ ದೋಷ ಮತ್ತು ವಿಚರಣಾ ಸಮಿತಿ ತಿರ್ಮಾನಿಸಲು ಬಾಕಿ ಇರುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಸಭೆಯಲ್ಲಿ ಮಾಹಿತಿ ನೀಡಿದರು.ಸಭೆಯಲ್ಲಿ ಕುಂದಗೋಳ ಶಾಸಕ ಎಂ.ಆರ್‌. ಪಾಟೀಲ, ಜಿಪಂ ಸಿಇಓ ಭುವನೇಶ ಪಾಟೀಲ ಇದ್ದರು.