ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ದೇಶದಾದ್ಯಂತ ಜುಲೈ 1ರಿಂದ ಜಾರಿಗೆ ಬಂದಿರುವ ಹೊಸ ಕಾನೂನುಗಳು ಸಂವಿಧಾನ ವಿರೋಧಿಯಾಗಿವೆ.ಅದ್ದರಿಂದ ಅವುಗಳನ್ನು ರದ್ದುಗೊಳಿಸಬೇಕು ಎಂದು ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಹೆಸರಿನಲ್ಲಿರುವ ಕಾನೂನುಗಳನ್ನು ರದ್ದು ಪಡಿಸಬೇಕು ಎಂದರು.ಅಪರಾಧ ನ್ಯಾಯಕ್ಕೆ ಸಂಬಂಧಿಸಿದ ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯಾಧಾರ ಅಧಿನಿಯಮಗಳನ್ನು ಬದಲಿಸಿ, ಅವುಗಳ ಸ್ಥಾನದಲ್ಲಿ ಈ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇವು ಪೊಲೀಸ್ ಹಾಗೂ ಆಡಳಿತಾರೂಢರಿಗೆ ಪೂರಕವಾಗಿದ್ದು, ದುರುಪಯೋಗಕ್ಕೆ ಹೆಚ್ಚಿನ ಅವಕಾಶ ಕೊಡಲಿವೆ ಎಂದು ಅನುಮಾನ ವ್ಯಕ್ತಪಡಿಸಿದರು.
ಅಭಿವ್ಯಕ್ತಿ ಹಾಗೂ ಪ್ರತಿಭಟನಾ ಸ್ವಾತಂತ್ರ್ಯವನ್ನು ಹೊಸ ಕಾನೂನು ಅಪರಾಧವೆಂಬಂತೆ ಪರಿಗಣಿಸಿ ಶಿಕ್ಷಿಸಲಿದೆ. ಸಾಮಾನ್ಯ ನಾಗರಿಕರು, ಸಂತ್ರಸ್ತರು, ಶೋಷಿತರು, ಮಾನವಹಕ್ಕುಗಳು, ರೈತಪರ ಹೋರಾಟಗಾರರು ನ್ಯಾಯದಿಂದ ವಂಚಿತರಾಗಲಿದ್ದಾರೆ. ಹೊಸ ಕ್ರಿಮಿನಲ್ ಕಾಯ್ದೆಗಳು ದೇಶದಲ್ಲಿ ಆರಾಜಕತೆ ಸೃಷ್ಟಿಸಲಿವೆ ಎಂದು ದೂರಿದರು.ದೇಶದ ಗತಿಯನ್ನು ಬದಲಿಸುವ ಹೊಸ ಕಾನೂನಿನ ಕುರಿತು ವ್ಯಾಪಕ ಚರ್ಚೆಗೆ ಅವಕಾಶ ಕಲ್ಪಿಸದೆ, ಏಕಾಏಕಿ ಜಾರಿಗೆ ತರಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಸುಪ್ರೀಂಕೋರ್ಟ್, ಹೈಕೋರ್ಟ್, ಸಾಲಿಸಿಟರಲ್ ಜನರಲ್, ಅಟಾರ್ನಿ ಜನರಲ್, ಖ್ಯಾತ ವಕೀಲರ ಅಭಿಪ್ರಾಯ ಸಂಗ್ರಹಿಸದೇ, ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದೇ ತಮಗೆ ಬೇಕಾದವರ ಸಮಿತಿ ನೇಮಿಸಿ ಹೊಸ ಕಾನೂನು ಜಾರಿಗೆ ತಂದಿದ್ದಾರೆ. ಆ ಮೂಲಕ, ಮನುಧರ್ಮ ಶಾಸ್ತ್ರವನ್ನು ಪರೋಕ್ಷವಾಗಿ ಇದರೊಳಗೆ ತೂರಿಸಿದ್ದಾರೆ ಎಂದು ಮಲ್ಲಿಕಾರ್ಜುನ್ ಆರೋಪಿಸಿದರು
ಅಶಕ್ತರಿಗೆ, ಶೋಷಿತರಿಗೆ ಕಾನೂನು ರಕ್ಷಣೆ ಮತ್ತು ನ್ಯಾಯ ಮರೀಚಿಕೆಯಾಗಲಿದೆ. ದೇಶದ್ರೋಹ ಕಾನೂನಿನ ಸೆಕ್ಷನ್ ಮತ್ತು ಹೆಸರು ಬದಲಾಯಿಸಲಾಗಿದ್ದು, ಸರ್ಕಾರದ ವಿರುದ್ಧದ ಟೀಕೆ ಮತ್ತು ಆಗ್ರಹಗಳಿಗೂ ಸಹ ನ್ಯಾಯ ಸಂಹಿತೆಯಲ್ಲಿ ಅವಕಾಶ ನೀಡಲಾಗಿದೆ. ಇದು ಸಂವಿಧಾನದ ಕಲಂ 14 ಮತ್ತು 19ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು.ಟಾಡಾ, ಪೋಟಾ, ಕೋಕಾ ಸೇರಿದಂತೆ ಕೆಲ ಮಾರಕ ಕಾಯ್ದೆಗಳನ್ನು ಸಾಮಾನ್ಯಗೊಳಿಸಿ ದಲಿತ, ರೈತಪರ, ಮಾನವಹಕ್ಕುಗಳ ಪರವಾಗಿ ಹೋರಾಡುವವರನ್ನು ಬಂಧಿಸಿ, ಅಪರಾಧಿಗಳಂತೆ ಜೈಲಿನಲ್ಲಿಡಲು ಅವಕಾಶ ಕಲ್ಪಿಸಲಾಗಿದೆ. ಬಹುತ್ವ ವ್ಯವಸ್ಥೆಗೆ ಹಾಗೂ ದೇಶದ ಸಮಗ್ರತೆಗೆ ಮಾರಕವಾಗಿರುವ ಕಾನೂನನ್ನು ಕೂಡಲೇ ರದ್ದುಪಡಿಸಬೇಕು ಎಂದು ಮಲ್ಲಿಕಾರ್ಜುನ್ ಆಗ್ರಹಿಸಿದರು,
ಸುದ್ದಿಗೋಷ್ಠಿಯಲ್ಲಿ ಸಾತನೂರು ಶಿವಮಾದು, ನಿಂಗರಾಜು, ಮುನಿರಾಜು ಹಾಗೂ ಹರಿಹರ ಬಸವರಾಜು ಇದ್ದರು.