ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಾಂಗ್ರೆಸ್ ಪಕ್ಷದ ಗಮನಕ್ಕೆ ಬಾರದೆ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಾವೆಲ್ಲರೂ ಕಾಂಗ್ರೆಸ್ಸಿನವರೇ ಎಂಬಂತೆ ಬಿಂಬಿಸುವ ರೂಪದ ಮೆರವಣಿಗೆ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಾಗಿದೆ. ಹುಡಾ ಅಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು ಎಂಬುದನ್ನು ಸಿಎಂ ತೀರ್ಮಾನ ಮಾಡಲಿದ್ದು, ಅದಕ್ಕೆ ಬದ್ಧರಾಗಿದ್ದೇವೆ ಎಂದು ಕೆಪಿಸಿಸಿ ಸದಸ್ಯ ಸಲೀಂ ಅಬ್ದುಲ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಥವಾ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಗೆ ಯಾವುದೇ ಮಾಹಿತಿ ನೀಡದೆ ಕೆಲವು ವ್ಯಕ್ತಿಗಳು ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಎಂದು ಹೇಳಿಕೊಂಡು ಯಾರೇ ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಿಗೆ ಸ್ಥಾನಮಾನ ಕೇಳದೆ ಒಬ್ಬ ಖಾಸಗಿ ವ್ಯಕ್ತಿಯ ಪರವಾಗಿ ಪ್ರತಿಭಟನೆ ಪಕ್ಷಕ್ಕೆ ಹಾನಿ ಉಂಟುಮಾಡುತ್ತದೆ ಇದನ್ನು ಪಕ್ಷ ಒಪ್ಪುವಂತದ್ದಲ್ಲ ಎಂದರು.
ಕೆಲವು ಕೂಲಿ ಕಾರ್ಮಿಕರಿಗೆ ಆಮಿಷ ಒಡ್ಡಿ ಜನರನ್ನು ಕರೆತಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿದ್ದು, ನಂತರದಲ್ಲಿ ಹಾಸನ ನಗರ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆಗೆ ಭಾಗವಹಿಸಲು ಬಂದಿದ್ದ ಕೂಲಿ ಕಾರ್ಮಿಕರಿಗೆ ಊಟ ತಿಂಡಿ ಮತ್ತು ಸಂಬಳ ನೀಡಲಿಲ್ಲ ಎಂಬ ಬಗ್ಗೆ ವರದಿಯಾಗಿದ್ದು, ಆ ಸಮಯದಲ್ಲಿ ಸದರಿ ಜನರಿಗೆ ಪೊಲೀಸರು ಲಾಟಿ ಏಟು ನೀಡಿರುವುದಾಗಿಯೂ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ ಎಂದು ದೂರಿದರು. "ಇದು ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುವ ಉದ್ದೇಶದಿಂದ ಪಕ್ಷಕ್ಕೆ ಸಂಬಂಧ ಇಲ್ಲದೆ ಇರುವ ಕೆಲವು ಶಕ್ತಿಗಳು ಆಟ ಆಡುತ್ತಿವೆ ". ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದು ಕೊಂಡವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಎಲ್ಲಾ ವರ್ಗದ ಜನರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಪಕ್ಷ ಜಿಲ್ಲಾಧ್ಯಕ್ಷರ ಮೂಲಕ ಮಾನ್ಯ ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು, ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ ಸೂಕ್ತ ಸಮಯದಲ್ಲಿ ಎಲ್ಲ ವರ್ಗಕ್ಕೂ ಸ್ಥಾನ ಮಾನ ಸಿಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ. ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎನ್ನುವ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರಿಗೆ ನಾವೆಲ್ಲ ಅಧಿಕಾರ ನೀಡಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಲು ಇಚ್ಚಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಸನ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಬ್ದುಲ್ ಕಯುಮ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್, ಇತರರು ಉಪಸ್ಥಿತರಿದ್ದರು.