ಡೆಂಘೀ ನಿರ್ಲಕ್ಷಿಸಿದರೆ ವೈದ್ಯರ ವಿರುದ್ಧ ಕ್ರಮ: ಶಾಸಕ ಬಸವಂತಪ್ಪ

| Published : Jul 09 2024, 12:45 AM IST

ಸಾರಾಂಶ

ರಾಜ್ಯದಲ್ಲಿ ಡೆಂಘೀಜ್ವರ ಮರಣ ಮೃದಂಗ ಬಾರಿಸುತ್ತಿದ್ದು, ದಿನೇದಿನೇ ಸೋಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಡೆಂಘೀ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಬೇಕು. ನಿರ್ಲಕ್ಷ್ಯ ಕಂಡುಬಂದರೆ ತಪ್ಪಿತಸ್ಥ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ದಾವಣಗೆರೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಡೆಂಘೀಜ್ವರ ಮರಣ ಮೃದಂಗ ಬಾರಿಸುತ್ತಿದ್ದು, ದಿನೇದಿನೇ ಸೋಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಡೆಂಘೀ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಬೇಕು. ನಿರ್ಲಕ್ಷ್ಯ ಕಂಡುಬಂದರೆ ತಪ್ಪಿತಸ್ಥ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ ನೀಡಿದರು.

ನಗರದ ಚಿಗಟೇರಿ ಆಸ್ಪತ್ರೆಯ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ಡೆಂಘೀ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಸಭೆ ನಡೆಸಿದ ಶಾಸಕರು, ಮಾಯಕೊಂಡ ಕ್ಷೇತ್ರದ ಎಲ್ಲ ಪಿಎಚ್‌ಸಿ ಕೇಂದ್ರಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ಡೆಂಘೀ ಸೋಂಕಿತರ ಸಂಖ್ಯೆ ಉಲ್ಬಣ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕ್ಷೇತ್ರದಲ್ಲಿ ಸೋಂಕಿತಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸೂಚನೆ ನೀಡಿದರು.

ಡೆಂಘೀ ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ ಕೂಡಲೇ ಆ ರೋಗಿಗಳನ್ನು ಆಂಬ್ಯುಲೆನ್ಸ್‌ ಬಳಸಿ ಜಿಲ್ಲಾಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಬೇಕು. ಕ್ಷೇತ್ರದ ಎಲ್ಲ ಪಿಎಚ್‌ಸಿ ಕೇಂದ್ರಗಳಲ್ಲಿ ಲ್ಯಾಬ್‌ಗಳು ಇವೆ. ರಕ್ತದ ಮಾದರಿ ಸಂಗ್ರಹಿಸಿ ಡೆಂಘೀಜ್ವರವೋ ಅಥವಾ ಸಾಮಾನ್ಯ ಜ್ವರವೋ ಎಂಬ ಬಗ್ಗೆ ದೃಢಪಡಿಸಿಕೊಳ್ಳಬೇಕು. ಶಂಕಿತ ಡೆಂಘೀಜ್ವರ ಕಂಡುಬಂದರೆ ಕೂಡಲೇ ಆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಬೇಕು ಎಂದು ವೈದ್ಯರಿಗೆ ತಾಕೀತು ಮಾಡಿದರು.

ಕೆಲವು ಪಿಎಚ್‌ಸಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಔಷಧಿ ದಾಸ್ತಾನು ಮಾಡಲಾಗಿದೆ. ಕೆಲವು ಪಿಎಚ್‌ಸಿಗಳಲ್ಲಿ ಔಷಧಿ ಕೊರತೆ ಕಂಡುಬರುತ್ತದೆ. ಈ ರೀತಿ ಆಗಬಾರದು. ಕೆಲವು ವೈದ್ಯರು ಹೊರಗಡೆ ಔಷಧಿ ತರಲು ಚೀಟಿ ಬರೆದುಕೊಡುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ, ತಾಲೂಕು ವೈದ್ಯಾಧಿಕಾರಿಗಳು ಮತ್ತು ಡಿಎಚ್‌ಒ ಎಲ್ಲ ಪಿಎಚ್‌ಸಿಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ ಇವುಗಳಿಗೆ ಕಡಿವಾಣ ಹಾಕಬೇಕೆಂದು ತಾಕೀತು ಮಾಡಿದರು.

ಕ್ಷೇತ್ರದ ವ್ಯಾಪ್ತಿ ಕೆಲವು ಗ್ರಾಮಗಳಲ್ಲಿ ಕೋಳಿ ಫಾರಂಗಳಿಂದ ನೊಣಗಳ ಹಾವಳಿ ಮಿತಿಮೀರಿ, ಗ್ರಾಮಸ್ಥರಲ್ಲಿ ವಿವಿಧ ರೋಗಗಳು ಕಾಡುತ್ತಿವೆ. ಆದ್ದರಿಂದ ಕೋಳಿ ಫಾರಂ ಮಾಲೀಕರು ಸ್ವಚ್ಛತೆ ಬಗ್ಗೆ ನಿಗಾವಹಿಸಲು ಸೂಚನೆ ನೀಡಬೇಕು. ಪಿಎಚ್‌ಸಿಗಳಲ್ಲಿ ವೈದ್ಯರ ಕೊರತೆ ಇದ್ದರೆ ಕೂಡಲೇ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿದೆ. ಸಂಬಂಧಪಟ್ಟವರಿಗೆ ಸ್ವಚ್ಛತೆಗೊಳಿಸಲು ತಿಳಿಸಲು ವೈದ್ಯಾಧಿಕಾರಿಗಳಿಗೆ ಹೇಳಿದರು.

ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ದೇವರಾಜ ಪಟ್ಟೇಗ, ಟಿಎಚ್‌ಒ ಕಚೇರಿ ಮೇಲ್ವಿಚಾರಕ ಎಚ್.ಉಮಾಪತಿ, ಡಾ.ಮಹೇಶ್, ಡಾ.ಮಂಜುನಾಥ್, ಡಾ.ರುದ್ರೇಶ್, ಡಾ.ಹೇಮಂತ್‌ಕುಮಾರ್, ಡಾ.ಮಂಜುನಾಥ ಆರ್ಜಿಹಳ್ಳಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟಚಲ ಕುಮಾರ್, ಕಾರ್ಯಕ್ರಮ ವ್ಯವಸ್ಥಾಪಕ ರವಿ ಹಾಗೂ ತಾಲೂಕಿನ ಎಲ್ಲ ವೈದ್ಯಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.

ಇದೇ ವೇಳೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ದಾಖಲಾದ ಡೆಂಘೀ ಸೋಂಕಿತರನ್ನು ಭೇಟಿಯಾದ ಶಾಸಕರು ಆರೋಗ್ಯ ವಿಚಾರಿಸಿದರು.

- - -

ಬಾಕ್ಸ್‌* ನಿರ್ಲಕ್ಷ್ಯ ಕಂಡುಬಂದರೆ ಶಿಸ್ತು ಕ್ರಮ: ಶಾಸಕ ಕ್ಷೇತ್ರ ವ್ಯಾಪ್ತಿಯ ಕೆಲವು ಪಿಎಚ್‌ಸಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭ ಕೆಲವು ಅವ್ಯವಸ್ಥೆ ಕಂಡುಬಂದಿವೆ. ವೈದ್ಯರು, ಲ್ಯಾಬ್ ಟೆಕ್ಸನೀಷಿಯನ್‌ಗಳು, ನರ್ಸ್‌ಗಳು ಸರಿಯಾಗಿ ಕೆಲಸ ನಿರ್ವಹಿಸದಿರುವುದು ಕಂಡುಬಂದಿದೆ. ಬೆಳಗ್ಗೆ ಬಂದು ಮಧ್ಯಾಹ್ನದ ವೇಳೆಗೆ ಮನೆಗಳಿಗೆ ಹೋಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಕೆಲವೆಡೆ ತಾವು ಭೇಟಿ ನೀಡಿದಾಗ ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ಜನರ ಜೀವದ ಜೊತೆ ಚೆಲ್ಲಾಟ ಆಡಲು ಬಿಡುವುದಿಲ್ಲ. ನಿರ್ಲಕ್ಷ್ಯ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಸಿದರು.

- - - -8ಕೆಡಿವಿಜಿ38ಃ:

ದಾವಣಗೆರೆ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿದರು.